ADVERTISEMENT

ಸ್ಮಾರ್ಟ್ ಸಿಟಿ ಸರ್ವೆಲನ್ಸ್ ವ್ಯವಸ್ಥೆ: ಹುಷಾರ್, ಮನೆಗೇ ಬರುತ್ತೆ ನೋಟಿಸ್!

ಪೊಲೀಸ್ ಇಲಾಖೆ ಯೋಜನೆ

ಸುಭಾಸ ಎಸ್.ಮಂಗಳೂರ
Published 11 ಡಿಸೆಂಬರ್ 2019, 19:45 IST
Last Updated 11 ಡಿಸೆಂಬರ್ 2019, 19:45 IST
ಪ್ರಕಾಶ್ ನಿಕ್ಕಂ
ಪ್ರಕಾಶ್ ನಿಕ್ಕಂ   

ವಿಜಯಪುರ: ವಾಹನ ಸವಾರರೇ ಹುಷಾರ್. ಇನ್ನು ಮುಂದೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ನೇರವಾಗಿ ಮನೆಗೇ ನೋಟಿಸ್ ಬರುತ್ತದೆ!

ಹೌದು. ಇಂಥದೊಂದು ವ್ಯವಸ್ಥೆಯನ್ನು ನಗರದಲ್ಲಿ ಜಾರಿಗೆ ತರಲು ಜಿಲ್ಲಾ ಪೊಲೀಸ್ ಇಲಾಖೆ ಯೋಜನೆಯನ್ನು ಸಿದ್ಧಪಡಿಸಿದೆ. ನಗರೋತ್ಥಾನ ಯೋಜನೆಯಡಿ ₹ 5.25 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಸರ್ವೆಲನ್ಸ್‌ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ. ಇಷ್ಟೇ ಅಲ್ಲ, ಈ ಕುರಿತು ವಿವರವಾದ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿದೆ.

ಈ ಯೋಜನೆಯಡಿ ಸಿಟಿ ಕಮಾಂಡೊ ಸೆಂಟರ್ ಅನ್ನು ಪ್ರಾರಂಭಿಸಲಾಗುತ್ತದೆ. ನಗರದ 45 ಕಡೆ ಅತ್ಯಾಧುನಿಕ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಈ ಕೇಂದ್ರದಿಂದಲೇ ಸಂಚಾರ ದಟ್ಟಣೆ, ನಿಯಮ ಉಲ್ಲಂಘನೆ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.

ADVERTISEMENT

ಅತ್ಯಾಧುನಿಕ ಸಿ.ಸಿ ಟಿ.ವಿ ಕ್ಯಾಮೆರಾಗಳು ವಾಹನದ ನಂಬರ್ ಪ್ಲೇಟ್‌ ಹಾಗೂ ನಿಯಮ ಉಲ್ಲಂಘನೆಯ ಫೋಟೊವನ್ನು ನಿಖರವಾಗಿ ಕೊಡುತ್ತವೆ. ಇಷ್ಟೇ ಅಲ್ಲ, ಎಷ್ಟೇ ಕತ್ತಲಿದ್ದರೂ ಕೂಡ ವಾಹನ ಸಮೇತ ನಂಬರ್ ಪ್ಲೇಟ್‌ನ ಮಾಹಿತಿಯನ್ನು ಈ ಕ್ಯಾಮೆರಾಗಳು ಸೆರೆ ಹಿಡಿಯುತ್ತವೆ. ಪ್ರಾದೇಶಿಕ ಸಾರಿಗೆ ಇಲಾಖೆ (ಆರ್‌ಟಿಒ) ಅಧಿಕಾರಿಗಳ ನೆರವಿನೊಂದಿಗೆ, ನಿಯಮ ಉಲ್ಲಂಘಿಸಿದ ವಾಹನದ ಮಾಲೀಕರ ವಿಳಾಸ ಪಡೆದುಕೊಂಡು, ನೇರವಾಗಿ ಅವರ ಮನೆಗಳಿಗೆ ನೋಟಿಸ್ ಅನ್ನು ಕಳುಹಿಸುವ ವ್ಯವಸ್ಥೆ ಇದರಲ್ಲಿದೆ.

ಕೃತಕ ಬುದ್ಧಿಮತ್ತೆ: ಈ ವ್ಯವಸ್ಥೆಯಡಿ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌) ಇದ್ದು, ಇದು ಸರಗಳ್ಳರನ್ನು ಬಂಧಿಸಲು ನೆರವಾಗಲಿದೆ. ಅನುಮಾನಾಸ್ಪದ ವ್ಯಕ್ತಿಗಳು, ಸರಗಳ್ಳರು, ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಕಳ್ಳರ ಭಾವಚಿತ್ರಗಳನ್ನು ಈ ವ್ಯವಸ್ಥೆಯಡಿ ದಾಖಲು ಮಾಡಲಾಗುತ್ತದೆ. ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗುವ ಕ್ಯಾಮೆರಾಗಳು ಈ ವ್ಯಕ್ತಿಗಳ ಚಹರೆಯನ್ನು ಪತ್ತೆ ಹಚ್ಚಿ, ತಕ್ಷಣವೇ ಸಂಬಂಧಿಸಿದ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಲಿವೆ.

‘ಕೆಲವು ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದರೆ, ಇನ್ನು ಕೆಲವು ಕಡೆ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಇರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಕಮಾಂಡೊ ಸೆಂಟರ್‌ನಿಂದಲೇ ವಾಹನ ಸವಾರರಿಗೆ ಮಾಹಿತಿ ಕೊಡಬಹುದಾಗಿದೆ. ಪ್ರತಿಯೊಂದು ವೃತ್ತ, ಟ್ರ್ಯಾಫಿಕ್ ಸಿಗ್ನಲ್‌ಗಳಲ್ಲಿ ಸ್ಪೀಕರ್ ಅಳವಡಿಸಲಾಗುತ್ತಿದ್ದು, ಅದರ ಮೂಲಕ ಸಂಚಾರ ಮಾಹಿತಿ ನೀಡಲು ಅನುಕೂಲವಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.