ADVERTISEMENT

ಬಲಿಷ್ಠ ಭಾರತ ನಿರ್ಮಿಸಲು ಶ್ರಮಿಸಿ: ಸ್ಪೀಕರ್ ಯು.ಟಿ.ಖಾದರ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2024, 15:34 IST
Last Updated 29 ಸೆಪ್ಟೆಂಬರ್ 2024, 15:34 IST
ಬಸವನಬಾಗೇವಾಡಿಯ ಬಸವ ಭವನದಲ್ಲಿ ತಾಜ್‌ ಸೋಷಿಯಲ್ ಗ್ರೂಪ್‌ ಹಮ್ಮಿಕೊಂಡಿದ್ದ ಸೌಹಾರ್ದ ಸಮಾವೇಶದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ ಮಾತನಾಡಿದರು
ಬಸವನಬಾಗೇವಾಡಿಯ ಬಸವ ಭವನದಲ್ಲಿ ತಾಜ್‌ ಸೋಷಿಯಲ್ ಗ್ರೂಪ್‌ ಹಮ್ಮಿಕೊಂಡಿದ್ದ ಸೌಹಾರ್ದ ಸಮಾವೇಶದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ ಮಾತನಾಡಿದರು   

ಬಸವನಬಾಗೇವಾಡಿ: ‘ಒಳ್ಳೆಯ ಆಚಾರ, ವಿಚಾರ ಸಮಾಜಕ್ಕೆ ಮಾದರಿಯಾಗುವ ಗುಣವನ್ನು ದೇವರು ಪ್ರತಿಯೊಬ್ಬರಿಗೂ ನೀಡಿದ್ದಾನೆ. ತಾಳ್ಮೆ, ಸಹನೆಯಿಂದ ವರ್ತಿಸುವುದರ ಜೊತೆಗೆ ಆಯುಷ್ಯವನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸಿಕೊಳ್ಳಬೇಕು’ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ ಹೇಳಿದರು.

ಪಟ್ಟಣದ ಬಸವ ಭವನದಲ್ಲಿ ತಾಜ್‌ ಸೋಷಿಯಲ್ ಗ್ರೂಪ್‌ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಸೌಹಾರ್ದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಕೊಂಕು ಮಾತಿಗೆ ಗಮನಕೊಡದೆ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಮುನ್ನಡೆದಾಗ ಕೆಟ್ಟ ಆಲೋಚನೆಗಳು ಹತ್ತಿರಕ್ಕೂ ಸುಳಿಯದೇ ಸಮಾಜದಲ್ಲಿ ಭಾವೈಕ್ಯದ ವಾತಾವರಣ ನಿರ್ಮಾಣ ತಾನಾಗಿಯೇ ಆಗುವುದರಲ್ಲಿ ಸಂಶಯವಿಲ್ಲ’ ಎಂದು ಹೇಳಿದರು.

ADVERTISEMENT

ಜನರು ಜಾತಿ, ಮತ, ಪಂಥ ಏಣಿಸದೆ ಸಹೋದರತೆ, ಪ್ರೀತಿ, ವಿಶ್ವಾಸದಿಂದ ಒಂದೇ ತಾಯಿಯ ಮಕ್ಕಳಾಗಿ ಒಗ್ಗಟ್ಟಿನಿಂದ ಬದುಕುವುದರೊಂದಿಗೆ ಬಲಿಷ್ಠ ಭಾರತ ನಿರ್ಮಾಣ ಮಾಡುವಲ್ಲಿ ಶ್ರಮಿಸಬೇಕಿದೆ. ಪ್ರತಿಯೊಬ್ಬರು ಶರಣ, ಸಂತರ ಪ್ರವಾದಿಗಳ ಸಂದೇಶ ನಡವಳಿಕೆಗಳನ್ನು ಮೈಗೂಡಿಸಿಕೊಂಡು ಬದುಕು ಕಟ್ಟಿಕೊಳ್ಳುವಂತಾಗಬೇಕು’ ಎಂದು ಹೇಳಿದರು.

ಕೆಪಿಸಿಸಿ ವಕ್ತಾರ ನೀಕಿತರಾಜ ಮೌರ್ಯ ಮಾತನಾಡಿ, ‘ಹಿಂದು– ಮುಸ್ಲಿಂ ಸಮಾಜಗಳ ಮಧ್ಯೆ ಗೋಡೆ ಕಟ್ಟುವ ಕೆಲಸವಾಗಬಾರದು. ಒಂದೂ ಗೂಡಿಸುವ ಕೆಲಸವಾಗಬೇಕು. ಸಮಾಜವನ್ನು ಒಡೆಯುವುದು ಸುಲಭ ಕಟ್ಟುವುದು ಬಲು ಕಷ್ಟ’ ಎಂದು ಹೇಳಿದರು.

ಸ್ಥಳೀಯ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ತನ್ನನ್ನು ತಾನು
ಅರಿತುಕೊಂಡು ನಡೆದಾಗ ಮಾತ್ರ ಜೀವನ ಪಾವನ. ಇಂದಿನ ದಿನಮಾನಗಳಲ್ಲಿ ಜನರು ಧರ್ಮಗಳನ್ನು ಮರೆತು, ನಾವೆಲ್ಲ ಭಾರತೀಯರೆಂದು ಬದುಕಬೇಕಾಗಿದೆ. ಮಾನವ ಕುಲವನ್ನು ರಕ್ಷಿಸುವ ಕಾರ್ಯವಾಗಬೇಕಾಗಿದೆ’ ಎಂದರು.

ಶಿರೂರಿನ ಮಹಾಂತೇಶ್ವರ ತೀರ್ಥದ ಬಸವಲಿಂಗ ಸ್ವಾಮೀಜಿ, ಭಟ್ಕಳದ ಮೌಲಾನಾ ಅಬ್ದುಲ್ ಅಲೀಮ ನದ್ವಿ, ಮಂಗಳೂರಿನ ರಫೀಯುದ್ದಿನ್ ಕದ್ರೋಳಿ, ನಂದಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಸತ್ಯಜೀತ ಪಾಟೀಲ, ಎಂ.ಡಿ.ಬಳಗಾನೂರ ಮಾತನಾಡಿದರು.

ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ರಾಜ್ಯ ಸಹಕಾರಿ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಸ್ಥಳಿಯ ಜಾಮೀಯಾ ಮಸ್ಜಿದ ಇಮಾಮ ಮಹ್ಮದಅಲಿ ಮೀಲ್ಲಿ, ಕಲಬುರ್ಗಿಯ ಇಲಿಯಾಸ ಸೇಠ ಬಾಗವಾನ, ನಜೀರ ಕೊಂಡಗೂಳಿ, ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.