ADVERTISEMENT

ವಿಜಯಪುರ | ದೇಗುಲಕ್ಕೆ ಕಲ್ಲು; ಆರೋಪಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿ: ಯತ್ನಾಳ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 15:34 IST
Last Updated 7 ಅಕ್ಟೋಬರ್ 2024, 15:34 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ವಿಜಯಪುರ: ನಗರದ ಗಣಪತಿ ಚೌಕ್‌ನಲ್ಲಿನ ಗಣೇಶ ದೇವಸ್ಥಾನದ ಗಾಜಿಗೆ ಕಲ್ಲೆಸೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧಿತ ಆರೋಪಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿ, ಈ ಕೃತ್ಯದ ಹಿಂದಿರುವ ಶಕ್ತಿಗಳನ್ನು ಬಯಲಿಗೆ ಎಳೆಯಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ನಗರದಲ್ಲಿ ಶಾಂತಿ ಕದಡಬೇಕು, ಕೋಮು ಗಲಭೆ ಸೃಷ್ಟಿಸಲೆಂದೆ ನಗರದ ಗಣಪತಿ ಚೌಕ್‌ನಲ್ಲಿನ ಹಿಂದೂಗಳ ಆರಾಧ್ಯದೈವ ಗಣೇಶ ದೇವಸ್ಥಾನಕ್ಕೆ ಕಲ್ಲೆಸೆದು, ಗಾಜು ಒಡೆದು ಹಾಕಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿರುವುದು ಖಂಡನೀಯ.

ದೇವಸ್ಥಾನಕ್ಕೆ ಕಲ್ಲೆಸೆದ ಆರೋಪಿಗಳು ಅಪ್ರಾಪ್ತರಾಗಿದ್ದರೆ, ಇವರ ಹಿಂದಿನ ಶಕ್ತಿಗಳು ಯಾವವು? ರಾಜಕೀಯ ವ್ಯಕ್ತಿಗಳ ಕೈವಾಡವಿದೆಯೇ? ಗಲಭೆ ಸೃಷ್ಟಿಸುವ ಸಂಘಟನೆಗಳ ಕುಮ್ಮಕ್ಕು ಇದೆಯೇ? ಸತ್ಯ ಹೊರ ಬರಬೇಕೆಂದರೆ, ಬಂಧಿತ ಆರೋಪಿಗಳನ್ನು ಮಂಪರು ಪರೀಕ್ಷೆ ನಡೆಸಬೇಕು. ಇವರ ಸಂಬಂಧಿಗಳು, ಗೆಳೆಯರು ಮತ್ತು ಇವರು ವಾಸಿಸುವ ಟಕ್ಕೆಯಲ್ಲಿ ಯಾರ ಯಾರ ಜೊತೆ ಸಂಪರ್ಕ ಹೊಂದಿದ್ದಾರೋ ಎಲ್ಲರ ಮೊಬೈಲ್ ಕಾಲ್ ತಪಾಸಣೆ ನಡೆಸಬೇಕು. ಯಾರಾದರೂ ನಗರ ತೊರೆದಿದ್ದಾರೆಯೇ? ಎಲ್ಲರನ್ನು ಸಮಗ್ರವಾಗಿ ತನಿಖೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ವಿಜಯಪುರ ನಗರದಲ್ಲಿ ಶಾಂತಿ, ನೆಮ್ಮದಿ, ಕಾನೂನು ಸುವ್ಯವಸ್ಥೆ ಕಾಪಾಡಲು ಗಣಪತಿ ಚೌಕ್ ದಲ್ಲಿರುವ ಗಣೇಶ ದೇವಸ್ಥಾನಕ್ಕೆ ಕಲ್ಲೆಸೆದು, ಗಾಜು ಒಡೆದು ಹಾಕಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.