ವಿಜಯಪುರ: ತಾಳ್ಮೆಯ ಕೊರತೆಯಿಂದಾಗಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಮನೊರೋಗ ತಜ್ಞ ಡಾ.ಸಂತೋಷ ರಾಮದುರ್ಗ ಹೇಳಿದರು.
ನಗರದ ಬಿಎಲ್‌ಡಿಇ ಸಂಸ್ಥೆಯ ಬಿ.ಎಂ. ಪಾಟೀಲ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ವಿಶ್ವ ಆತ್ಮಹತ್ಯೆ ತಡೆ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಾಲೇಜಿನ ಯುವಕ ಮತ್ತು ಯುವತಿಯರಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ತಾಳ್ಮೆಯ ಕೊರತೆ ಇದಕ್ಕೆ ಪ್ರಮುಖ ಕಾರಣ. ಯಾವ ವ್ಯಕ್ತಿ ಆತ್ಮಹತ್ಯೆಗಳ ಬಗ್ಗೆ ಹೆಚ್ಚು ಮಾತನಾಡುತ್ತಿರುತ್ತಾರೋ ಅಂಥವರ ಬಗ್ಗೆ ನಾವು ತೀವ್ರ ನಿಗಾ ವಹಿಸಬೇಕು. ಅವರಿಗೆ ಸಂದರ್ಭಕ್ಕನುಗುಣವಾಗಿ ಸಮಾಲೋಚನೆ ನಡೆಸಿ ಸಲಹೆ ಸೂಚನೆ ನೀಡಬೇಕು’ ಎಂದರು.
‘ಯಾವುದೇ ವ್ಯಕ್ತಿಯಲ್ಲಿ ಆತ್ಮಹತ್ಯೆಯ ಗುಣಲಕ್ಷಣಗಳು ಕಂಡು ಬಂದರೆ ತಕ್ಷಣವೇ ಅವರು ಮಾನಸಿಕ ರೋಗ ತಜ್ಞರನ್ನು ಸಂಪರ್ಕಿಸುವುದು ಮುಖ್ಯ. ಮಾನಸಿಕ ಆರೋಗ್ಯ ಕೂಡ ಇತರ ಆರೋಗ್ಯ ಸಮಸ್ಯೆಗಳಂತೆ ಇರುತ್ತದೆ. ಹೀಗಾಗಿ ಯಾವುದೇ ರೀತಿಯ ಸಾಮಾಜಿಕ ವಿಷಯಗಳಿಗೆ ತಲೆಕೆಡಿಸಿಕೊಳ್ಳದೆ ನೇರವಾಗಿ ಮಾನಸಿಕ ರೋಗ ತಜ್ಞರನ್ನು ಸಂಪರ್ಕಿಸುವ ಮೂಲಕ ತಮ್ಮಲ್ಲಿರುವ ಆತ್ಮಹತ್ಯೆ ಸಂಬಂಧಿತ ವಿಷಯಗಳ ಕುರಿತು ಗುಪ್ತ ಸಮಾಲೋಚನೆ ಮಾಡುವ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳ ಬಹುದು’ ಎಂದರು.
ಡಾ.ಗೌತಮಿ ಮಾತನಾಡಿ, ‘ವಿಶ್ವದಾದ್ಯಂತ ಪ್ರತಿವರ್ಷ ಸುಮಾರು 7 ಲಕ್ಷ ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅವರಲ್ಲಿ 1.60 ಲಕ್ಷ ಜನ ಭಾರತದಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಾವೆಲ್ಲರೂ ಆತ್ಮಹತ್ಯೆಯ ಕುರಿತು ಮುಕ್ತವಾಗಿ ಚರ್ಚಿಸುವುದರಿಂದ ಇಂಥ ಪ್ರಕರಣಗಳನ್ನು ಕಡಿಮೆ ಮಾಡಬಹುದಾಗಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ.ಶಾಲ್ಮೊನ್ ಚೊಪಡೆ, ಮನೋರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ನಜೀರ್ ಬಳಗಾರ, ಡಾ. ನಿಶಾಂತ್, ಸೌರಬ್ ಬಿರಾದಾರ, ನವೀನ ಚಿಟ್ಟಿ, ಮಹೇಂದ್ರಕುಮಾರ, ರಿಯಾಜ್, ಪೈಜಲ್, ಶಿಲ್ಪಾ ಬಳಗಾರ, ಅಪ್ಪನಗೌಡ ಪಾಟೀಲ, ಡಾ. ಅಮಿತಕುಮಾರ ಬಿರಾದಾರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.