ADVERTISEMENT

ತಿಕೋಟಾ: ಸೂರ್ಯನ ಸುತ್ತುವರಿದ ಉಂಗುರಾಕಾರ ವಿಸ್ಮಯ

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 7:14 IST
Last Updated 20 ಜೂನ್ 2024, 7:14 IST
ತಿಕೋಟಾ ತಾಲ್ಲೂಕಿನಲ್ಲಿ ಗ್ರಾಮಗಳಲ್ಲಿ ಬುಧವಾರ ಮದ್ಯಾಹ್ನ ಕಂಡು ಬಂದ ಸೂರ್ಯನ ಸುತ್ತುವರೆದ ಉಂಗುರಾಕಾರದ ಕಾಮನಬಿಲ್ಲಿನ ವಿಸ್ಮಯ.
ತಿಕೋಟಾ ತಾಲ್ಲೂಕಿನಲ್ಲಿ ಗ್ರಾಮಗಳಲ್ಲಿ ಬುಧವಾರ ಮದ್ಯಾಹ್ನ ಕಂಡು ಬಂದ ಸೂರ್ಯನ ಸುತ್ತುವರೆದ ಉಂಗುರಾಕಾರದ ಕಾಮನಬಿಲ್ಲಿನ ವಿಸ್ಮಯ.   

ತಿಕೋಟಾ: ನಭೋಮಂಡಲದಲ್ಲಿ ಬುಧವಾರ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ತಾಲ್ಲೂಕಿನ ಘೋಣಸಗಿ, ಕಳ್ಳಕವಟಗಿ ಬಿಜ್ಜರಗಿ, ಬಾಬಾನಗರ, ಸೋಮದೇವರಹಟ್ಟಿ, ಹುಬನೂರ, ಟಕ್ಕಳಕಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಮೋಡಗಳ ಮಧ್ಯೆಯ ಸೂರ್ಯನ ಸುತ್ತಲೂ ವೃತ್ತಾಕಾರವಾಗಿ ಕಾಮನಬಿಲ್ಲಿನಂತೆ ಉಂಗುರರಾಕಾರ ಕಾಣಿಸಿಕೊಂಡಿದ್ದು ಪ್ರಕೃತಿ ವಿಸ್ಮಯದ ಕೌತುಕವನ್ನು ಕಣ್ಣಾರೆ ಕಂಡು ಯುವಕರು, ಶಾಲಾ ಮಕ್ಕಳು ಹಳ್ಳಿಯ ಜನರು ಕಣ್ತುಂಬಿಕೊಂಡರು.

ನಭೋಮಂಡಲದ ಸೂರ್ಯನ ಸೂತ್ತಲೂ ಆವರಿಸಿರುವ ಉಂಗುರದ ವಿಡಿಯೊವನ್ನು ಮೋಬೈಲ್‌ನಲ್ಲಿ ಸೇರೆ ಹಿಡಿದು ಪ್ರೀತಿ ಪಾತ್ರರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿದರು. ಕಣ್ಣು ಕುಕ್ಕಿಸುವ ಸೂರ್ಯನ ಕಿರಣಗಳು ಪ್ರಕಾಶಮಾನವಾಗಿದ್ದರೂ ಈ ಕೌತುಕವನ್ನು ನೋಡಿ ನಿಬ್ಬೆರಗಾದರು. ಏಳು ಬಣ್ಣಗಳ ಕಾಮನಬಿಲ್ಲಿನ ಕುರಿತು ಹಾಗೂ ನಕ್ಷತ್ರಗಳು ಮತ್ತು ಉಪಗ್ರಹಗಳ ಸೂತ್ತಲೂ ಆವರಿಸುವ ಉಂಗುರ ವ್ಯವಸ್ಥೆ ಕುರಿತು ಪಠ್ಯ ಪುಸ್ತಕಗಳಲ್ಲಿ ವಿಧ್ಯಾರ್ಥಿಗಳು ಅರಿತುಕೊಳ್ಳುತ್ತಿದ್ದರು. ಇಂದು ಘೋಣಸಗಿ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳು ಇಂದು ಶಾಲಾ ಆವರಣದಲ್ಲೆ ಕಾಣುವ ಈ ನೈಜ ಪ್ರಕೃತಿ ವಿಸ್ಮಯ ಕಂಡು ಶಿಕ್ಷಕ ಪರಮೇಶ್ವರ ಗದ್ಯಾಳ ಅವರಿಂದ ಸೂರ್ಯನ ವರ್ತುಲಾಕಾರದ ಉಂಗುರದ ವಿಸ್ಮಯ ಕುರಿತು ಮಾಹಿತಿ ಪಡೆದುಕೊಂಡರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೃಷಿ ಮತ್ತು ಹವಾಮಾನ ತಜ್ಞ ಡಾ. ಎಚ್. ವೆಂಕಟೇಶ್, ಇದೊಂದು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಸೂರ್ಯನಿಂದ ಬರುವ ಪ್ರಕಾಶಮಾನ ಕಿರಣಗಳಿಂದ ಇದು ಉಂಟಾಗುತ್ತದೆ. ಭೂಮಂಡಲದಿಂದ ಎತ್ತರದಲ್ಲಿರುವ ತೆಳುವಾದ ಮೋಡಗಳಲ್ಲಿ ಸೂರ್ಯನ ಕಿರಣಗಳು ಬಿದ್ದಾಗ ಈ ವೃತ್ತ ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ADVERTISEMENT

ಈ ತೆಳು ಮೋಡಗಳು (Cirrus Clouds) ಎಂದು ಕರೆಯಲಾಗುತ್ತದೆ. ವಾತಾವರಣದಲ್ಲಿ ತೆಳುವಾದ ಮೋಡ ಎತ್ತರದಲ್ಲಿರುತ್ತದೆ. ಸುಮಾರು 12 ರಿಂದ 15 ಕಿ. ಮೀ. ಎತ್ತರದಲ್ಲಿ ವಕ್ರೀಭವನ (ರಿಪ್ರ್ಯಾಕ್ಷನ್) ಉಂಟಾಗಿ‌ ಸೂರ್ಯನ ಸುತ್ತಲೂ ಈ ರೀತಿಯ ಉಂಗುರ ಕಾಣಿಸುತ್ತದೆ. ಕೆಲ ಸಮಯದ ನಂತರ ಇದು ಮಾಯವಾಗುತ್ತದೆ. ಇದರಿಂದ ಯಾವುದೇ ಸಮಸ್ಯೆಯಿಲ್ಲ. ಇದೊಂದು ನೈಸರ್ಗಿಕ ಪ್ರಕ್ರಿಯೆ. ಇದನ್ನು ಇಂಗ್ಲೀಷ್ ನಲ್ಲಿ ಹ್ಯಾಲೊ(ಪ್ರಭಾವಲ) ಎಂದು ಕರೆಯುತ್ತಾರೆ ಎಂದು ತಿಳಿಸಿದ್ದಾರೆ.

ತಿಕೋಟಾ ತಾಲ್ಲೂಕಿನ ಘೋಣಸಗಿ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳು ಸೂರ್ಯನ ಸುತ್ತುವರೆದ ಉಂಗಾರಾಕಾರದ ವಿಸ್ಮಯವನ್ನು ಕಣ್ತುಂಬಿಕೊಂಡರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.