ಸಿಂದಗಿ: ಸ್ವಾಮಿ ರಾಮಾನಂದ ತೀರ್ಥ ಹೈದ್ರಾಬಾದ್ ಸಂಸ್ಥಾನವನ್ನು ವಿಮೋಚನೆಗೊಳಿಸಿದ ಸ್ವಾತಂತ್ರ್ಯ ಹೋರಾಟಗಾರ. ಇವರನ್ನು ಆಂದ್ರಪ್ರದೇಶದಲ್ಲಿ ಹೈದ್ರಾಬಾದ್ ಸಂಸ್ಥಾನ ಸ್ವಾತಂತ್ರ್ಯಸೂರ್ಯ ಎಂದು ಕರೆಯಲಾಗುತ್ತದೆ. ಇವರ ಜನ್ಮಭೂಮಿ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣ ಎಂಬುದು ಹೆಮ್ಮೆಯ ಸಂಗತಿ. ಅವರು ಹುಟ್ಟಿದ ಮನೆಯನ್ನು ರಾಷ್ಟ್ರೀಯ ಸ್ಮಾರಕ ವೀರಸೌಧವನ್ನಾಗಿ ರಾಜ್ಯ ಸರ್ಕಾರ ಸುವರ್ಣ ಕರ್ನಾಟಕ ವರ್ಷ 2006 ರಲ್ಲಿ ನಿರ್ಮಾಣ ಮಾಡಿದೆ.
2006ರ ಡಿ. 7 ರಂದು ಈ ಸ್ಮಾರಕ ವೀರಸೌಧವನ್ನು ಹೈದ್ರಾಬಾದ್ ರಾಷ್ಟ್ರವೀರ ಸ್ವಾಮಿ ರಾಮಾನಂದ ತೀರ್ಥರ ಕೇಂದ್ರ ಸ್ಮಾರಕ ಸಮಿತಿ ಅಧ್ಯಕ್ಷ ಕೆ.ಎ. ಕೇಶವಲು ಉದ್ಘಾಟಿಸಿದ್ದರು. ಅಂದಿನ ಸಿಂದಗಿ ಶಾಸಕ ಅಶೋಕ ಶಾಬಾದಿ ಅಧ್ಯಕ್ಷತೆ ವಹಿಸಿದ್ದರು.
ವೀರಸೌಧದೊಳಗೆ ಪ್ರಾರ್ಥನಾ ಕೋಣೆ ಇದೆ. ಸ್ವಾಮಿ ರಾಮಾನಂದ ತೀರ್ಥರ ಸಂಶೋಧನಾ ಕೇಂದ್ರದ ಗ್ರಂಥಾಲಯ ಕೋಣೆಯಿದೆ. ಅದರಲ್ಲಿಯೇ ಅವರ ಪುತ್ಥಳಿ ಇದೆ. ಆದರೆ ಸ್ಮಾರಕದ ಉದ್ದೇಶ ಈಡೇರದೇ ಸೌಧ ಸಂಪೂರ್ಣ ಹಾಳಾಗಿ ಹೋಗಿದೆ. ಮಳೆ ಬಂದರೆ ಚಾವಣಿ ಸೋರುತ್ತದೆ. ಕಿಡಿಗೇಡಿಗಳು ಕಿಟಕಿ ಒಡೆದು ಹಾಕಿದ್ದಾರೆ. ಸ್ವಾಮಿ ರಾಮಾನಂದ ತೀರ್ಥರ ಪುತ್ಥಳಿ ಮೂಲೆಯಲ್ಲಿ ದೂಳು ತಿನ್ನುತ್ತಿದೆ.
ಇವರ ಹೆಸರು ಮಹಾರಾಷ್ಟ್ರ, ಆಂಧ್ರಪ್ರದೇಶಗಳಲ್ಲಿ ಮನೆ ಮಾತಾಗಿದೆ. ಮಹಾರಾಷ್ಟ್ರದ ನಾಂದೇಡದಲ್ಲಿ ಸ್ವಾಮಿ ರಾಮಾನಂದ ತೀರ್ಥ ಮರಾಠಾವಾಡ ವಿಶ್ವವಿದ್ಯಾಲಯ ಇದೆ. ತೆಲಂಗಾಣದಲ್ಲಿ ಅವರ ಹೆಸರಿನಲ್ಲಿ ಸಂಶೋಧನಾ ಕೇಂದ್ರಗಳಿವೆ. ನಗರ ಪ್ರದೇಶಗಳಲ್ಲಿ ಅವರ ಪುತ್ಥಳಿಗಳಿವೆ. ಮಾಜಿ ಪ್ರಧಾನಿ ಪಿ. ವಿನರಸಿಂಹರಾವ್ ಇವರ ಶಿಷ್ಯರಲ್ಲಿ ಒಬ್ಬರು. ಸ್ವಾಮಿ ರಾಮಾನಂದ ತೀರ್ಥರ ಜನ್ಮಸ್ಥಳ ಸಿಂದಗಿ ಪಟ್ಟಣದಲ್ಲಿ ಅವರ ಮೊದಲಿನ ಹೆಸರು ವೆಂಕಟೇಶ ಭವಾನಿರಾವ್ ಖೇಡಗಿ. ಅವರು ಹುಟ್ಟಿದ ಮನೆಯನ್ನೇ ಸ್ಮಾರಕ ಮಾಡಲಾಗಿದೆ.
ಇವರು ಆಜನ್ಮ ಬ್ರಹ್ಮಚಾರಿಯಾಗಿ ಮಹಾತ್ಮ ಗಾಂಧಿಯವರ ಪ್ರೇರಣೆಯಿಂದ ಹೈದ್ರಾಬಾದ್ ಸಂಸ್ಥಾನ ವಿಮೋಚನಾ ಹೋರಾಟದ ಮುಂಚೂಣಿಯಲ್ಲಿದ್ದರು. ‘ಇವರ ಸ್ಮರಣೆಗಾಗಿ ನಿರ್ಮಾಣಗೊಂಡ ಸ್ಮಾರಕ ಕಟ್ಟಡ ಹಲವು ವರ್ಷಗಳ ಕಾಲ ಬಾಲಕಿಯರ ವಸತಿ ನಿಲಯಕ್ಕಾಗಿ ಬಳಕೆಯಾಯಿತು. ಇಡೀ ಕಟ್ಟಡ ಹಾಳುಗೆಡುವಿ ನಂತರ ಸ್ಥಳಾಂತರ ಮಾಡಲಾಗಿದೆ. ಸ್ಮಾರಕ ಕಟ್ಟಡ ಉದ್ದೇಶಿತ ಕಾರ್ಯಕ್ಕಾಗಿ ಬಳಕೆಯಾಗದಿರುವುದು ವಿಷಾದಕರ ಸಂಗತಿ’ ಎಂದು ಪುರಸಭೆ ಮಾಜಿ ಅಧ್ಯಕ್ಷ ಹಣಮಂತ ಸುಣಗಾರ ಕಳವಳ ವ್ಯಕ್ತಪಡಿಸಿದ್ದಾರೆ.
ಸ್ಮಾರಕ ಕಟ್ಟಡವನ್ನು ಉಸ್ತುವಾರಿಗಾಗಿ ಮಲ್ಲಿಕಾರ್ಜುನ ದೇವಸ್ಥಾನ ಸಮಿತಿಗೆ ಪುರಸಭೆ ಠರಾವು ಮಾಡಿಕೊಡಲಾಗಿದೆ. ಆದರೆ ಸ್ವಚ್ಛಗೊಳಿಸಲಾರದಷ್ಟು ಕೊಳಚೆಮಯವಾಗಿದೆ ಎಂದು ಮಲ್ಲಿಕಾರ್ಜುನ ದೇವಸ್ಥಾನ ಸಮಿತಿ ಸದಸ್ಯ ಶ್ರೀಶೈಲ ನಂದಿಕೋಲ ಪ್ರತಿಕ್ರಿಯಿಸಿದ್ದಾರೆ.
ಈ ಸ್ಮಾರಕ ಸೌಧವನ್ನು ಜಿಲ್ಲಾಡಳಿತ ನಿರ್ಮಾಣ ಮಾಡಿದ್ದು, ತಾಲ್ಲೂಕು ಆಡಳಿತ ಈ ಬಗ್ಗೆ ಕಾಳಜಿ ವಹಿಸಬೇಕಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಸ್ವಾಮಿ ರಾಮಾನಂದ ತೀರ್ಥರ ಜನ್ಮಭೂಮಿ ಸಿಂದಗಿಯಲ್ಲಿ ವೀರಸೌಧ ಕಟ್ಟಡ ಕೆಟ್ಟ ಸ್ಥಿತಿಯಲ್ಲಿದೆ. ಇದರ ಬಗ್ಗೆ ಕಾಳಜಿ ವಹಿಸದೇ ಇದ್ದುದು ನಾಚಿಕೆಗೇಡಿನ ಸಂಗತಿ.–ಹಣಮಂತ ಸುಣಗಾರ, ಪುರಸಭೆ ಮಾಜಿ ಅಧ್ಯಕ್ಷ ಸಿಂದಗಿ
ರಾಷ್ಟ್ರೀಯ ಸ್ಮಾರಕ ವೀರಸೌಧ ಜೂಜಾಟದಂಥ ಅಕ್ರಮ ಚಟುವಟಿಕೆಯ ಕೇಂದ್ರವಾಗಿದೆ. ಇದನ್ನು ಕಾಯಕಲ್ಪಗೊಳಿಸುವುದು ಅತ್ಯಂತ ಅಗತ್ಯದ ಕಾರ್ಯವಾಗಿದೆ.–ಶ್ರೀಶೈಲ ನಂದಿಕೋಲ ಮಲ್ಲಿಕಾರ್ಜುನ, ದೇವಸ್ಥಾನ ಸಮಿತಿ ಸದಸ್ಯ ಸಿಂದಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.