ತಾಂಬಾ: ವೈದ್ಯರು ಇಲ್ಲದ ಆರೋಗ್ಯ ಕೇಂದ್ರ, ಶಿಥಿಲಗೋಡ ಶಾಲಾ ಕಟ್ಟಡ, ಎಲ್ಲಿ ನೋಡಿದರೂ ಗಲೀಜು, ಉಕ್ಕು ಹರಿಯುವ ಚರಂಡಿ ತ್ಯಾಜ್ಯ..ತಾಂಬಾ ಗ್ರಾಮದಲ್ಲಿ ತಾಂಡಾವವಾಡುತ್ತಿದೆ ಸಮಸ್ಯೆಗಳ ಸರಮಾಲೆ.
ಹೌದು, ತಾಂಬಾ ಗ್ರಾಮ ಮೂಲಸೌಲಭ್ಯ ವಂಚಿತಗೊಂಡಿದ್ದು, ಗ್ರಾಮವೀಡಿ ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ.
ಈ ಗ್ರಾಮದಲ್ಲಿ ಆರೋಗ್ಯ ಕೇಂದ್ರ ಇದ್ದರೂ ರೋಗಿಗಳ ಪಾಲಿಗೆ ಇದ್ದು ಇಲ್ಲದಂತಾಗಿದೆ.
ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಶಾಸಕರ ಮಾದರಿ ಶಾಲೆ ಮಳೆಯಿಂದಾಗಿ ಚಾವಣಿ ಪದರು ಮಕ್ಕಳ ತಲೆ ಮೇಲೆ ಬೀಳುವ ಸ್ಥಿತಿ ತಲುಪಿದ್ದು, ಭಯದಲ್ಲಿ ಶಿಕ್ಷಕರು ಮತ್ತು ಮಕ್ಕಳಿದ್ದಾರೆ. ಪಾಲಕರಿಗೂ ನಿತ್ಯ ಆತಂಕ.
ಗ್ರಾಮದ ತುರ್ತು ಸೇವೆಗೆ ಸದಾಕಾಲವೂ ಸಿದ್ಧವಾಗಿ ಬರುತ್ತಿದ್ದ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ 108 ಅಂಬುಲೆನ್ಸ್, ತುರ್ತು ಸೇವಾ ವಾಹನಕ್ಕೆ ಟಯರ್ ಇಲ್ಲದ್ದರಿಂದ ದುಸ್ಥಿತಿಗೆ ಬಂದು ನಿಂತಿದೆ.
ಶಿರಾಡೋಣ – ಲಿಂಗಸೂರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ತಾಂಬಾ ಗ್ರಾಮದ ಸುತ್ತಮುತ್ತ ಆಗಾಗ ರಸ್ತೆ ಅಪಘಾತಗಳಿಗೆ ಬರವಿಲ್ಲ. ಇನ್ನು ಗರ್ಭಿಣಿಯರು ತುರ್ತು ಹೆರಿಗೆ ಚಿಕಿತ್ಸೆಗಾಗಿ ದೂರದ ವಿಜಯಪುರ ಮತ್ತು ಸೋಲಾಪುರಕ್ಕೆ ಹೋಗಬೇಕಾದೆ ಪರದಾಡುವ ದುಸ್ಥಿತಿ ಎದುರಾಗಿದೆ.
ತಾಂಬಾ, ಗಂಗನಳ್ಳಿ, ಹಿಟ್ನಳ್ಳಿ ತಾಂಡಾ, ಬಂಥನಾಳ, ಗೂಗಿಹಾಳ, ಸುರಗಿಹಳ್ಳಿ, ವಾಡೆ, ಚಿಕ್ಕರೂಗಿ, ಕೆಂಗನಾಳ, ಬನಹಟ್ಟಿ, ಶಿವಪೂರ, ಗೊರನಾಳ, ಬೆನಕನಹಳ್ಳಿ, ಶಿರಕನಹಳ್ಳಿ, ಹೊನ್ನಳ್ಳಿ, ಹಿರೇಮಸಳಿ, ಸಂಗೋಗಿ ವಿವಿಧ ಗ್ರಾಮಸ್ಥರು 108 ತುರ್ತು ಸೇವಾ ವಾಹನ ಅವಲಂಬಿಸಬೇಕಿದೆ. ಹಲವಾರು ಬಾರಿ ಸಕಾಲಕ್ಕೆ 108 ವಾಹನ ಸಿಗದೇ ಗರ್ಭಿಣಿಯರು ಮತ್ತು ರೋಗಿಗಳ ಪರಿಸ್ಥಿತಿ ಅಧೋಗತಿ.
ಆರು ಹಾಸಿಗೆಯ ತಾಂಬಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಲವು ಜ್ವಲಂತ ಸಮಸ್ಯೆಗಳಿಂದ ನರುಳುತ್ತಿದೆ. ಆರೋಗ್ಯ ಕೇಂದ್ರದ ವೈದ್ಯರು ಸೇರಿದಂತೆ ಎಲ್ಲ ಸಿಬ್ಬಂದಿ ಬರುವ ರೂಗಿಗಳಿಗೆ ಪ್ರಥಮ ಚಿಕಿತ್ಸೆ ಮಾತ್ರ ಒದಗಿಸಲು ಸಾಧ್ಯವಾಗುತ್ತದೆ. ರಾತ್ರಿ ಸಮಯದಲ್ಲಿ ಯಾವುದೇ ವೈದ್ಯ, ನರ್ಸ್‍ಗಳಿರದ ಕಾರಣ ನಿತ್ಯ ರೋಗಿಗಳು ಪರದಾಡುವಂತಾಗಿದೆ. ತೀವ್ರ ನಿಗಾ ಘಟಕ ಇಲ್ಲದಿರುವುದರಿಂದ, ಹೆಚ್ಚಿನ ಚಿಕಿತ್ಸೆ ಬೇಕಾದರೆ ದೂರದ ವಿಜಯಪುರ ಮತ್ತು ಸೋಲಾಪುರಕ್ಕೆ ಹೋಗುವಂತಾಗಿದೆ. ಇದರಿಂದ ನೊಂದ ಅದೇಷ್ಟೋ ಮಹಿಳೆಯರು ಹೆರಿಗೆ ಬೇನೆ ಕಾಣುವ ಮುನ್ನವೇ ಆಸ್ಪತ್ರೆಗಳಿಗೆ ಹೋಗಿ ದಾಖಲಾಗುತ್ತಿದ್ದಾರೆ.
***
ತಾಂಬಾ ಗ್ರಾಮದಲ್ಲಿ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಿಸಬೇಕು, ಸಿಸಿ ರಸ್ತೆ, ಶೌಚಗೃಹ, ಸೇರಿದಂತೆ ಮೂಲಸೌಲಭ್ಯ ಕಲ್ಪಿಸಬೇಕು
–ಸಿದ್ದಣ್ಣ ಪೂಜಾರಿ, ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.