ADVERTISEMENT

ತಾರಾಪೂರ | ಸೌಲಭ್ಯ ವಂಚಿತ ಪುನರ್ವಸತಿ ಕೇಂದ್ರ

ತಾರಾಪೂರ: ಭೀಮಾ ಹಿನ್ನೀರಿನಿಂದಾಗಿ ಮುಳುಗಡೆಯಾದ ಗ್ರಾಮ

ಡಾ.ರಮೇಶ ಎಸ್.ಕತ್ತಿ
Published 10 ಜುಲೈ 2024, 6:11 IST
Last Updated 10 ಜುಲೈ 2024, 6:11 IST
ತಾರಾಪೂರ ಪುನರ್ವಸತಿ ಕೇಂದ್ರವು ಜನವಸತಿ ಇಲ್ಲದೇ ಬಿಕೋ ಎನ್ನುತ್ತಿದೆ. ರಸ್ತೆಯೂ ಹಾಳಾಗಿದೆ
ತಾರಾಪೂರ ಪುನರ್ವಸತಿ ಕೇಂದ್ರವು ಜನವಸತಿ ಇಲ್ಲದೇ ಬಿಕೋ ಎನ್ನುತ್ತಿದೆ. ರಸ್ತೆಯೂ ಹಾಳಾಗಿದೆ   

ಆಲಮೇಲ: ತಾಲ್ಲೂಕಿನ ತಾರಾಪೂರ ಗ್ರಾಮವು ಭೀಮಾ ಹಿನ್ನೀರಿನಿಂದಾಗಿ ಮುಳುಗಡೆಯಾಗುವುದು, ಪ್ರತಿವರ್ಷ ಮಳೆಗಾಲದಲ್ಲಿ ಭೀಮೆ ಉಕ್ಕಿಬಂದಾಗ ಇಲ್ಲಿ ಜನರು ಸಂಕಷ್ಟಕ್ಕೀಡಾಗುವುದು ಸರ್ವೆ ಸಾಮಾನ್ಯ ಎಂಬಂತಾಗಿದೆ.

ಸೊನ್ನದ ಹತ್ತಿರ ನಿರ್ಮಿಸಲಾದ ಬ್ಯಾರೇಜ್‌ ನೀರು ಸಂಗ್ರಹದಿಂದಾಗಿ ಹಿನ್ನೀರು ಈ ಗ್ರಾಮಕ್ಕೆ ಸುತ್ತುವರಿಯುವುದು. ಇದರಿಂದಾಗುವ ತೊಂದರೆಯನ್ನು ಗಮನಿಸಿದ ಭೀಮಾ ಏತನೀರಾವರಿ ನಿಗಮವು ಹೊಸ ತಾರಾಪೂರ ಸಮೀಪ ಭೂಮಿಯನ್ನು ಖರೀದಿಸಿ ಪುನರ್ವಸತಿ ಕೇಂದ್ರ ನಿರ್ಮಿಸಿ ಮೂಲಸೌಕರ್ಯಗಳನ್ನು ಮಾಡಿ 210 ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಿತ್ತು. ಅದಾಗಿ ದಶಕಗಳ ನಂತರ ಕಳೆ ವರ್ಷವಷ್ಟೆ ಶೇ 40ರಷ್ಟು ಕುಟುಂಬಗಳು ಇಲ್ಲಿ ಬಂದು ನೆಲೆಸಿವೆ.

ಇನ್ನೂ ಕೆಲವು ಕುಟುಂಬಗಳು ಪುನರ್ವಸತಿ ಕೇಂದ್ರದಲ್ಲಿ ಸರಿಯಾಗಿ ಮೂಲಸೌಕರ್ಯಗಳಿಲ್ಲ ಎಂದು ಮುಳಗಡೆಯ ತಾರಾಪುರದಲ್ಲಿ ಈಗಲೂ ವಾಸವಾಗಿದ್ದಾರೆ. ಯಾವಾಗ ನೀರು ಬರುತ್ತದೆಯೂ ಗೊತ್ತಿಲ್ಲ, ಆದರೂ ಜನ ಮಾತ್ರ ಊರು ಬಿಟ್ಟು ಬರುತ್ತಿಲ್ಲ.

ADVERTISEMENT

ಕುಡಿಯುವ ನೀರು:

ನೀರಿನ ಟ್ಯಾಂಕ್ ನಿರ್ಮಿಸಲಾಗಿದ್ದರೂ ಹಂಚಿಕೆಯಾದ ಪ್ರತಿ ನಿವೇಶನಕ್ಕೆ ಪೈಪ್‌ ಲೈನ್ ಅಳವಡಿಸಿಲ್ಲ. ಹೀಗಾಗಿ ನೀರಿನ ಸಮರ್ಪಕ ವಿತರಣೆಯಾಗುತ್ತಿಲ್ಲ ಎಂದು ಶ್ರೀಶೈಲ ಕಂಟೆಕೂರ ದೂರಿದರು.

ಹಳೆ ತಾರಾಪೂರದಲ್ಲಿ ನಮ್ಮ ಮನೆಗಳು ಮುಳುಗಡೆಯಾಗುವ ಹಂತದಲ್ಲಿದ್ದು ನಾವು ಮಾತ್ರ ಮೂಲಮನೆಯನ್ನು ತೊರೆದು ಇಲ್ಲಿ ಬಂದು ನೆಲೆಸಿದ್ದೇವೆ. ಇದ್ದ ವ್ಯವಸ್ಥೆಯಲ್ಲಿ ಹೊಂದಿಕೊಂಡಿದ್ದೇವೆ ಎಂದರು.

ದಶಕದ ಹಿಂದೆಯೇ ಪುನರ್ವಸತಿ ಕೇಂದ್ರವನ್ನು ಗ್ರಾ. ಪಂ.ಗೆ ಹಸ್ತಾಂತರಿಸಲಾಗಿದೆ. ಎಲ್ಲ ನಿರಾಶ್ರಿತರಿಗೂ ನಿಯಮದಂತೆ ಪರಿಹಾರ ನೀಡಲಾಗಿದೆ.
ಸಂತೋಷ ಪಾಟೀಲ, ಎಇಇ, ಸೊನ್ನ ಭೀಮಾ ಏತನೀರಾವರಿ ನಿಗಮದ ಅಧಿಕಾರಿ

ಡಾಂಬರು ರಸ್ತೆ ಕಿತ್ತು ಹೋಗುತ್ತಿದೆ. ಎಲ್ಲ ರಸ್ತೆಗಳಲ್ಲೂ ಜಾಲಿಕಂಟಿ, ಪೊದೆ ಬೆಳೆದಿದೆ ಹೆಚ್ಚು ಮನೆಗಳು ಇಲ್ಲಿ ಇಲ್ಲದೇ ಅನಾನುಕೂಲ ಆಗುತ್ತದೆ ಎಂದರು.

ಈವರೆಗೆ ಹಳೆ ತಾರಾಪೂರದಿಂದ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರವಾಗಿರುವ ಕುಟುಂಬಗಳಿಗೆ ತಲುಪಬೇಕಾದ ₹ 25 ಸಾವಿರ ಸ್ಥಳಾಂತರ ವೆಚ್ಚದ ಪರಿಹಾರ ಹಣವು ಭೀಮಾ ಏತ ನೀರಾವರಿ ನಿಗಮವು ನೀಡಲ್ಲ ಎಂದು  ಶಂಕ್ರಯ್ಯ ಹಿರೇಮಠ ಆರೋಪಿಸಿದರು.

ಈ ಹಿಂದೆ ಶಶಿಕಲಾ ಜೊಲ್ಲೆ ಅವರು ಉಸ್ತುವಾರಿ ಸಚಿವರಾಗಿದ್ದಾಗ ಹಾಗೂ ದಿ.ಉಮೇಶ ಕತ್ತಿ ಅವರು ಉಸ್ತುವಾರಿ ಸಚಿವರಾಗಿದ್ದಾಗ ಪ್ರತಿ ಕುಟುಂಬಕ್ಕೂ ವಿಶೇಷ ಯೋಜನೆಯ ಮೂಲಕ ಮನೆ ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡುವುದಾಗಿ ಹೇಳಿದ್ದರು. ಅದನ್ನು ನೆಚ್ಚಿಕೊಂಡು ಬಹಳಷ್ಟು ಜನರು ಈವರೆಗೂ ಮುಳುಗಡೆಯಾಗುವ ಗ್ರಾಮತೊರೆದು ಪುನರ್ವಸತಿ ಕೇಂದ್ರಕ್ಕೆ ಬರುತ್ತಿಲ್ಲ ಎಂದು ಸಾತಪ್ಪ ಬಿರಾದಾರ ಹೇಳಿದರು.

ನಿವೇಶನ ಹಂಚಿಕೆ ಸರಿಯಾಗಿಲ್ಲ, ನಿವೇಶನಗಳು ತೀರಾ ಚಿಕ್ಕವು, ಹಳ್ಳಿಯ ರೈತ ಕುಟುಂಬಗಳು ಇಂತಹ ಚಿಕ್ಕ ಜಾಗೆಯಲ್ಲಿ ಬಂದು ಮನೆಕಟ್ಟಿಕೊಂಡು ಇರುವುದು ಕಷ್ಟವಾಗುತ್ತದೆ ಎಂದು ರೈತರು ಅಳಲು ತೋಡಿಕೊಂಡರು.

ಅಗಸಿಯಿಲ್ಲ:

ಸ್ಥಳಾಂತರಗೊಳ್ಳುವ ಪ್ರತಿಯೊಂದು ಹಳ್ಳಿಗಳ ಮೂಲವನ್ನು ಅಗಸಿಬಾಗಿಲು ಸೂಚಿಸುತ್ತದೆ. ಪುನರ್ವಸತಿ ಕೇಂದ್ರಗಳಲ್ಲೂ ಅಗಸಿಬಾಗಲು ಮೊದಲು ಮಾಡುತ್ತಾರೆ. ಇಲ್ಲಿ ಅದನ್ನು ನಿರ್ಮಿಸುವುದು ಮರೆತಂತೆ ಕಾಣುತ್ತದೆ. ಕೇಳಿದರೆ ದಶಕದ ಹಿಂದೆಯೇ ನಿಗಮವು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದೆ ಎಂದು ನಿಗಮ ಹೇಳುತ್ತದೆ. ಇದು ನಮ್ಮ ಗ್ರಾಮಕ್ಕೆ ಮಾಡಿದ ಅನ್ಯಾಯ. ಅಲ್ಲದೇ, ಶಾಲೆ, ಅಂಗನವಾಡಿಗಳಿಗೂ ಕಾಂಪೌಂಡ್‌ ನಿರ್ಮಿಸಿಲ್ಲ.

ಸಮೀಪದ ತಾವರಖೇಡ ಪುನರ್ವಸತಿ ಕೇಂದ್ರದಲ್ಲಿ ವಿಶಾಲವಾದ ದೇವಸ್ಥಾನಗಳನ್ನು ಕಟ್ಟಿಕೊಟ್ಟಿದ್ದಾರೆ. ನಮ್ಮಲ್ಲಿ ಒಂದೂ ದೇಗುಲ ಕಟ್ಟಿಲ್ಲ, ಇದರಿಂದ ನಮ್ಮ ಹಬ್ಬ ಉತ್ಸವಗಳನ್ನು, ಧಾರ್ಮಿಕ ಕಾರ್ಯಗಳನ್ನು ಮಾಡುವುದು ಹೇಗೆ ಎಂದು ಗ್ರಾಮದ ಪ್ರಮುಖರಾದ ಶಂಕ್ರಯ್ಯ ಹಿರೇಮಠ ದೂರಿದರು.

ಕಳೆದ ವರ್ಷದಿಂದ ಹೊಸಕಟ್ಟಡದಲ್ಲಿ ಪ್ರಾಥಮಿಕ ಶಾಲೆ ಕಾರ್ಯನಿರ್ಚಹಿಸುತ್ತಿದೆ. ಅರ್ಧಕ್ಕೆ ನಿಂತುಕೊಂಡ ಶೌಚಾಲಯ ಕಾಮಗಾರಿ ಪೂರ್ಣಗೊಂಡಿಲ್ಲ, ಇದರಿಂದ ಶಿಕ್ಷಕರು ಮತ್ತು ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಕಂಪೌಂಡ್‌ ಮತ್ತು ಶೌಚಾಲಯ ತುರ್ತು ನಿರ್ಮಿಸಬೇಕಿದೆ.

ವಸತಿ ಯೋಜನೆಗಳಲ್ಲಿ ಮನೆ ಕಟ್ಟಿಕೊಳ್ಳಲು ಸರ್ಕಾರ ಇಲ್ಲಿನ ಕುಟುಂಬಗಳಿಗೆ ನೆರವು ಕೊಡಬೇಕಿದೆ. ಇಂದಿರಾ ಆವಾಸ್‌ ಯೋಜನೆ ಇಲ್ಲವೇ ಬೇರೆ ಯಾವುದಾದರೂ ಯೋಜನೆಯಲ್ಲಿ ಮನೆಕಟ್ಟಿಕೊಳ್ಳಲು ಹಣ ನೀಡಬೇಕು. ನಮ್ಮ ಹಳೆಯ ಮನೆಗಳಿಗೆ 20 ವರ್ಷಗಳ ಹಿಂದೆ ಪುಡಿಗಾಸು ನೀಡಿದ್ದು, ಅದೆಲ್ಲವೂ ಅದಾಗಲೇ ಖರ್ಚಾಗಿದೆ. ಈಗ ಕೈಯಲ್ಲಿ ಕಾಸು ಇಲ್ಲದೇ ಬಳಲುತ್ತಿದ್ದೇವೆ. ಸ್ಥಳಾಂತರ ಆಗುವುದಕ್ಕೆ ಹಾಗೂ ಮನೆ ಕಟ್ಟುವುದಕ್ಕೆ ನಮ್ಮಲ್ಲಿ ಹಣ ಇಲ್ಲ. ಹಾಗಾಗಿ ಸರ್ಕಾರ ನಮಗೆ ಮನೆ ಕಟ್ಟಲು ಆರ್ಥಿಕ ನೆರವು ನೀಡಬೇಕು ಎಂದು ಕಲ್ಲಪ್ಪ ಕಂಟೆಕೂರ ಮನವಿ ಮಾಡಿದ್ದಾರೆ.

ತಾರಾಪೂರ ಪುನರ್ವಸತಿ ಕೇಂದ್ರದ ಪ್ರಾಥಮಿಕ ಶಾಲೆಯ ಶೌಚಾಲಯ ಕಟ್ಟಡ ಎರಡು ವರ್ಷದಿಂದ ಅರ್ಧಕ್ಕೆ ನಿಂತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.