ವಿಜಯಪುರ: ಮಕ್ಕಳ ಭಿಕ್ಷಾಟನೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 5 ಜನರ ತಂಡವನ್ನು ರಚಿಸಿ, ಮಕ್ಕಳನ್ನು ರಕ್ಷಿಸಿ ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಲಾಗುವುದು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೊಸಂಬೆ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿಜಯಪುರ ನಗರದ ವಿವಿಧ ವೃತ್ತ, ದೇವಸ್ಥಾನ ಹಾಗೂ ಪ್ರವಾಸಿ ತಾಣಗಳಲ್ಲಿ ರಚಿಸಲಾಗುವ ತಂಡ ನಿರಂತರ ಗಮನಿಸಲಿದೆ. ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿಕೊಂಡರೆ ಅವರನ್ನು ರಕ್ಷಿಸಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದರು.
ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಪ್ರಚಾರ ಕೈಗೊಳ್ಳಲಾಗುತ್ತಿದೆ. ಗ್ರಾಮೀಣ ಹಾಗೂ ನಗರದಲ್ಲಿ ಡಾಬಾಗಳಲ್ಲಿ ಕೆಲಸ ಮಾಡುವ ಮಕ್ಕಳನ್ನು ರಕ್ಷಿಸಿ ಶಾಲೆಗೆ ಸೇರಿಸಬೇಕು. ಕೆೆೆಎಸ್‌ಆರ್‌ಟಿಸಿ ಮಕ್ಕಳ ಸಂಖ್ಯೆ ಹೆಚ್ಚಿರುವ ಗ್ರಾಮಗಳ ಪಟ್ಟಿ ನಿರ್ಮಿಸಿ ಅಂತಹ ಗ್ರಾಮಗಳಿಗೆ ಬಸ್ ಸೌಲಭ್ಯ ಹೆಚ್ಚಿಸಬೇಕು. ಬಸ್ ಸೌಲಭ್ಯದ ಕೊರತೆಯಿಂದ ಯಾವ ಮಕ್ಕಳೂ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸೂಚಿಸಲಾಗಿದೆ ಎಂದರು.
ಅಂಗನವಾಡಿ ಮಕ್ಕಳಿಗೆ ನೀಡಲಾಗುತ್ತಿರುವ ಮೊಟ್ಟೆಗಳು 50 ಗ್ರಾಂ ತೂಕ ಹೊಂದಿರುವ ಬಗ್ಗೆ ಗಮನಿಸಬೇಕು. ಮಕ್ಕಳಿಗೆ ಸಮಸ್ಯೆಯಾಗದಂತೆ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯನ್ನು ಹಂತ ಹಂತವಾಗಿ ಕಡಿಮೆ ಮಾಡಬೇಕು ಎಂದು ಸೂಚಿಸಲಾಗಿದೆ ಎಂದರು.
ವಿಜಯಪುರ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ವಸತಿನಿಲಯಗಳಲ್ಲಿ ಚೇತನ ಸಂಜೆ ಕಾರ್ಯಕ್ರಮ ಕೈಗೊಂಡಿರುವುದು ರಾಜ್ಯಕ್ಕೆ ಮಾದರಿಯಾಗಿದೆ. ಜಿಲ್ಲೆಯಾದ್ಯಂತ ಬಿಸಿಯೂಟ ಕಾರ್ಯಕರ್ತೆಯರಿಗೆ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಸಮವಸ್ತ್ರ ನೀಡಿದ್ದು ಉತ್ತಮ ಕೆಲಸವಾಗಿದ್ದು, ರಾಜ್ಯ ಸರ್ಕಾರ ಕೈಗೊಂಡಿರುವ ಪಾಲಕರ ಸಭೆ ಕಾರ್ಯಕ್ರಮ ಶ್ಲಾಘನೀಯ ಎಂದರು.
ಜಿಲ್ಲೆಯ ವಿವಿಧ ವಿದ್ಯಾರ್ಥಿ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಳ್ಳಲಾಗಿದ್ದು ಕೆಲ ವಸತಿನಿಲಯ ಸುವ್ಯವಸ್ಥೆಯನ್ನು ಕಾಪಾಡಿಕೊಂಡಿದ್ದರೆ ಇನ್ನೂ ಕೆಲ ವಸತಿನಿಲಯಗಳು ಮೂಲ ಸೌಕರ್ಯ ಹಾಗೂ ಅವ್ಯವಸ್ಥೆಗಳಿಂದ ತುಂಬಿದೆ. ಅಂತಹ ವಸತಿನಿಲಯದ ಮೇಲ್ವಿಚಾರಕರಿಗೆ, ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಶಿಸ್ತು ಕ್ರಮ ಕೈಗೊಳ್ಳಲು ತಿಳಿಸಲಾಗಿದೆ ಎಂದರು.
ನಗರದ ಹೊರವಲಯ ಭೂತನಾಳದ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ಸ್ಥಿತಿ ಶೋಚನೀಯವಾಗಿದೆ. ವಿದ್ಯಾರ್ಥಿಗಳಿಗೆ ಬಿಸಿನೀರಿನ ವ್ಯವಸ್ಥೆ, ವಸತಿನಿಲಯದ ಸ್ವಚ್ಛತೆ ಹಾಗೂ ಶೌಚಾಲಯಕ್ಕೆ ಸಂಬಂಧಿಸಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ನ್ಯಾಯಾಧೀಶರಾದ ಸಂತೋಷ ಇಂದೂರ್ ಮಾತನಾಡಿ, ‘ಮಕ್ಕಳ ಹಕ್ಕು, ಪೋಕ್ಸೊ ಕಾಯ್ದೆಗೆ ಸಂಬಂಧಿಸಿ ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮಕ್ಕಳು ವ್ಯಸನಗಳಿಗೆ ಸಿಲುಕಬಾರದು ಎನ್ನುವ ನಿಟ್ಟಿನಲ್ಲೂ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಶಾಲೆಯ ನಿಗದಿತ ಪ್ರದೇಶದಲ್ಲಿ ತಂಬಾಕು, ಸಿಗರೇಟು ಮಾರಾಟ ಮಾಡುವಂತಿಲ್ಲ. ಈ ರೀತಿ ಮಾರಾಟ ಮಾರಾಟ ಮಾಡುವವರ ಮೇಲೆ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಹುಲ್ ಶಿಂಧೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಕೆ.ಕೆ. ಚವಾಣ್ ಇದ್ದರು.
ವಾರ್ಡನ್ ಮನೆಯಲ್ಲಿ ದವಸ ಧಾನ್ಯ ಕೋಲ್ಹಾರ ವಸತಿ ನಿಲಯದಲ್ಲಿ ಇಡಬೇಕಿದ್ದ ದವಸಧಾನ್ಯವನ್ನು ವಸತಿನಿಲಯದ ವಾರ್ಡನ್ ಮನೆಯಲ್ಲಿ ಇರಿಸಿದ್ದು ಈ ರೀತಿ ಸರ್ಕಾರಿ ದಾಖಲೆಯ ದವಸ ಧಾನ್ಯವನ್ನು ಮನೆಯಲ್ಲಿ ಇಡುವಂತಿಲ್ಲ ಎಂದು ಸೂಚಿಸಲಾಗಿದೆ. ಈ ರೀತಿ ಮಾಡಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ತಿಳಿಸಲಾಗಿದೆ ಎಂದು ಶಶಿಧರ ಕೊಸಂಬೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.