ವಿಜಯಪುರ: ನಗರದ 27 ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ ಹಾಗೂ 43 ಪರೀಕ್ಷಾ ಕೇಂದ್ರಗಳಲ್ಲಿ ಮಧ್ಯಾಹ್ನ ಟಿಇಟಿ ಪರೀಕ್ಷೆಯನ್ನು ಸಿ.ಸಿ ಟಿವಿ ಕ್ಯಾಮೆರಾ ಮತ್ತು ವೆಬ್ ಕಾಸ್ಟಿಂಗ್ ಕಣ್ಗಾವಲಿನಲ್ಲಿ ವ್ಯವಸ್ಥಿತವಾಗಿ ನಡೆಸಲಾಗಿದೆ ಎಂದು ಡಿಡಿಪಿಐ ಎನ್.ಎಚ್.ನಾಗೂರ ತಿಳಿಸಿದ್ದಾರೆ.
ಬೆಳಿಗ್ಗೆ ನಡೆದ ಪರೀಕ್ಷೆಗೆ ಒಟ್ಟು 7317 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 817 ಗೈರು ಹಾಜರಿಯಾಗಿದ್ದು, 6500 ಅಭ್ಯರ್ಥಿಗಳು ಪರೀಕ್ಷೆ ಬರೆದರು.
ಮಧ್ಯಾಹ್ನ ನಡೆದ ಪರೀಕ್ಷೆಗೆ 11,846 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಈ ಪೈಕಿ 797 ವಿದ್ಯಾರ್ಥಿಗಳು ಗೈರು ಉಳಿದಿದ್ದು, 11,049 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ನಾಗೂರ ತಿಳಿಸಿದ್ದಾರೆ.
ಜಿಲ್ಲಾ ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ತಲುಪಿಸಲು ಬೆಳಿಗ್ಗೆ ಏಳು ಮಾರ್ಗ ಹಾಗೂ ಮಧ್ಯಾಹ್ನ ಒಂಬತ್ತು ಮಾರ್ಗಗಳನ್ನು ಮಾಡಲಾಗಿತ್ತು.
ಜಿಲ್ಲೆಗೆ ಪರೀಕ್ಷಾ ವೀಕ್ಷಕರಾಗಿ ಜಮಖಂಡಿ ಸಿಟಿಇ ಪ್ರಾಂಶುಪಾಲ ಜಗದೀಶ್ ಅವರು ಆಗಮಿಸಿ, ಕೇಂದ್ರಗಳಿಗೆ ಭೇಟಿ ನೀಡಿ ಸಲಹೆ ನೀಡಿದರು.
ವಿಜಯಪುರ ಡಿಡಿಪಿಐ ಕಚೇರಿಯಲ್ಲಿ 16 ಲ್ಯಾಪ್‌ಟಾಪ್ ಜೋಡಿಸಿ ಪ್ರತಿ ಲ್ಯಾಪ್‌ಟಾಪ್‌ಗೆ 3 ಪರೀಕ್ಷಾ ಕೇಂದ್ರಗಳನ್ನು ಅವಲೋಕನ ಮಾಡಲು ವ್ಯವಸ್ಥೆ ಮಾಡಿ, ಮೇಲುಸ್ತುವಾರಿಗಾಗಿ ಸಿಬ್ಬಂದಿಯನ್ನು ನೇಮಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.