ADVERTISEMENT

ವಿಜಯಪುರ: ಶೋಕಸಾಗರದಲ್ಲಿ ಮುಳುಗಿದ ಸಿದ್ದನಾಥ ಗ್ರಾಮ

ಮೀನುಗಾರಿಕೆ ವೇಳೆ ನದಿಯಲ್ಲಿ ಮುಳುಗಿ ಸಾವಿಗೀಡಾದ ಇಬ್ಬರು ಮೀನುಗಾರರ ಶವಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 14:01 IST
Last Updated 13 ಜೂನ್ 2020, 14:01 IST
ಕೊಲ್ಹಾರ ತಾಲ್ಲೂಕಿನ ಸಿದ್ದನಾಥ ತಾಂಡಾ ನದಿ ದಡದಲ್ಲಿ ಮೀನುಗಾರರ ಮೃತದೇಹ ಪತ್ತೆಯಾದ ವೇಳೆ ತಹಶೀಲ್ದಾರ್‌ ಹಾಗೂ ಹಲವು ಅಧಿಕಾರಿಗಳು ಭೇಟಿ ನೀಡಿದರು
ಕೊಲ್ಹಾರ ತಾಲ್ಲೂಕಿನ ಸಿದ್ದನಾಥ ತಾಂಡಾ ನದಿ ದಡದಲ್ಲಿ ಮೀನುಗಾರರ ಮೃತದೇಹ ಪತ್ತೆಯಾದ ವೇಳೆ ತಹಶೀಲ್ದಾರ್‌ ಹಾಗೂ ಹಲವು ಅಧಿಕಾರಿಗಳು ಭೇಟಿ ನೀಡಿದರು   

ಕೊಲ್ಹಾರ: ಆಲಮಟ್ಟಿ ಹಿನ್ನೀರಿನಲ್ಲಿ ಗುರುವಾರ ಸಂಜೆ ಮೀನು ಹಿಡಿಯಲು ಹೋಗಿದ್ದಾಗ ತೆಪ್ಪ ಮುಗುಚಿ ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರ ಮೃತ ದೇಹಗಳು ಎರಡು ದಿನಗಳ ನಂತರ ಶನಿವಾರ ಬೆಳಿಗ್ಗೆ ಕೃಷ್ಣಾ ನದಿ ತೀರಗಳಲ್ಲಿ ಪತ್ತೆಯಾಗಿವೆ.

ಸಿದ್ದನಾಥ ತಾಂಡಾದ ಸಹೋದರ ಸಂಬಂಧಿಗಳಾದ ರಮೇಶ ಲಮಾಣಿ, ಪರಶುರಾಮ ಲಮಾಣಿ ಹಾಗೂ ಅಣ್ಣನ ಮಗ ಅಕ್ಷಯ್ ಲಮಾಣಿ ಮೂವರು ಮೀನು ಹಿಡಿಯಲು ಸಿದ್ದನಾಥ ಬಳಿಯ ಕೃಷ್ಣಾ ನದಿಯಲ್ಲಿ ಸುಮಾರು ಒಂದು ಕಿ.ಮೀ ನಷ್ಟು ದೂರ ತೆಪ್ಪದಲ್ಲಿ ತೆರಳಿದ್ದರು.

ಸಂಜೆ ಗಾಳಿ ಮಳೆಗೆ ತೆಪ್ಪ ಮುಗುಚಿದ ಪರಿಣಾಮ ಮೂವರ ಪೈಕಿ ಅಕ್ಷಯ್ ಈಜಿ ದಡ ಸೇರಿದ್ದರು. ಪರಶುರಾಮ ಲಮಾಣಿ (36), ರಮೇಶ ಲಮಾಣಿ (38) ಇಬ್ಬರು ನೀರಲ್ಲಿ ಮುಳುಗಿದ್ದರು.

ADVERTISEMENT

ಕೊಲ್ಹಾರ ತಹಶೀಲ್ದಾರ್‌ ಎಂಎಎಸ್ ಬಾಗವಾನ ನೇತೃತ್ವದಲ್ಲಿ ಕೆಬಿಜೆಎನ್ಎಲ್ ರಕ್ಷಣಾ ತಂಡ, ಅಗ್ನಿಶಾಮಕ ದಳ, ಪೊಲೀಸ್ ಹಾಗೂ ಮೀನುಗಾರಿಕೆ ಇಲಾಖೆ, ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ಶುಕ್ರವಾರ ಸಂಜೆ ವರೆಗೂ ಶೋಧ ಕಾರ್ಯ ನಡೆಸಿದರೂ ಮೀನುಗಾರರ ದೇಹಗಳು ಪತ್ತೆಯಾಗಿರಲಿಲ್ಲ.

ಪರಶುರಾಮ ಲಮಾಣಿ ಶವ ಸಿದ್ದನಾಥ ತಾಂಡಾದ ಬಳಿ ಮತ್ತು ರಮೇಶ ಲಮಾಣಿ ಮೃತದೇಹ ನಿಡಗುಂದಿ ತಾಲ್ಲೂಕಿನ ಗಣಿ ಗ್ರಾಮದ ಬಳಿಯ ನದಿ ದಡೆಗಳಲ್ಲಿ ಪತ್ತೆಯಾಗಿವೆ.

ಮೃತ ಮೀನುಗಾರರಿಬ್ಬರು ಸಿದ್ದನಾಥ ತಾಂಡ ನಿವಾಸಿಗಳು. ಮೀನುಗಾರರ ಅಗಲಿಕೆಯಿಂದ ಸಿದ್ದನಾಥ ಹಾಗೂ ಪಕ್ಕದ ರೊಳ್ಳಿ ಗ್ರಾಮ ಮತ್ತು ಎರಡು ತಾಂಡಾಗಳು ಶೋಕಸಾಗರದಲ್ಲಿ ಮುಳುಗಿದ್ದವು. ಮೀನುಗಾರರ ಕುಟುಂಬಸ್ಥರು ಹಾಗೂ ಸಂಬಂಧಿಗಳ ಆಕ್ರಂದನ ಮುಗಿಲುಮುಟ್ಟಿತ್ತು. ಕೃಷ್ಣಾ ನದಿ ದಡದಲ್ಲಿ ಇಬ್ಬರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಮೀನುಗಾರಿಕೆಯನ್ನೇ ಅವಲಂಭಿಸಿದ್ದ ಮೃತ ಬಡ ಮೀನುಗಾರರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಯಾವುದಾದರೂ ರೂಪದಲ್ಲಿ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಒತ್ತಾಯಿಸಿದರು.

ಘಟನಾ ಸ್ಥಳಕ್ಕೆ ತಹಶೀಲ್ದಾರ್‌ ಎಂಎಎಸ್ ಬಾಗವಾನ, ಉಪ ತಹಶೀಲ್ದಾರ್‌ ಎ.ಎಂ.ಗಿರಿನಿವಾಸ, ತಾ.ಪಂ. ಇಒ ಭಾರತಿ ಚಲುವಯ್ಯ, ಕೊಲ್ಹಾರ ಪಿಎಸ್ಐ ವಿನೋದ್ ದೊಡ್ಡಮನಿ, ಮುಖಂಡರಾದ ತಾನಾಜಿ ನಾಗರಾಳ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.