ADVERTISEMENT

ಮತಪೆಟ್ಟಿಗೆಯಲ್ಲಿ ಮೇಲ್ಮನೆ ಅಭ್ಯರ್ಥಿಗಳ ಭವಿಷ್ಯ

ಪರಿಷತ್‌ ಚುನಾವಣೆ ಶಾಂತಿಯುತ; ವಾಯವ್ಯ ಶಿಕ್ಷಕರ ಕ್ಷೇತ್ರಕ್ಕೆ ಶೇ 80.15, ಪದವೀಧರ ಕ್ಷೇತ್ರಕ್ಕೆ ಶೇ 62.36 ಮತದಾನ

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 14:47 IST
Last Updated 13 ಜೂನ್ 2022, 14:47 IST
ವಿಧಾನ ಪರಿಷತ್ ವಾಯವ್ಯ ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳಿಗೆ ಸೋಮವಾರ ವಿಜಯಪುರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಮತಗಟ್ಟೆ ಎದುರು ಮಹಿಳೆಯರು ತಮ್ಮ ಹಕ್ಕು ಚಲಾಯಿಸಲು ಸರದಿಯಲ್ಲಿ ನಿಂತಿದ್ದರು
ವಿಧಾನ ಪರಿಷತ್ ವಾಯವ್ಯ ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳಿಗೆ ಸೋಮವಾರ ವಿಜಯಪುರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಮತಗಟ್ಟೆ ಎದುರು ಮಹಿಳೆಯರು ತಮ್ಮ ಹಕ್ಕು ಚಲಾಯಿಸಲು ಸರದಿಯಲ್ಲಿ ನಿಂತಿದ್ದರು   

ವಿಜಯಪುರ: ವಿಧಾನ ಪರಿಷತ್‌ ವಾಯವ್ಯ ಪದವೀಧರ ಮತ್ತು ಶಿಕ್ಷಕ ಕ್ಷೇತ್ರಕ್ಕೆ ಜಿಲ್ಲೆಯಾದ್ಯಂತ ಸೋಮವಾರ ಶಾಂತಿಯುತವಾಗಿ ಮತದಾನ ನಡೆಯಿತು.

ಶಿಕ್ಷಕ ಕ್ಷೇತ್ರಕ್ಕೆ ಶೇ 80.15 ಹಾಗೂ ಪದವೀಧರ ಕ್ಷೇತ್ರಕ್ಕೆ ಶೇ 62.36ರಷ್ಟು ಮತದಾನವಾಗಿರುವುದಾಗಿ ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಶಿಕ್ಷಕರ ಮತಕ್ಷೇತ್ರ: ವಾಯವ್ಯ ಶಿಕ್ಷಕರ ಮತಕ್ಷೇತ್ರಕ್ಕೆ ಬೆಳಿಗ್ಗೆ 8 ರಿಂದ 10ರ ವರೆಗೆ ಶೇ 11.36ರಷ್ಟು, 12ರ ವರೆಗೆ ಶೇ 34.81ರಷ್ಟು, ಮಧ್ಯಾಹ್ನ 2ರ ವರೆಗೆ ಶೇ 59.17 ಮತ್ತು ಸಂಜೆ 4ರ ವರೆಗೆ ಶೇ 73.73ರಷ್ಟು ಹಾಗೂ ಸಂಜೆ 5ರ ವರೆಗೆ ಶೇ 80.15ರಷ್ಟು ಮತದಾನವಾಗಿದೆ.

ADVERTISEMENT

ಪದವೀಧರ ಮತಕ್ಷೇತ್ರ: ವಾಯವ್ಯ ಪದವೀಧರ ಮತಕ್ಷೇತ್ರಕ್ಕೆ ಬೆಳಿಗ್ಗೆ 8ರಿಂದ 10ರ ವರೆಗೆ ಶೇ 7.95ರಷ್ಟು, ಮಧ್ಯಾಹ್ನ 12ರ ವರೆಗೆ ಶೇ 24.08ರಷ್ಟು, ಮಧ್ಯಾಹ್ನ 2ರ ರವರೆಗೆ ಶೇ 42.58 ಮತ್ತು ಸಂಜೆ 4ರ ವರೆಗೆ ಶೇ 57.38ರಷ್ಟು ಹಾಗೂ ಸಂಜೆ 5ರ ವರೆಗೆ ಶೇ62.36ರಷ್ಟು ಮತದಾನವಾಗಿದೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ.

ಬೆಳಿಗ್ಗೆ 8 ಗಂಟೆಗೆ ಮತದಾನ ಆರಂಭವಾದರೂ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು, ಪದವೀಧರರು ಮತಗಟ್ಟೆಯತ್ತ ಸುಳಿಯಲಿಲ್ಲ. 10 ಗಂಟೆ ಬಳಿಕ ಮತದಾನ ಚುರುಕುಗೊಂಡಿತು. ಮತದಾರರು ಸರದಿಯಲ್ಲಿ ನಿಂತು ಉತ್ಸಾಹದಿಂದ ಹಕ್ಕು ಚಲಾಯಿಸಿದರು. ಮಧ್ಯಾಹ್ನದಿಂದ ಮತದಾನದ ಮುಕ್ತಾಯದವರೆಗೂ ಬಿರುಸಿನಿಂದ ಮತದಾನ ನಡೆಯಿತು.

ಬಿಜೆಪಿ ಮುಖಂಡರ ಹುರುಪು: ಜಿಲ್ಲೆಯಾದ್ಯಂತ ಮತಗಟ್ಟೆಗಳ ಎದುರು ಬಿಜೆಪಿ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಉತ್ಸಾಹದಿಂದ ತಮ್ಮ ಅಭ್ಯರ್ಥಿಗಳ ಪರ ಮತ ಹಾಕಿಸುವ ಕಾರ್ಯದಲ್ಲಿ ತೊಡಗಿದ್ದರು. ಆದರೆ, ಕಾಂಗ್ರೆಸ್‌, ಜೆಡಿಎಸ್‌, ಪಕ್ಷೇತರ ಅಭ್ಯರ್ಥಿಗಳ ಪರ ಕಾರ್ಯಕರ್ತರು, ಮುಖಂಡರು ಕಂಡುಬರಲಿಲ್ಲ.

ಸಿಂದಗಿಯಲ್ಲಿ ಧರಣಿ: ಸಿಂದಗಿ ತಾಲ್ಲೂಕು ಆಡಳಿತಸೌಧದ ಮುಖ್ಯದ್ವಾರದ ಎದುರು ಬಿಜೆಪಿ ಏಜೆಂಟ್ ಮಲ್ಲೂ ಪೂಜಾರಿ ಧರಣಿ ನಡೆಸಿದರು.

ಕಾಂಗ್ರೆಸ್ ಏಜೆಂಟ್ ಯೋಗಪ್ಪಗೌಡ ಪಾಟೀಲ ಅವರಿಗೆ ಪದೇ ಪದೇ ಹೊರಗಡೆ ಹೋಗಲು ಏಕೆ ಬಿಡುತ್ತೀರಾ ಎಂದು ಆಕ್ಷೇಪ ವ್ಯಕ್ತಪಡಿಸಿ ಪೊಲೀಸರ ಜೊತೆ ವಾಗ್ವಾದ ನಡೆಸಿದರು.

‘ಕಾಂಗ್ರೆಸ್ ಏಜೆಂಟ್‌ಗೆ ಮಧುಮೇಹದ ಸಮಸ್ಯೆ ಇರುವುದರಿಂದ ಮೂತ್ರಾಲಯಕ್ಕೆ ಹೋಗಲು ಅವಕಾಶ ನೀಡಲಾಗುತ್ತಿದೆ’ ಎಂದು ಪೋಲಿಸರು ಪ್ರತಿಕ್ರಿಯಿಸಿದರು.

ಮತ ಚಲಾಯಿಸಿದ ಶಹಪೂರ: ವಿಧಾನ ಪರಿಷತ್ ವಾಯವ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಪೂರ ವಿಜಯಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಸಿಂದಗಿ ಶಾಸಕ ರಮೇಶ ಭೂಸನೂರ ಅವರು ಆಲಮೇಲ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಅವರು ತಿಕೋಟಾ ಮತಗಟ್ಟೆಗೆ ಭೇಟಿ ನೀಡಿ, ಮತದಾರರ ಮನವೊಲಿಸುವ ಪ್ರಯತ್ನ ನಡೆಸಿದರು.

ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರು ಮತಗಟ್ಟೆಗೆ ಭೇಟಿ ನೀಡಿ, ಕೊನೇ ಕ್ಷಣದಲ್ಲೂ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದರು.

ಮತಗಟ್ಟೆ ಸಮೀಪ ವಿವಿಧ ಪಕ್ಷಗಳ ಮುಖಂಡರು ಕೊನೇ ಕ್ಷಣದ ಪ್ರಯತ್ನ ನಡೆಸಿದರು. ಜೊತೆಗೆ ಶಿಕ್ಷಕರು, ಪದವೀಧರರಿಗೆ ಚಹಾ, ಕಾಫಿ, ಉಪಾಹಾರ ನೀಡಿ ಮತಗಟ್ಟೆಗೆ ಕರೆತರುವ ಕಾರ್ಯವನ್ನು ನಡೆಸಿದ್ದರು.

ಡಿ.ಸಿ, ಎಸ್‌.ಪಿ ಪರಿಶೀಲನೆ: ಜಿಲ್ಲಾಧಿಕಾರಿ ವಿಜಯಮಹಾಂತೇಶ್‌ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ್‌ ನಗರದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ, ಖುದ್ದು ಪರಿಶೀಲಿಸಿದರು.

*****

ತಾಲ್ಲೂಕುವಾರು ಮತದಾನದ ವಿವರ

ತಾಲ್ಲೂಕು;ಪದವೀಧರ ಕ್ಷೇತ್ರ;ಶಿಕ್ಷಕರ ಕ್ಷೇತ್ರ

ವಿಜಯಪುರ;56.03;72.39

ಬಬಲೇಶ್ವರ;61.34;95.00

ತಿಕೋಟಾ;59.55;83.94

ಬ,ಬಾಗೇವಾಡಿ;63.71;80.07

ನಿಡಗುಂದಿ;68.93;84.97

ಕೊಲ್ಹಾರ;55.83;91.03

ಮುದ್ದೇಬಿಹಾಳ;65.41;88.45

ತಾಳಿಕೋಟೆ;70.24;87.03

ಇಂಡಿ;65.83;87.96

ಚಡಚಣ;‌70.18;86.22

ಸಿಂದಗಿ;64.52;87.08

ದೇವರಹಿಪ್ಪರಗಿ;67.89;78.38

*****

ಹುಕ್ಕೇರಿ ಅನರ್ಹಗೊಳಿಸಲು ಒತ್ತಾಯ

ವಿಜಯಪುರ: ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರು ಸೋಲಿನ ಭೀತಿಯಿಂದ ಮತದಾರರಿಗೆ ಹಣದ ಆಮಿಷ ಒಡ್ಡಿದ್ದಾರೆ. ಎಲ್ಲ ಕಡೆ ಹಣ ಹಂಚುತ್ತಿದ್ದಾರೆ. ಚುನಾವಣೆ ಆಯೋಗ ಹುಕ್ಕೇರಿ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಬೇಕು ಎಂದು ವಾಯವ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಪೂರ ಆಗ್ರಹಿಸಿದರು.

ನಗರದಲ್ಲಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಥಮ ಪ್ರಾಶಸ್ತ್ಯದ ಮತಗಳಿಂದ ಬಾರಿ ಅಂತರದಿಂದ ನನ್ನ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೂರು: ಮತದಾರರಿಗೆ ಹಣ ಹಂಚಿಕೆ ಮಾಡಿರುವ ಕಾಂಗ್ರೆಸ್‌ ಅಭ್ಯರ್ಥಿ ಹುಕ್ಕೇರಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಅಭ್ಯರ್ಥಿ ಅರುಣ ಶಹಪೂರ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ ಅವರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರಿಗೆ ದೂರು ನೀಡಿದರು.

****

ಕಾಂಗ್ರೆಸ್‌ಗೆ ಸೇರಿದ ₹17.40 ಲಕ್ಷ ವಶ

ವಿಜಯಪುರ: ವಾಯವ್ಯ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದ ಮತದಾರರಿಗೆ ಹಂಚಲು ಕಾರಿನಲ್ಲಿ ಕೊಂಡೊಯ್ಯತ್ತಿದ್ದ ₹17.40 ಲಕ್ಷ ನಗದನ್ನು ಚುನಾವಣಾಧಿಕಾರಿಗಳು ಭಾನುವಾರ ಸಂಜೆ ನಗರದ ಸೆಟಲೈಟ್ ಬಸ್ ನಿಲ್ದಾಣದ ಬಳಿ ವಶಪಡಿಸಿಕೊಂಡಿದ್ದಾರೆ.

ವಾಯವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರ ಬೆಂಬಲಿಗ ಬಾಬಸಾಹೇಬ ಖೋತ್ ಸೇರಿದಂತೆ ಆರು ಜನರು ಸಿಕ್ಕಿ ಬಿದ್ದಿದ್ದಾರೆ.

ಮಹಾರಾಷ್ಟ್ರ ನೋಂದಣಿ ಹೊಂದಿರುವ ಕಾರಿನಲ್ಲಿ ₹10 ಸಾವಿರದಂತೆ 174 ಪಾಕೇಟ್‌ಗಳಲ್ಲಿ ಹಣದ ಜೊತೆಗೆ ಪ್ರಕಾಶ ಹುಕ್ಕೇರಿ ಅವರ ಬ್ಯಾಲೆಟ್ ಪೇಪರ್ ಮಾದರಿ ಕರಪತ್ರವನ್ನು ಇರಿಸಿ, ಮತದಾರರಿಗೆ ಹಂಚಲು ಕೊಂಡೊಯ್ಯುತ್ತಿರುವಾಗ ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಎ.ಎಸ್.ಕೊಲ್ಹಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.