ADVERTISEMENT

ಕಣಕಾಲದ ಮೆರುಗು ಹೆಚ್ಚಿಸಿದ ಚಂದದ ಬಾವಿ

ಪ್ರಕಾಶ ಎನ್.ಮಸಬಿನಾಳ
Published 16 ಅಕ್ಟೋಬರ್ 2022, 4:57 IST
Last Updated 16 ಅಕ್ಟೋಬರ್ 2022, 4:57 IST
 ಬಸವನಬಾಗೇವಾಡಿ ತಾಲ್ಲೂಕಿನ ಕಣಕಾಲ ಗ್ರಾಮದಲ್ಲಿನ ಐತಿಹಾಸಿಕ ಬಾವಿ
 ಬಸವನಬಾಗೇವಾಡಿ ತಾಲ್ಲೂಕಿನ ಕಣಕಾಲ ಗ್ರಾಮದಲ್ಲಿನ ಐತಿಹಾಸಿಕ ಬಾವಿ   

ಬಸವನಬಾಗೇವಾಡಿ: ತಾಲ್ಲೂಕಿನ ಕಣಕಾಲ ಗ್ರಾಮದಲ್ಲಿನ ಐತಿಹಾಸಿಕ ದೊಡ್ಡ ಬಾವಿ ಹಲವು ವಿಶೇಷತೆಗಳಿಂದ ನೋಡುಗರ ಗಮನ ಸೆಳೆಯುತ್ತಿದೆ.

ಗ್ರಾಮ ಪಂಚಾಯಿತಿ ಕಚೇರಿ ಹತ್ತಿರವಿರುವ ವಿಶಾಲ ಬಾವಿಯನ್ನು ಚಾಲುಕ್ಯರು ನಿರ್ಮಿಸಿದ್ದಾರೆ ಎಂದು ಕೆಲ ಗ್ರಾಮಸ್ಥರು ಅಭಿಪ್ರಾಯ ಪಡುತ್ತಾರೆ. ಬಿಳಿ ಕಲ್ಲುಗಳನ್ನು ಬಳಸಿ ನಿರ್ಮಿಸಿರುವ ಬಾವಿಯಲ್ಲಿ ಇಳಿಯಲು ಎರಡು ಕಡೆ ಮೆಟ್ಟಿಲುಗಳಿವೆ. ಸುರಂಗ ಮಾರ್ಗದಿಂದ ಬಾವಿಗೆ ತೆರಳಲು ಒಂದು ಮಾರ್ಗವಿದೆ. ಬಾವಿಯ ಮೆಲ್ಬಾಗದ ಸುತ್ತಲು ಇರುವ ಸಾಲು ಸಾಲು ಕಮಾನುಗಳು ಗಮನ ಸೆಳೆಯುತ್ತವೆ. ಬಾವಿಯ ಸುತ್ತಲಿನ ಗೋಡೆಗಳ ಮೇಲೆ ರಾಮ, ಲಕ್ಷ್ಮಣರು ಬಿಲ್ಲು ಹಿಡಿದುಕೊಂಡು ನಿಂತಿರುವ, ಆಂಜನೇಯ, ಹತ್ತು ತಲೆಯ ರಾವಣ, ತಂದೆ-ತಾಯಿಯನ್ನು ಹೊತ್ತುಕೊಂಡು ಹೋಗುತ್ತಿರುವ ಶ್ರವಣಕುಮಾರ, ನರ್ತಕಿಯರು ಸೇರಿದಂತೆ ವಿವಿಧ ಶಿಲ್ಪಕಲೆಗಳು ಮನಮೋಹಕವಾಗಿವೆ.

ಗ್ರಾಮದಲ್ಲಿ ಈ ಐತಿಹಾಸಿಕ ಬಾವಿಯು ಕೆಲ ಶತಮಾನಗಳಿಂದಲೂ ಗ್ರಾಮಸ್ಥರಿಗೆ ಕುಡಿಯುವ ನೀರಿನ ಮೂಲವಾಗಿತ್ತು. ಕೊಳವೆಬಾವಿಗಳ ಹೆಚ್ಚಳದಿಂದಾಗಿ ಈ ಬಾವಿಯ ನೀರು ಸದ್ಯ ಬಳಕೆಯಾಗುತ್ತಿಲ್ಲ. ಬಾವಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಮುಂದಿನ ಪೀಳಿಗೆಯವರಿಗೆ ಬಾವಿಗಳು ಹೀಗಿದ್ದವು ಎಂಬುದನ್ನು ಚಿತ್ರದ ಮೂಲಕ ತೋರಿಸುವ ಪರಿಸ್ಥಿತಿ ಬರಬಹುದು. ಹಿಂದೆ ರಾಜ ಮಹಾರಾಜರ ಆಳ್ವಿಕೆ ಕಾಲದಲ್ಲಿ ನಿರ್ಮಾಣಗೊಂಡಿರುವ ಐತಿಹಾಸಿಕ ಬಾವಿಗಳನ್ನು ಸಂರಕ್ಷಣೆ ಮಾಡಬೇಕು. ಅವುಗಳ ಮಹತ್ವ ತಿಳಿಸಿಕೊಡುವಂತಾಗಬೇಕು ಎಂದು ಗ್ರಾಮಸ್ಥರು ಅಭಿಪ್ರಾಯ ಪಡುತ್ತಾರೆ.

ADVERTISEMENT

ಬಾವಿಯ ಸ್ವಚ್ಛಗೊಳಿಸಿ ಜಾಗೃತಿ:

ಗ್ರಾಮಸ್ಥರ ಸಹಯೋಗದಲ್ಲಿ ಬಸವನಬಾಗೇವಾಡಿಯ ಜೇನುಗೂಡು ಸಂಸ್ಥೆ ಸದಸ್ಯರು ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಇತ್ತೀಚೆಗೆ ಶ್ರಮದಾನದ ಮೂಲಕ ಬಾವಿಯಲ್ಲಿನ ನೀರಿನ ಮೇಲಿರುವ ಕಸವನ್ನು ತೆರವುಗೊಳಿಸಿದ್ದಾರೆ.

ಮೆಟ್ಟಿಲುಗಳ ಮೇಲಿನ ಕಸ ತೆಗೆಯುವುದರೊಂದಿಗೆ ಬಾವಿಯ ಸುತ್ತಲೂ ಬೆಳೆದು ನಿಂತಿದ್ದ ಗಿಡಗಂಟಿಗಳನ್ನು ಕಡಿಯುವ ಮೂಲಕ ಬಾವಿಯ ಅಂದ ಮರುಕಳಿಸುವ ಪ್ರಯತ್ನ ಮಾಡಿದ್ದಾರೆ. ಇವರ ಈ ಕಾರ್ಯವು ಇತರಿಗೆ ಜಾಗೃತಿ ಮೂಡಿಸಿದೆ. ಬಸವನಬಾಗೇವಾಡಿಯ ಬಸವೇಶ್ವರ ದೇವಸ್ಥಾನದ ಬಸವತೀರ್ಥ ಬಾವಿ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ಐತಿಹಾಸಿಕ ಬಾವಿಗಳನ್ನು ಸ್ವಚ್ಛಗೊಳಿಸುವ ಮೂಲಕ ಬಾವಿಗಳ ಮಹತ್ವ ಹಾಗೂ ಅವುಗಳ ಸರಂಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗಿದೆ ಎನ್ನುತ್ತಾರೆ ಜೇನಗೂಡು ಸಂಸ್ಥೆಯ ಸದಸ್ಯ ಸತೀಶ ಕ್ವಾಟಿ.

ಗ್ರಾಮದಲ್ಲಿನ ಐತಿಹಾಸಿಕ ಬಾವಿಯು ಗ್ರಾಮದ ಮೆರಗು ಹೆಚ್ಚಿಸಿದೆ. ಇಂತಹ ಐತಿಹಾಸಿಕ ಬಾವಿಗಳ ಸಂರಕ್ಷಣೆ ಮಾಡುವ ಅಗತ್ಯತೆ ಇದೆ. ಜೇನುಗೂಡು ಸಂಸ್ಥೆ ಸದಸ್ಯರು ಗ್ರಾಮಸ್ಥರ ಸಹಕಾರದೊಂದಿಗೆ ಬಾವಿಯ ಸ್ವಚ್ಛತಾ ಕಾರ್ಯ ಮಾಡಿರುವ ಶ್ಲಾಘನೀಯವಾಗಿದೆ ಎನ್ನುತ್ತಾರೆ ಗ್ರಾಮದ ಮುಖಂಡ ರಾಜಶೇಖರ ಹುಲ್ಲೂರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.