ಪ್ರಕಾಶ ಎನ್.ಮಸಬಿನಾಳ
ಬಸವನಬಾಗೇವಾಡಿ: ತಮ್ಮ ಜಮೀನುಗಳಿಗೆ ಹೋಗಲು ಸಮರ್ಪಕವಾದ ವಹಿವಾಟು ದಾರಿ ಇರದೇ ಇರುವುದರಿಂದ ಸಾಕಷ್ಟು ಸಂಖ್ಯೆಯ ರೈತರು ಸ್ವಂತ ಜಮೀನಿದ್ದರೂ ಕೃಷಿ ಚಟುವಟಿಕೆಯಲ್ಲಿ ಉತ್ಸುಕತೆ ತೋರುತ್ತಿಲ್ಲ.
ಕೆಲ ವರ್ಷಗಳ ಹಿಂದೆ ಜಮೀನುಗಳಿಗೆ ತೆರಳಲು ನಿರ್ದಿಷ್ಟವಾದ ದಾರಿ ಇಲ್ಲದೇ ಇದ್ದರೂ ಪ್ರಮುಖ ರಸ್ತೆಯಿಂದ ಜಮೀನುಗಳಿಗೆ ತೆರಳಲು ಅನುಕೂಲವಾಗುವಂತೆ ಸುತ್ತಮುತ್ತಲಿನ ಜಮೀನುಗಳ ರೈತರು ತಮ್ಮ ಜಮೀನಿನ ಒಂದು ಬದಿಯಲ್ಲಿ ಚಕ್ಕಡಿ, ಟ್ರ್ಯಾಕ್ಟರ್ ಹಾದು ಹೋಗುವಷ್ಟು ದಾರಿ ಬಿಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಭೂಮಿಗೆ ಹೆಚ್ಚು ಬೆಲೆ ಬಂದಿದ್ದರಿಂದ ರೈತರು ಬದುವನ್ನು ಸ್ವಚ್ಛಗೊಳಿಸಿ ಬಿತ್ತನೆ ಮಾಡುತ್ತಿರುವುದರಿಂದ ಕೆಲ ರೈತರು ತಮ್ಮ ಜಮೀನುಗಳಿಗೆ ತೆರಳಲು ತೊಂದರೆ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸುತ್ತ ಮುತ್ತಲಿನ ಪರಿಚಯಸ್ಥರ ಜಮೀನುಗಳ ಬದಿಯ ಮೂಲಕ ಇಂಗಳೇಶ್ವರ ರಸ್ತೆಯಲ್ಲಿನ ಒಣಬೇಸಾಯದ ತಮ್ಮ ಹೊಲಕ್ಕೆ ತೆರಳುತ್ತಿದ್ದ ಬಸವನಬಾಗೇವಾಡಿಯ ಪದವೀಧರ ರೈತ ಪ್ರಕಾಶ ಪಟ್ಟಣಶೆಟ್ಟಿ , ತಮ್ಮ ಹೊಲದಲ್ಲಿ ಕೊಳವೆ ಬಾವಿ ತೊಡಿಸಿ ಒಂದಷ್ಟು ಜಮೀನಿನಲ್ಲಿ ಲಿಂಬೆ, ನುಗ್ಗೆ ಸೇರಿದಂತೆ ವಿವಿಧ ಗಿಡಗಳನ್ನು ಬೆಳೆಸಿದ್ದಾರೆ. ತೋಟದ ಕಾರ್ಯಕ್ಕಾಗಿ ಟ್ರ್ಯಾಕ್ಟರ್, ಜೆಸಿಬಿ ತೆಗೆದುಕೊಂಡು ಹೋಗುವಾಗ ಸುತ್ತ ಮುತ್ತಲಿನ ಜಮೀನಿನಲ್ಲಿ ಬೆಳೆ ಇರುವಾಗ, ಮಳೆ ಬಂದಾಗ ತೊಂದರೆ ಅನುಭವಿಸಿದ್ದಾರೆ.
ದಾರಿ ವಿಷಯವಾಗಿ ರೈತರ ಮಧ್ಯೆ ದ್ವೇಷದ ವಾತಾವರಣ ಉಂಟಾಗಿ ಹೊಡೆದಾಟ ನಡೆಯುತ್ತಿವೆ. ಸರ್ಕಾರ ಈ ವಿಷಯನ್ನು ಗಂಭೀರವಾಗಿ ಪರಿಗಣಿಸಿ ರೈತರು ಎದುರಿಸುತ್ತಿರುವ ದಾರಿ ಸಮಸ್ಯೆ ಇತ್ಯರ್ಥ ಪಡಿಸಬೇಕು.ಅರವಿಂದ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ, ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕ ವಿಜಯಪುರ
‘ಕೆಲ ಜಮೀನುಗಳ ಮಾಲೀಕರ ಸಹಕಾರದಿಂದ ಕೃಷಿ ಚಟುವಟಿಕೆಗೆ ಅಡ್ಡಿಯಾಗಿರಲಿಲ್ಲ. ಆದರೆ, ಮಳೆಗಾಲದಲ್ಲಿ ಹೊಲಗಳ ಬದುವಿನಲ್ಲಿ ಮಳೆಯ ನೀರು ನಿಂತು ಕೆಸರು ಇರುತ್ತಿರುವುದರಿಂದ ನಮ್ಮ ಜಮೀನಿಗೆ ತೆರಳಲು ಸಾಧ್ಯವಾಗುತ್ತಿರಲಿಲ್ಲ. ಜಮೀನಿನ ಬೆಳೆಯಲ್ಲಿನ ಕಸ ತೆಗೆಯಲು ಕೂಲಿ ಕಾರ್ಮಿಕರು ಬರಲು ಹಿಂಜರಿಯುತ್ತಿದ್ದರು. ಹೀಗಾಗಿ ಸಮರ್ಪಕ ಬೆಳೆ ಬಾರದೇ ಇರುವುದರಿಂದ ಕೃಷಿಯಲ್ಲಿ ನಿರಾಸಕ್ತಿ ಮೂಡಿ ರೈತರೊಬ್ಬರಿಗೆ ಲಾವಣಿಯಾಗಿ ಜಮೀನು ನೀಡಿ ನಾನು ಬೇರೆ ಉದ್ಯೋಗದಲ್ಲಿ ತೊಡಗಿಕೊಂಡಿದ್ದೇನೆ’ ಎಂದು ಪಟ್ಟಣಶೆಟ್ಟಿ ತಿಳಿಸಿದರು.
‘ನಮ್ಮ ಹೊಲಕ್ಕೆ ತೆರಳಲು ನಿರ್ದಿಷ್ಟ ದಾರಿ ಇಲ್ಲದೇ ಇರುವುದರಿಂದ ನಮ್ಮ ಜಮೀನಿನ ಉಳುಮೆಗಾಗಿ ಸುತ್ತ ಮುತ್ತಲಿನ ಜಮೀನುಗಳ ರೈತರಿಗೆ ಲಾವಣಿ ನೀಡಿ ನಾವು ಇನ್ನೊಬ್ಬರ ಬಳಿ ಕೆಲಸಕ್ಕೆ ಹೋಗುತ್ತಿದ್ದೇವೆ. ಇದು ಕೇವಲ ನನ್ನೊಬ್ಬನ ಸಮಸ್ಯೆಯಲ್ಲ ಜಮೀನಿಗೆ ತೆರಳಲು ದಾರಿ ಸಮಸ್ಯೆ ಎದುರಿಸುತ್ತಿರುವ ಸಾಕಷ್ಟು ಸಂಖ್ಯೆಯ ರೈತರ ಸಮಸ್ಯೆಯಾಗಿದೆ’ ಎಂದು ಇಂಗಳೇಶ್ವರ, ಆಲಮಟ್ಟಿ ರಸ್ತೆಯಲ್ಲಿನ ಜಮೀನುಗಳ ಮಾಲೀಕರು ತಿಳಿಸಿದರು.
‘ಬಸವನ ಬಾಗೇವಾಡಿಯ ಚಿಕ್ಕ ನಗರದ ಮಾರ್ಗವಾಗಿ ತಮ್ಮ ಜಮೀನುಗಳಿಗೆ ತೆರಳಲು ರೈತರು 3 ಕಿ.ಮೀ ಗಿಂತ ಹೆಚ್ಚು ದೂರ ದನಕರುಗಳೊಂದಿಗೆ ಹಳ್ಳದಲ್ಲೇ ನಡೆದುಕೊಂಡು ಹೋಗಬೇಕು. ಮಳೆಗಾಲದಲ್ಲಿ ಹಳ್ಳದಲ್ಲಿ ನೀರು ಬಂದರೆ ಇದ್ದ ರಸ್ತೆಯು ಇಲ್ಲದಂತಾಗುತ್ತದೆ. ನಮ್ಮ ಜಮೀನುಗಳಿಗೆ ತೆರಳಲು ದಾರಿ ಸಮಸ್ಯೆ ಪರಿಹರಿಸುವಂತೆ ಸಂಬಂಧಿಸಿದವರಿಗೆ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ’ ಎಂದು ಹಳ್ಳದ ಸುತ್ತ ಮುತ್ತಲಿನ ಜಮೀನುಗಳ ರೈತರು ತಿಳಿಸಿದರು.
‘ಜಮೀನುಗಳ ವಹಿವಾಟು ದಾರಿ ಸಮಸ್ಯೆ ನಮ್ಮ ತಾಲ್ಲೂಕಿನಲ್ಲಿ ಅಷ್ಟೆ ಅಲ್ಲ ರಾಜ್ಯದ್ಯಂತ ಗಂಭೀರ ಸಮಸ್ಯೆಯಾಗಿದೆ. ದಾರಿ ಕೊಡಬೇಕಾದ ರೈತರು ಗ್ರಾಮ ನಕ್ಷೆಯಲ್ಲಿ ದಾರಿ ಇಲ್ಲದ ನೇಪ ಹೇಳುತ್ತಾರೆ. ಇದರಿಂದ ದಾರಿ ಸಮಸ್ಯೆ ಎದುರಿಸುತ್ತಿರುವ ರೈತರು ತಮ್ಮ ಜಮೀನು ಉಳುಮೆ ಮಾಡಲಾಗದೇ ಪಾಳು ಬಿದ್ದ ಉದಾಹರಣೆಗಳು ಸಾಕಷ್ಟಿವೆ. ರಾಜ್ಯ ಸರ್ಕಾರ ಕಾನೂನು ತಿದ್ದುಪಡಿ ಮಾಡಿ ಮೊದಲಿನಂತೆ ಅನುಭೋಗದ ಹಕ್ಕಿನಡಿ ಪುನಃ ದಾರಿ ಮಾಡಿಕೊಡುವ ಅಧಿಕಾರವನ್ನು ತಹಶೀಲ್ದಾರರಿಗೆ ವಹಿಸಿ ಕೊಡಬೇಕು ಎಂದು ನಮ್ಮ ಸಂಘಟನೆ ಕಳೆದ 9 ವರ್ಷಗಳಿಂದ ಹೋರಾಟ ಮಾಡುತ್ತಿದೆ. ಆದರೂ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆಗ್ರಹಿಸಿದ್ದಾರೆ.
ಹೊಲಕ್ಕೆ ಮಾದರಿ ಸಿಸಿ ರಸ್ತೆ
ಬಸವನಬಾಗೇವಾಡಿಯಿಂದ ಸುಮಾರು 2 ಕಿ.ಮೀ ಅಂತರದಲ್ಲಿ ಇಂಗಳೇಶ್ವರ ಗ್ರಾಮಕ್ಕೆ ತೆರಳುವ ರಸ್ತೆಗೆ ಹೊಂದಿಕೊಂಡಿರುವ ಕೆಲ ತೋಟಗಳಲ್ಲಿ (ಚಿಕ್ಕ ನಗರ) ರೈತರು ಮನೆ ಕಟ್ಟಿಕೊಂಡು ನಿರಂತರವಾಗಿ ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.
ಚಿಕ್ಕ ನಗರದ ಮಾರ್ಗದ ಎರಡು ಬದಿಯಲ್ಲಿನ ಜಮೀನಗಳಿಗೆ ತೆರಳಲು ಮಣ್ಣಿನ ರಸ್ತೆ ಇದ್ದುದ್ದರಿಂದ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ರೈತರು ಸೇರಿದಂತೆ ದನಕರುಗಳು ಹೋಗಲು ಹರಸಾಹಸ ಪಡಬೇಕಾಗಿತ್ತು. ಇಲ್ಲಿನ ರೈತರ ಮನವಿಗೆ ಸ್ಪಂದಿಸಿ ಸುಮಾರು ಒಂದು ಕಿ.ಮೀ ಸಿ.ಸಿ ರಸ್ತೆ ನಿರ್ಮಾಣ ಮಾಡಿದ್ದರಿಂದ ರೈತರು ತಮ್ಮ ಜಮೀನುಗಳಿಗೆ ತೆರಳಲು ಅನುಕೂಲವಾಗಿದೆ.
ದಾರಿ ಸಮಸ್ಯೆ ಎದುರಿಸುತ್ತಿರುವ ರೈತರ ಜಮೀನಗಳಿಗೆ ಇದೇ ಮಾದರಿಯಲ್ಲಿ ರಸ್ತೆಗಳು ನಿರ್ಮಾಣವಾದರೆ ಕೃಷಿ ಚಟುವಟಿಕೆಗೆ ಹೆಚ್ಚಿನ ಉತ್ತೇಜನ ಕೊಟ್ಟಂತಾಗುತ್ತದೆ. ಅಲ್ಲದೇ ರೈತರು ವಿವಿಧ ವಾಣಿಜ್ಯ ಬೆಳೆಗಳನ್ನು ಬೆಳೆದು ಹೆಚ್ಚಿನ ಲಾಭ ಪಡೆಯಲು ಸಹಕಾರಿಯಾಗಲಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಸಂಗನಬಸು ಪೂಜಾರಿ ಅಭಿಪ್ರಾಯ ಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.