ADVERTISEMENT

ಕೊಲ್ಹಾರ: ಶೆಡ್‌ನಲ್ಲಿ ನಡೆಯುತ್ತಿದೆ ಪೊಲೀಸ್ ಠಾಣೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 4:44 IST
Last Updated 28 ಅಕ್ಟೋಬರ್ 2024, 4:44 IST
ಶೆಡ್ ಮಾದರಿಯಲ್ಲಿರುವ ಕೂಡಗಿ ಎನ್‌ಟಿಪಿಸಿ ಪೊಲೀಸ್ ಠಾಣೆ
ಶೆಡ್ ಮಾದರಿಯಲ್ಲಿರುವ ಕೂಡಗಿ ಎನ್‌ಟಿಪಿಸಿ ಪೊಲೀಸ್ ಠಾಣೆ   

ಕೊಲ್ಹಾರ: ತಾಲ್ಲೂಕಿನ ಕೂಡಗಿಯ ವಿದ್ಯುತ್ ಸ್ಥಾವರ ಪ್ರದೇಶದಲ್ಲಿ 2019ರಲ್ಲಿ ಪೊಲೀಸ್ ಠಾಣೆ ಆರಂಭಿಸಿ ರಕ್ಷಣೆ ಒದಗಿಸುವ ಕಾರ್ಯ ಮಾಡಲಾಗಿದ್ದರೂ ಪೊಲೀಸರಿಗೆ ಮಾತ್ರ ಉತ್ತಮ ಸೌಕರ್ಯ ದೊರೆತಿಲ್ಲ.

2016ರಲ್ಲಿ ಸ್ಥಾವರ ಕಾರ್ಯಾರಂಭಿಸಿತು. ಅಲ್ಲಿಗೆ ಹೊರ ರಾಜ್ಯ–ರಾಜ್ಯಗಳಿಂದ ಕಾರ್ಮಿಕರು ಬಂದು ನೆಲೆಸಿದರು. ಇವರ ರಕ್ಷಣೆಗಾಗಿ ಪೊಲೀಸ್ ಠಾಣೆಯ ಅಗತ್ಯ ಮನಗಂಡು ಎನ್‌ಟಿಪಿಸಿ ಸ್ಥಾವರ ಪಕ್ಕದಲ್ಲಿ 2019ರಲ್ಲಿ ಶೆಡ್ ಮಾದರಿಯಲ್ಲಿ ಠಾಣೆ ಸ್ಥಾಪಿಸಲಾಯಿತು. ಈಗಲೂ ಅದೇ ಮುಂದುವರಿದಿದ್ದು, ಠಾಣೆಗೆ ಸುಸಜ್ಜಿತ ಕಟ್ಟಡ ಹಾಗೂ ಪೋಲಿಸರ ವಸತಿ ಗೃಹಗಳ ನಿರ್ಮಾಣ ಮಾತ್ರ ಸಾಧ್ಯವಾಗಿಲ್ಲ.

ಠಾಣೆಗೆ ಇಬ್ಬರು ಪಿಎಸ್ಐ, ಇಬ್ಬರು ಎಎಸ್ಐ, ಹತ್ತು ಹವಾಲ್ದಾರರು, 24 ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳು ಮಂಜೂರಾಗಿವೆ. ಸದ್ಯ ಕಾರ್ಯನಿರ್ವಹಿಸುತ್ತಿರುವುದು 24 ಸಿಬ್ಬಂದಿ ಮಾತ್ರ. ಸಮೀಪವೇ ರಾಷ್ಟ್ರೀಯ ಹೆದ್ದಾರಿ ಇರುವ ಕಾರಣ ಈ ಠಾಣೆಗೆ ಕಾರ್ಯಭಾರವೂ ಹೆಚ್ಚಿದೆ.

ADVERTISEMENT

ಕೂಡಗಿ ಠಾಣೆಗೆ ಹಲವು ಗ್ರಾಮ ಪಂಚಾಯಿತಿಗಳು ಬರುತ್ತವೆ. ಈ ಪಂಚಾಯಿತಿ ಅಧ್ಯಕ್ಷರು ಹಾಗೂ ಜನಪ್ರತಿನಿಧಿಗಳು ವಿಡಿಸಿ ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಗತಿ ಕಂಡಿಲ್ಲ. ಎನ್‌ಟಿಪಿಸಿ ಅಧಿಕಾರಿಗಳು ಸ್ಥಳ ಗುರುತಿಸಿ ಕಟ್ಟಡ ಕಟ್ಟಿ ಕೊಡುವ ಭರವಸೆ ನೀಡಿದರೂ ಅದು ಭರವಸೆಯಾಗಿಯೇ ಉಳಿದಿದೆ.

ಎನ್‌ಟಿಪಿಸಿ ವತಿಯಿಂದ ಕಾರ್ಯ ವಿಳಂಬವಾದರೆ ನಾನು ಕೂಡಗಿ ತೆಲಗಿ ಮಸೂತಿ ಗ್ರಾಮದ ಸರ್ಕಾರಿ ಜಮೀನು ಗುರುತಿಸಿ ಶೀಘ್ರದಲ್ಲಿಯೇ ಠಾಣೆ ಹಾಗೂ ವಸತಿ ಗೃಹ ನಿರ್ಮಾಣ ಮಾಡಿಕೊಡುವೆ
ಶಿವಾನಂದ ಎಸ್. ಪಾಟೀಲ‌ ಸಚಿವ
ನಮ್ಮ ಠಾಣೆಗೆ ವ್ಯವಸ್ಥಿತ ಕಟ್ಟಡ ವಸತಿ ಗೃಹಗಳ ನಿರ್ಮಾಣ ಹಾಗೂ ಸಮರ್ಪಕ ಸಿಬ್ಬಂದಿ ನೀಡಿದರೆ ಮಾದರಿ ಪೊಲೀಸ್ ಠಾಣೆ ಮಾಡಲು ಸಿದ್ಧರಿದ್ದೇವೆ
ಯತೀಶ ಕೆ.ಎನ್. ಪಿಎಸ್ಐ ಕೂಡಗಿ ಎನ್‌ಟಿಪಿಸಿ ಠಾಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.