ಬಸವನಬಾಗೇವಾಡಿ(ವಿಜಯಪುರ): ಪಂಚಮಸಾಲಿ ಸಮಾಜದ ಏಳಿಗೆಗಾಗಿ ತೃತೀಯ ಶಕ್ತಿಯಾಗಿ ಒಕ್ಕೂಟ ನಿರ್ಮಾಣವಾಗಬೇಕು. ಪ್ರಜಾಪ್ರಭುತ್ವದ ತಳಹದಿಯ ಮೇಲೆ ಈ ಒಕ್ಕೂಟ ಕಾರ್ಯನಿರ್ವಹಿಸಬೇಕು ಎಂದು ಬಬಲೇಶ್ವರದ ಬೃಹನ್ ಮಠದ ಡಾ.ಮಹಾದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮನಗೂಳಿ ಹಿರೇಮಠದಲ್ಲಿ ಸೋಮವಾರ 40ಕ್ಕೂ ಹೆಚ್ಚು ಪಂಚಮಸಾಲಿ ಸ್ವಾಮೀಜಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಸಭೆ, ಸಮಾರಂಭ ನಡೆಸಿ ಸಮಾಜದ ಈಗಿರುವ ಎರಡು ಮಠಗಳಿಗೆ ಪರ್ಯಾಯವಾಗಿ ಮೂರನೇ ಶಕ್ತಿ ಒಕ್ಕೂಟ ರಾಜ್ಯದಲ್ಲಿ ತಲೆ ಎತ್ತಬೇಕು ಎನ್ನುವುದು ನಮ್ಮೆಲ್ಲರ ಆಶಯವಾಗಿದೆ ಎಂದು ಹೇಳಿದರು.
ಮನಗೂಳಿಯ ಅಭಿನವ ಸಂಗನಬಸ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪಂಚಮಸಾಲಿ ಸಮಾಜದ ಏಳೆಗಾಗಿ ಸಮಾನ ಮನಸ್ಕ ಸ್ವಾಮೀಜಿಗಳು ಸೇರಿಕೊಂಡು ಪಂಚಮಸಾಲಿ ಒಕ್ಕೂಟದ ಸಭೆ ಮಾಡುತ್ತಿದ್ದೇವೇಯೇ ಹೊರತು, ಬೇರೆನೂ ಇಲ್ಲ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯ ಕಕ್ಕಮರಿ, ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಒಕ್ಕೂಟದ ಸಭೆ ಈಗಾಗಲೇ ನಡೆದಿದೆ. ಇಂದಿನ ಮನಗೂಳಿ ಸಭೆಯ ನಂತರ ಇನ್ನೂ ಎರಡರಿಂದ ಮೂರು ಸಭೆ ಮಾಡಿ, ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ನೇಲೋಗಿಯ ಶಿವಾನಂದೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಪ್ರಚಾರಕ್ಕಾಗಿ ಹಾಗೂ ಸಮಾಜದ ಬಡ ಮಕ್ಕಳ ಉಚಿತ ವಸತಿ ನಿಲಯ, ಪ್ರಸಾದ ನಿಲಯ ಸೇರಿದಂತೆ ಸಮಾಜದ ಏಳಿಗೆಗಾಗಿ ಈ ಒಕ್ಕೂಟವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.
ಪಂಚಮಸಾಲಿ ಮೂರನೇ ಪೀಠ ಇಲ್ಲ. ಕೆಲವರು. ಇದು ಪಂಚಮಸಾಲಿ ಮೂರನೇ ಪೀಠದ ಕಾರ್ಯತಂತ್ರ ಎಂದು ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ. ಎಲ್ಲ ಪಕ್ಷದಲ್ಲಿ ಪಂಚಮಸಾಲಿ ಸಮಾಜದ ಶಾಸಕರಿದ್ದಾರೆ. ಮುಖ್ಯಮಂತ್ರಿಯಾಗುವ ಅರ್ಹತೆ ಕೂಡಾ ಇದೆ ಎಂದು ಹೇಳಿದರು.
ಈ ಒಕ್ಕೂಟಕ್ಕೆ ಯಾವ ರಾಜಕೀಯ ನಾಯಕರ ಬೆಂಬಲವು ಇಲ್ಲ. ರಾಜಕೀಯವೂ ಇಲ್ಲ. ಒಳ್ಳೆಯ ಉದ್ದೇಶಕ್ಕಾಗಿ ಒಕ್ಕೂಟ ರಚನೆಯಾಗಲಿದೆ ಎಂದು ಹೇಳಿದರು.
ಬಸವಕಲ್ಯಾಣ ಶಿವಬಸವ ಸ್ವಾಮೀಜಿ, ಸೊಲ್ಲಾಪೂರದ ಬಸವಲಿಂಗ ಸ್ವಾಮೀಜಿ, ನಾಗನೂರಿನ ಗುರುಬಸವ ಸ್ವಾಮೀಜಿ, ಕಿತ್ತೂರಿನ ಪೀರೇಶ್ವರ ಸ್ವಾಮೀಜಿ, ಅಮರಗೊಳ್ಳದ ಬಸವಲಿಂಗ ಸ್ವಾಮೀಜಿ, ಕುಚನೂರಿನ ಸಿದ್ದಲಿಂಗ ದೇವರು, ಕೊಪ್ಪಳದ ಸುಮಿತ್ರಾ ತಾಯಿ, ಬುರಣಾಪೂರದ ಯೋಗೇಶ್ವರ ಮಾತಾಜಿ, ಅಥರ್ಗಾದ ಮಾತಾ ವಚನಶ್ರೀ ಅಕ್ಕನವರು, ಮುಳ್ಳಸಾವಳಗಿಯ ದಯಾನಂದ ಸ್ವಾಮೀಜಿ, ರಾಮುಹಳ್ಳಿಯ ಭಾರತಿ ಸ್ವಾಮೀಜಿ ಸೇರಿದಂತೆ 40ಕ್ಕೂ ಹೆಚ್ಚು ಶ್ರೀಗಳು ಸಭೆಯಲ್ಲಿ ಭಾಗವಹಿಸಿದ್ದರು.
ಒಕ್ಕೂಟದಿಂದ ಸಮಾಜದ ಒಳತಿಗಾಗಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.