ADVERTISEMENT

ವಿಜಯಪುರ: ಕಾಣೆಯಾಗಿದ್ದ ಮೂವರು ಮಕ್ಕಳು ಶವವಾಗಿ ಪತ್ತೆ

​ಪ್ರಜಾವಾಣಿ ವಾರ್ತೆ
Published 13 ಮೇ 2024, 13:46 IST
Last Updated 13 ಮೇ 2024, 13:46 IST
   

ವಿಜಯಪುರ: ಭಾನುವಾರ ಮನೆಯಿಂದ ಕಾಣೆಯಾಗಿದ್ದ ಮೂವರು ಮಕ್ಕಳು ಇಂಡಿ ರಸ್ತೆಯ ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ನೀರಿನಲ್ಲಿ ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ.

ಮೃತ ಮಕ್ಕಳನ್ನು ಗದಗ ಮೂಲದ ಅನುಷ್ಕಾ (9), ವಿಜಯ (7) ಮತ್ತು ವಿಜಯಪುರದ ಮಿಹಿರ್ ಜಾನಗೌಳಿ (7) ಎಂದು ಗುರುತಿಸಲಾಗಿದೆ.

ಅನುಷ್ಕಾ ಹಾಗೂ ವಿಜಯ ಬೇಸಿಗೆ ರಜೆಯಲ್ಲಿ ತಮ್ಮ ತಾಯಿಯೊಂದಿಗೆ ವಿಜಯಪುರದ ಅಜ್ಜಿಯ ಮನೆಗೆ ಬಂದಿದ್ದರು. ಭಾನುವಾರ ಬೆಳಿಗ್ಗೆ ಮನೆ ಮುಂದೆ ಬಂದಿದ್ದ ಒಂಟೆ ಸವಾರಿ ಮಾಡಿದ್ದ ಮೂವರು ಮಕ್ಕಳು, ನಂತರ ಒಂಟೆಗಳನ್ನು ಹುಡುಕಿಕೊಂಡು ಮನೆ ಹತ್ತಿರದ ಚಾಬು ಕಸಾಬ್ ದರ್ಗಾ ಬಳಿ ಹೋಗಿದ್ದರು. ಅಲ್ಲಿ ಒಂಟೆಗಳು ಕಾಣದಿದ್ದಾಗ ಮನೆಗೆ ಬಾರದೇ ಮೂರೂ ಮಕ್ಕಳು ಕಾಣೆಯಾಗಿದ್ದರು.

ADVERTISEMENT

ಮಕ್ಕಳು ಬಹಳ ಹೊತ್ತಾದರೂ ಮನೆಗೆ ಬಾರದ ಕಾರಣ ಆತಂಕಗೊಂಡ ಪೋಷಕರು ಅಕ್ಕಪಕ್ಕದ ಸಿಸಿ ಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದಾರೆ. ಬಳಿಕ ನಗರದ ಎಪಿಎಂಸಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಕುಟುಂಬಸ್ಥರು ಹಾಗೂ ಪೊಲೀಸರು ಮಕ್ಕಳಿಗಾಗಿ ಹುಡುಕಾಟ ನಡೆಸಿದಾಗ ಸೋಮವಾರ ಒಳಚರಂಡಿ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಪೋಷಕರ ಪ್ರತಿಭಟನೆ:

ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲದ ಕಾರಣ ಮಕ್ಕಳು ಸಾವಿಗೀಡಾಗಿವೆ ಎಂದು ಪೋಷಕರು ಪ್ರತಿಭಟನೆ ನಡೆಸಿದರು.

ನಗರದಲ್ಲಿ ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣಾ ಅಪಾಯಕಾರಿ ಘಟಕ ಇದ್ದರೂ ಮಹಾನಗರ ಪಾಲಿಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಘಟಕದ ಸುತ್ತಲೂ ತಂತಿಬೇಲಿ, ತಡೆಗೋಡೆ ನಿರ್ಮಾಣ ಮಾಡಿಲ್ಲ, ಸ್ಥಳದಲ್ಲಿ ಕಾವಲುಗಾರರನ್ನು ಬಿಯೋಜಿಸಿಲ್ಲ, ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಪಾಲಿಕೆ ನಿರ್ಲಕ್ಷದ ವಿರುದ್ದ ಆಕ್ರೋಶ ಹೊರ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.