ADVERTISEMENT

ಕೊಲ್ಹಾರ: ಆದಿಶಕ್ತಿ ಉತ್ಸವಕ್ಕೆ ಮೂರು ದಶಕದ ಸಂಭ್ರಮ

ಕೊಲ್ಹಾರದ ಆದಿಶಕ್ತಿ ಯುವಕ ಮಂಡಳಿ ಆಶ್ರಯದಲ್ಲಿ ಅದ್ಧೂರಿ ನವರಾತ್ರಿ ಉತ್ಸವ

ಬಸವರಾಜ ಎಸ್.ಉಳ್ಳಾಗಡ್ಡಿ
Published 29 ಸೆಪ್ಟೆಂಬರ್ 2022, 19:30 IST
Last Updated 29 ಸೆಪ್ಟೆಂಬರ್ 2022, 19:30 IST
ಕೊಲ್ಹಾರದಲ್ಲಿ ನವರಾತ್ರಿ ಪ್ರಯುಕ್ತ ಶ್ರೀ ಆದಿಶಕ್ತಿ ಯುವಕ ಮಂಡಳಿಯಿಂದ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿರುವ ದೇವಿ ಮೂರ್ತಿ
ಕೊಲ್ಹಾರದಲ್ಲಿ ನವರಾತ್ರಿ ಪ್ರಯುಕ್ತ ಶ್ರೀ ಆದಿಶಕ್ತಿ ಯುವಕ ಮಂಡಳಿಯಿಂದ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿರುವ ದೇವಿ ಮೂರ್ತಿ   

ಕೊಲ್ಹಾರ: ಪಟ್ಟಣದ ಶ್ರೀ ಆದಿಶಕ್ತಿ ಯುವಕ ಮಂಡಳಿಯು 33 ವರ್ಷಗಳಿಂದ ದೇವಿ ಮೂರ್ತಿ ಪ್ರತಿಷ್ಠಾಪಿಸಿ, ನವರಾತ್ರಿ ಉತ್ಸವವನ್ನು ಭಕ್ತಿಭಾವದಿಂದ ಆಚರಿಸಿಕೊಂಡು ಬರಲಾಗುತ್ತಿದೆ.

ಹಳೆ ಗ್ರಾಮದಲ್ಲಿ ದ್ಯಾಮವ್ವದೇವಿ ಓಣಿಯ ಯುವಕರೆಲ್ಲರೂ ಒಗ್ಗೂಡಿ 1989ರಲ್ಲಿ ಜಿ.ಎನ್.ಗಣಿ ಹಾಗೂ ಶಿಕ್ಷಕ ಎಸ್.ಎಸ್. ಪತಂಗಿ ಅವರ ನೇತೃತ್ವದಲ್ಲಿ ಆದಿಶಕ್ತಿ ಯುವಕ ಮಂಡಳಿಯನ್ನು ಸ್ಥಾಪಿಸಿ, ಪ್ರಥಮ ಬಾರಿಗೆ ಆದಿಶಕ್ತಿ ದೇವಿ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ನವರಾತ್ರಿ ಉತ್ಸವ ಆಚರಣೆ ಆರಂಭಿಸಿದರು.

ಅಂದಿನಿಂದ ಮಂಡಳಿ ಆಶ್ರಯದಲ್ಲಿ ಪ್ರತಿವರ್ಷ ನವರಾತ್ರಿ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದ್ದು, ಪ್ರತಿದಿನ ಪೂಜ್ಯರಿಂದ ದೇವಿಯ ಪಾರಾಯಣ, ಭಕ್ತರಿಂದ ದಿನ್ನೆಕೆರಡು ಬಾರಿ ವಿಶೇಷ ಪೂಜಾ ಕೈಂಕರ್ಯ ಜರುಗುತ್ತದೆ.

ADVERTISEMENT

1999-2000 ರಲ್ಲಿ ಕೊಲ್ಹಾರ ಗ್ರಾಮ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಗೊಂಡ ನಂತರ ಮಂಡಳಿಯೂ ನೂತನ ಗ್ರಾಮದ ದ್ಯಾಮವ್ವದೇವಿ ದೇವಸ್ಥಾನದ ಎದುರಿನ ರಸ್ತೆಯಲ್ಲಿ ದೇವಿ ಮೂರ್ತಿ ಪ್ರತಿಷ್ಠಾಪಿಸಿ, ನವರಾತ್ರಿ ಉತ್ಸವ ಮುಂದುವರೆಸಿಕೊಂಡು ಬರಲಾಗುತ್ತಿದೆ.

2009-10 ರಿಂದ ಹಿರಿಯರಾದ ಜಿ.ಎನ್.ಗಣಿ, ನಿವೃತ್ತ ಶಿಕ್ಷಕ ಎಸ್.ಎಸ್.ಪತಂಗಿಯವರ ಮಾರ್ಗದರ್ಶನದಲ್ಲಿ ಮುಖಂಡರಾದ ಶಶಿಧರ ದೇಸಾಯಿ, ಚಂದ್ರಶೇಖರ ಬೆಳ್ಳುಬ್ಬಿ, ನಾಮದೇವ ಪವಾರ, ಡಿ.ಆರ್.ಕೊಠಾರಿ, ಡೋಂಗ್ರಿ ಕಟಬರ ಹಾಗೂ ಸದಾಶಿವ ಪತಂಗಿ ಅವರನ್ನೊಳಗೊಂಡ ಯುವ ತಂಡ ದೇವಿಯ ನವರಾತ್ರಿ ಉತ್ಸವ ಆಚರಣೆ ಮುಂದುವರೆಸಿಕೊಂಡು ಬಂದಿದೆ.

ಆರಂಭದಲ್ಲಿ ದೇವಿಯ ಪಿಒಪಿ ಮೂರ್ತಿ ಪ್ರತಿಷ್ಠಾಪಿಸಲಾಗುತಿತ್ತು. 2010 ರಲ್ಲಿ ಗ್ರಾಮಸ್ಥರೆಲ್ಲರೂ ದೇಣಿಗೆ ಸೇರಿಸಿ ಆಗ ಸುಮಾರು ₹ 2 ಲಕ್ಷ ವೆಚ್ಚದಲ್ಲಿ 6 ಅಡಿ ಎತ್ತರದ ಆದಿಶಕ್ತಿ ದೇವಿಯ ಪಂಚಲೋಹದ ವಿಗ್ರಹ ಮಾಡಿಸಿ ನವರಾತ್ರಿ ವೇಳೆ ಪ್ರತಿಷ್ಠಾಪಿಸಲಾಯಿತು.

ಇದೇ ವೇಳೆ ಆಗ ಜಿ.ಪಂ ಸದಸ್ಯರಾಗಿದ್ದ ಕಲ್ಲು ದೇಸಾಯಿ ಅವರು 2 ಕೆಜಿ ತೂಕದ 2 ಅಡಿಯಷ್ಟಿರುವ ದೇವಿಯ ಬೆಳ್ಳಿ ವಿಗ್ರಹ ಮಂಡಳಿಗೆ ಸಮರ್ಪಿಸಿದರು. ಅಲ್ಲದೇ, ಗ್ರಾಮದ ಹಲವಾರು ಭಕ್ತರು ದೇವಿಗೆ ವಿವಿಧ ರೀತಿಯ ಬೆಳ್ಳಿಬಂಗಾರದ ಅಲಂಕಾರಿಕ ಚಿನ್ನಾಭರಣಗಳನ್ನು ದೇವಿಗೆ ಅರ್ಪಿಸಿದ್ದಾರೆ.

ಘಟಸ್ಥಾಪನೆ ದಿನದಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೇವಿಯನ್ನು ವಿವಿಧ ಕಲಾಮೇಳಗಳು ಹಾಗೂ ವಾದ್ಯ ತಂಡಗಳೊಂದಿಗೆ ಭವ್ಯ ಮೆರವಣಿಗೆ ಮೂಲಕ ಅಲಂಕೃತ ಮಂಟಪಕ್ಕೆ ತಂದು ಪ್ರತಿಷ್ಠಾಪಿಸಲಾಗುತ್ತದೆ.

ಪ್ರತಿದಿನ ದೇವಿಗೆ ಬೆಳಿಗ್ಗೆ ಹಾಗೂ ಸಂಜೆ ಎರಡು ಬಾರಿ ಭಕ್ತರಿಂದ ವಿಶೇಷ ಪೂಜೆ, ಸಂಜೆ ಅನ್ನಪ್ರಸಾದ ಸೇವೆ ನೆರವೇರಿಸಲಾಗುತ್ತದೆ. ಮನಗೂಳಿ ಗ್ರಾಮದ ದೇವಿಯ ಪರಮಭಕ್ತ ಶಾಂತಯ್ಯ ಲಟಗಿಮಠ ಆರಂಭದಿಂದಲೂ ಪ್ರತಿವರ್ಷ ತಪ್ಪದೇ ಬಂದು ದೇವಿಗೆ ಎರಡು ಬಾರಿ ಪೂಜಾ ಕೈಂಕರ್ಯ ಸಲ್ಲಿಸುತ್ತಿದ್ದಾರೆ.

ಈ ವರ್ಷ ಮಂಟಪದ ಪಕ್ಕದಲ್ಲಿ ಸಾಂಗ್ಲಿಯಿಂದ ಬಂದ ಕಲಾವಿದರಿಂದ ನೀರಿನ ಜಲಪಾತ ಹಾಗೂ ಲೇಸರ್ ಷೋ ಅಳವಡಿಸಿರುವುದು ವಿಶೇಷ.

****

ಮಂಡಳಿಯ ನವರಾತ್ರಿ ಉತ್ಸವಕ್ಕೆ ಪಟ್ಟಣದ ಗುರುಹಿರಿಯರು, ಸರ್ವಧರ್ಮಗಳ ಭಕ್ತರು ಪ್ರತಿವರ್ಷ ಸರ್ವ ರೀತಿಯಲ್ಲೂ ಸಹಕಾರ ನೀಡುತ್ತಾ ಧಾರ್ಮಿಕ ಕೈಂಕರ್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಶಶಿಧರ ದೇಸಾಯಿ, ಸದಸ್ಯ, ಆದಿಶಕ್ತಿ ಮಂಡಳಿ, ಕೊಲ್ಹಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.