ADVERTISEMENT

ಹುಲಿ ಉಗುರು ಪ್ರಕರಣ: ಬಿಜೆಪಿ ಮುಖಂಡನ ಮನೆಯಲ್ಲಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2023, 20:07 IST
Last Updated 26 ಅಕ್ಟೋಬರ್ 2023, 20:07 IST
ಬಿಜೆಪಿ ಮುಖಂಡ ವಿಜುಗೌಡರ ಮನೆಯಲ್ಲಿ ಗುರುವಾರ ಅರಣ್ಯ ಅಧಿಕಾರಿಗಳು ಪರಿಶೀಲಿಸಿದಾಗ ಸಿಕ್ಕ ಉಗುರು
ಬಿಜೆಪಿ ಮುಖಂಡ ವಿಜುಗೌಡರ ಮನೆಯಲ್ಲಿ ಗುರುವಾರ ಅರಣ್ಯ ಅಧಿಕಾರಿಗಳು ಪರಿಶೀಲಿಸಿದಾಗ ಸಿಕ್ಕ ಉಗುರು   

ವಿಜಯಪುರ: ಬಿಜೆಪಿ ಮುಖಂಡ ಹಾಗೂ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಪುತ್ರ ಶಾಶ್ವತಗೌಡ ಪಾಟೀಲ ಅವರು ಪೆಂಡೆಂಟ್‌ನಲ್ಲಿ ಹುಲಿ ಉಗುರು ಹಾಕಿದ ಚಿತ್ರ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಬಬಲೇಶ್ವರ ನಾಕಾ ಬಳಿ ಇರುವ ಅವರ ಮನೆಯ ಮೇಲೆ ಗುರುವಾರ ಬೆಳಿಗ್ಗೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲಿಸಿದರು.

‘ವಿಜುಗೌಡರ ಮನೆಯಲ್ಲಿ ಪರಿಶೀಲಿಸಿದಾಗ ಎರಡು ಹುಲಿ ಉಗುರು ಪತ್ತೆಯಾಗಿವೆ. ಅವುಗಳನ್ನು ವಶಕ್ಕೆ ಪಡೆದು, ಅಸಲಿ ಅಥವಾ ನಕಲಿ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಹೈದರಾಬಾದ್‌ನಲ್ಲಿರುವ ಅರಣ್ಯ ಇಲಾಖೆಯ ಸಿಸಿಎಂಬಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯ ತಿಳಿಸಿದರು.

‘ಹುಲಿ ಉಗುರು ಮಾದರಿಯನ್ನು ಏಳು ವರ್ಷಗಳ ಹಿಂದೆ ನಾನೇ ಖರೀದಿಸಿ, ಚಿನ್ನದಲ್ಲಿ ಪೆಂಡೆಂಟ್ ಮಾಡಿಸಿ, ನನ್ನ ಮಗ ಶಾಶ್ವತಗೌಡ ಪಾಟೀಲನಿಗೆ ನೀಡಿದ್ದೆ. ಅದು ಹುಲಿಯ ಅಸಲಿ ಉಗುರು ಅಲ್ಲ’ ಎಂದು ವಿಜುಗೌಡ ಪಾಟೀಲ ತಿಳಿಸಿದರು.

ADVERTISEMENT

‘ಅರಣ್ಯ ಇಲಾಖೆಯ ಯಾವುದೇ ತನಿಖೆಗೆ ನಾವು ಸಿದ್ಧ. ನಮ್ಮ ಮಗನ ಪೋಟೋ ಇಟ್ಟುಕೊಂಡು ಕೆಲವರು ಚಿಲ್ಲರೆ ರಾಜಕಾರಣ ನಡೆಸಿದ್ದಾರೆ. ಅವರದ್ದು ನನ್ನ ಬಳಿ ಬಹಳ ಇದೆ’ ಎಂದರು.

ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಅವರ ಮನೆ ಮೇಲೆ ದಾಳಿ ನಡೆಸಿ ಪರಿಶೀಲಿಸಿದ ಅರಣ್ಯಾಧಿಕಾರಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.