ADVERTISEMENT

ಇಂಡಿ | ಮಂಜಿನ ಕಾಟಕ್ಕೆ ಕಮರಿದ ತೊಗರಿ: ರೈತರಲ್ಲಿ ಆತಂಕ

ಎ.ಸಿ.ಪಾಟೀಲ
Published 9 ನವೆಂಬರ್ 2024, 5:35 IST
Last Updated 9 ನವೆಂಬರ್ 2024, 5:35 IST
ಇಂಡಿ ತಾಲ್ಲೂಕಿನ ಸಾತಪೂರ ಗ್ರಾಮದ ಕಾಳಪ್ಪ ರೂಗಿಯವರ ತೋಟಕ್ಕೆ ಭೇಟಿ ನೀಡಿದ ಕೃಷಿ ವಿಜ್ಞಾನ ಕೇಂದ್ರದ ಡಾ.ಹೀನಾ ಮತ್ತು ಡಾ. ಪ್ರಕಾಶ ಅವರು ಬೆಳೆ ಪರಿಶೀಲಿಸಿದರು
ಇಂಡಿ ತಾಲ್ಲೂಕಿನ ಸಾತಪೂರ ಗ್ರಾಮದ ಕಾಳಪ್ಪ ರೂಗಿಯವರ ತೋಟಕ್ಕೆ ಭೇಟಿ ನೀಡಿದ ಕೃಷಿ ವಿಜ್ಞಾನ ಕೇಂದ್ರದ ಡಾ.ಹೀನಾ ಮತ್ತು ಡಾ. ಪ್ರಕಾಶ ಅವರು ಬೆಳೆ ಪರಿಶೀಲಿಸಿದರು   

ಇಂಡಿ: ಬರಗಾಲದ ಸಮಸ್ಯೆ ಜೊತೆಗೆ ಈಚೆಗೆ ಬಿದ್ದ ಮಂಜಿನ ಪ್ರಭಾವದಿಂದಾಗಿ ಇಂಡಿ ತಾಲ್ಲೂಕಿನಲ್ಲಿ ತೊಗರಿ ಬೆಳೆ ಕಮರಿದೆ. ಹೂವು ನೆಲಕಚ್ಚಿವೆ. ವಾಣಿಜ್ಯ ಬೆಳೆ ತೊಗರಿಗೆ ಈಗ ಮಂಜಿನ ಕಾಟ ಶುರುವಾಗಿದೆ.

ದಟ್ಟ ಮಂಜು ಕವಿಯುತ್ತಿದ್ದಿದ್ದರಿಂದ ತೊಗರಿ ಬೆಳೆಯ ಮೇಲೆ ಪರಿಣಾಮ ಬೀರುತ್ತಿದೆ. ತೊಗರಿ ಬೆಳೆ ಈಗ ಹೂವು, ಮೊಗ್ಗುವಿನಿಂದ ಕೂಡಿದೆ. ಆದರೆ ಬೆಳಿಗ್ಗೆ ಮಂಜಿನ ವಾತಾವರಣದಿಂದ ಹೂ ಉದುರುವಿಕೆ, ಎಲೆ ಹಾಗೂ ಗಿಡದ ಮೇಲೆ ಕಂದು ಚುಕ್ಕೆ ಕಾಣಿಸಿಕೊಳ್ಳುತ್ತಿದ್ದು,ಇಳುವರಿ ಕುಸಿಯುವ ಸಾಧ್ಯತೆಗಳಿವೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ತಾಲ್ಲೂಕಿನಲ್ಲಿ ಬೆಳೆಯುತ್ತಿದ್ದ ತೊಗರಿಗೆ ಮಾರುಕಟ್ಟೆಯಲ್ಲಿ ಪ್ರತಿ ವರ್ಷ ಉತ್ತಮ ಬೆಲೆ ದೊರೆಯುವುದರಿಂದ ರೈತರು ಹೆಚ್ಚು ತೊಗರಿ ಬೆಳೆಯುತ್ತಿದ್ದಾರೆ. ಪ್ರಸಕ್ತ ವರ್ಷದಲ್ಲಿ ತಾಲ್ಲೂಕಿನ ಒಟ್ಟು1.20ಲಕ್ಷ  ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಆದರೆ ಹವಾಮಾನ ವೈಪರೀತ್ಯದಿಂದ ತೊಗರಿಗೆ ಪೆಟ್ಟು ಬೀಳುತ್ತಿದೆ. ರಾತ್ರಿಯಿಂದಲೇ ಮಂಜು ಮುಸುಕಿದ ವಾತಾವರಣ ಸೃಷ್ಟಿಯಾಗುತ್ತಿದ್ದು, ನಸುಕಿನ ಜಾವ ಅಧಿಕವಾಗಿ ಬೆಳಿಗ್ಗೆ 8 ಗಂಟೆವರೆಗೆ ಇರುತ್ತದೆ. ಇದರಿಂದ ಉಳಿದ ಬೆಳೆಗೂ ಮಂಜು ಕಂಟಕವಾಗಲಿದೆ ಎನ್ನುತ್ತಾರೆ ರೈತರು.

ADVERTISEMENT

ಮಂಜಿನಿಂದ ತೊಗರಿ ಮೊಗ್ಗಿನ ಕೊನೆಯ ಭಾಗ ಸುಟ್ಟಂತೆ ಆಗಲಿದೆ. ಇದರಿಂದ ಹಾನಿಯಾಗುವ ಸಾಧ್ಯತೆ ಇದೆ.

‘ಪ್ರಸಕ್ತ ವರ್ಷದಲ್ಲಿ ಮುಂಜಾನೆ ಇಬ್ಬನಿಯಿಂದ ತೊಗರಿ ಬೆಳೆಯಲ್ಲಿ ಎಲೆ ಚುಕ್ಕೆ ರೋಗ ಹೆಚ್ಚಾಗುವ ಸಾಧ್ಯತೆ ಇದ್ದು,  ಸಣ್ಣ ಗೋಲಾಕಾರದ ಕಂದು ಬಣ್ಣದ ಚುಕ್ಕೆಗಳು ಎಲೆಯ ಮೇಲೆ ಕಂಡು ಬರುತ್ತವೆ. ಈ ಚುಕ್ಕೆಗಳ  ಬೆಳೆದು ಒಂದನ್ನೊಂದು ಕೂಡಿಕೊಂಡು ಎಲೆಯ ಬಹುಭಾಗವನ್ನು ಆವರಿಸುತ್ತವೆ. ರೋಗ ತೀವ್ರವಾದಂತೆ ಎಲೆಗಳು ಉದುರಿ ಗಿಡ ಬೋಳಾಗಿ ಕಾಣುತ್ತದೆ’ ಎಂದು  ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಪ್ರಕಾಶ ತಿಳಿಸಿದರು.

‘ಕಾರ್ಬನ್‌ ಡೈಜಿಮ್ 50 ಡಬ್ಲ್ಯೂಪಿ ಒಂದು ಗ್ರಾಂ ಅಥವಾ ಹೆಕ್ಸಾಕೊನೊಝೇಲ್ 5 ಇಸಿ ಒಂದು ಎಂಎಲ್, ಜೊತೆಗೆ 0.5 ಎಂಎಲ್‌ಡಬ್ಲ್ಯೂ ಎಎ ಪ್ರತಿ ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಬೇಕು, ತೊಗರಿಯಲ್ಲಿ ಎಲೆ ಮೂದುಡುವಿಕೆ, ಜೊಂಡೆ ಗಟ್ಟುವುದು. ಇದರ ನಿರ್ವಹಣೆಗೆ ಪ್ರೋಫೆನೊಪಾಸ್‌ 2 ಎಂಎಲ್‌ ಮತ್ತು ಕಾರಟಾಪ್‌ ಹೈಡ್ರೋಕ್ಲೋರೈಡ್ ಒಂದು ಗ್ರಾಂ ಜೊತೆಗೆ ಲಘು ಪೋಷಕಾಂಶಗಳ ಮಿಶ್ರಣ ಫಲ್ಸ್‌ ಬೂಸ್ಟರ್‌ ಅನ್ನು 10 ಗ್ರಾಂ ಪ್ರತಿ ಲೀಟರ್‌ಗೆ ನೀರಿಗೆ ಬೆರೆಸಿ ಸಿಂಪಡಿಸಬೇಕು’ ಎನ್ನುತ್ತಾರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಹೀನಾ

‘ತಾಲ್ಲೂಕಿನಲ್ಲಿ ತೊಗರಿ ಬೆಳೆಗೆ ಮಂಜಿನ ಕಾಟ ಶುರುವಾಗಿಗಿದ್ದು, ಈಗಾಗಲೇ ಕೃಷಿ ಇಲಾಖೆ ಅಧಿಕಾರಿಗಳ ತಂಡವು ತೊಗರಿ ಹೊಲಕ್ಕೆ ತೆರಳಿ ಪರಿಶೀಲನೆ ನಡೆಸಿ ರೈತರಿಗೆ ಮಾಹಿತಿ ನೀಡುವ ಕಾರ್ಯ ಮಾಡುತ್ತಿದ್ದಾರೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದರು.

ತೊಗರಿಗೆ ಮಂಜಿನ ಕಾಟ ಪ್ರಾರಂಭವಾಗಿದ್ದು ರೈತರು ಕೃಷಿ ಇಲಾಖೆ ಅಥವಾ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಸೂಕ್ತ ಮಾಹಿತಿ ಪಡೆಯಬೇಕು. ಇಲಾಖೆಯವರು ರೈತರಿಗೆ ಮಾಹಿತಿ ನೀಡುತ್ತಿದ್ದಾರೆ.
-ಚಂದ್ರಕಾಂತ ಪವಾರ, ಕೃಷಿ ಉಪ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.