ADVERTISEMENT

ವಿಜಯಪುರ: ಸಾವಳಸಂಗ ಸಾಲು ಬೆಟ್ಟಗಳಲ್ಲಿ ಚಾರಣ

ಬಿಸಿಲೂರಿನಲ್ಲಿ ಮಲೆನಾಡ ಅನುಭವ ನೀಡುವ ತಾಣ: ಮಳೆಗಾಲದಲ್ಲಿ ಮನಮೋಹಕ

ಬಸವರಾಜ ಸಂಪಳ್ಳಿ
Published 1 ಸೆಪ್ಟೆಂಬರ್ 2024, 5:23 IST
Last Updated 1 ಸೆಪ್ಟೆಂಬರ್ 2024, 5:23 IST
ಸಾವಳಸಂಗ ಬೆಟ್ಟದ ತುದಿಯಲ್ಲಿ ಕ್ಯಾಮೆರಾಕ್ಕೆ ಸೆರೆ ಸಿಕ್ಕ ಚಾರಣಿಗರು–ಚಿತ್ರ: ವಿನೋದಕುಮಾರ ಮಣೂರ
ಸಾವಳಸಂಗ ಬೆಟ್ಟದ ತುದಿಯಲ್ಲಿ ಕ್ಯಾಮೆರಾಕ್ಕೆ ಸೆರೆ ಸಿಕ್ಕ ಚಾರಣಿಗರು–ಚಿತ್ರ: ವಿನೋದಕುಮಾರ ಮಣೂರ   

ವಿಜಯಪುರ: ಚಾರಣ ಎಂಬುದು ಯುವ ಜನರ ಮೋಜಿನ ಮತ್ತು ಸಾಹಸಮಯ ಚಟುವಟಿಕೆಗಳಲ್ಲಿ ಒಂದು. ಬೆಟ್ಟ–ಗುಡ್ಡಗಳ ಕಡಿದಾದ ದಾರಿಯಲ್ಲಿ ಸ್ನೇಹಿತರೊಂದಿಗೆ ಚಾರಣ ಮಾಡುವುದು, ಅಹೋರಾತ್ರಿ ಕಳೆಯುವುದು ಮನಸ್ಸಿಗೆ ಉತ್ಸಾಹದ ಜೊತೆಗೆ ರೋಮಾಂಚಕಾರಿ ಅನುಭೂತಿ ನೀಡುವುದರಲ್ಲಿ ಅನುಮಾನವಿಲ್ಲ. ಅಂತಹ ಯೋಜನೆ ಏನಾದರೂ ಇದ್ದರೆ ದೂರದ ಮಲೆನಾಡು, ಕರಾವಳಿಗೆ ಹೋಗಬೇಕಾಗಿಲ್ಲ. ಬಿಸಿಲೂರಲ್ಲೇ ಮಲೆನಾಡ ಅನುಭವ ನೀಡುವ ಸಾವಳಸಂಗ ಬೆಟ್ಟಗಳ ಸಾಲಿಗೆ ಒಮ್ಮೆ ಹೋಗಿಬರಬಹುದು.

ಪುಟ್ಟ–ಪುಟ್ಟ ಬೆಟ್ಟಗುಡ್ಡಗಳಿಂದ ಕೂಡಿದ ಇಂಡಿ ತಾಲ್ಲೂಕಿನ ಸಾವಳಸಂಗ ಇತ್ತೀಚಿನ ದಿನಗಳಲ್ಲಿ ಸಾಹಸಿ ಯುವಜನರನ್ನು ಕೈಬೀಸಿ ಕರೆಯುತ್ತಿದೆ. ಜೊತೆಗೆ ಪ್ರವಾಸಿಗರನ್ನೂ ಆಕರ್ಷಿಸುತ್ತಿದೆ. ಈ ಮಳೆಗಾಲದಲ್ಲಿ ಸಾವಳಸಂಗಕ್ಕೆ ಭೇಟಿ ನೀಡಲು ಹೇಳಿ ಮಾಡಿಸಿದ ಸಮಯ.

‘ಕೆಲವೊಮ್ಮೆ ಒಂದೇ ದಿನದ ಚಾರಣ ಮಾಡೊಣ ಅಥವಾ ಇವತ್ತು ಹೊರಟು ನಾಳೆ ಬಂದು ಬಿಡೋಣ. ಆದರೆ, ಆಫ್ ಬೀಟ್ ಇರಬೇಕು. ಅದರಲ್ಲಿ ಪರ್ವತ ಕಣಿವೆ ಇರಬೇಕು, ಫೋಟೊ ಸೆಲ್ಫಿಗೆ ಎಲ್ಲಿ ನಿಂತರೂ ಸೈ ಎನ್ನಬೇಕು. ದಾರಿ ಹೋದಷ್ಟೂ ಚೆಂದ ಇರಬೇಕು, ದಾರಿ ಹೋಗಿ ತಲುಪಲು ಒಂದಷ್ಟು ಅನುಕೂಲಕರ ಎನ್ನುವ ವಾಹನ ಸೌಕರ್ಯಕ್ಕೆ ದಕ್ಕುವಂತಿರಬೇಕು. ಇದೆಲ್ಲ ಇದ್ದೂ ಜೇಬಿಗೂ ಭಾರವಾಗದಂತಿರಬೇಕು. ಎಂದೆಲ್ಲ ಲೆಕ್ಕ ಹಾಕುವವರಿಗೆ ಸಾವಳಸಂಗ ಬೆಟ್ಟಗಳ ಸಾಲು ಚಿಕ್ಕ, ಚೊಕ್ಕ ವಿಹಾರ ಮತ್ತು ಚಾರಣ ಎರಡಕ್ಕೂ ಹೇಳಿ ಮಾಡಿಸಿದ ತಾಣವಾಗಿದೆ' ಎನ್ನುತ್ತಾರೆ ಚಾರಣಿಗ ವಿಜಯಪುರದ ವಿನೋದ ಕುಮಾರ ಮಣೂರ.

ADVERTISEMENT

‘ಸಾವಳಸಂಗ ಬೆಟ್ಟಗಳ ಸಾಲಿನಲ್ಲಿ ಚಾರಣ ಮಾಡಿದರೆ ಮೈ–ಮನ ಎರಡೂ ತಣಿಸಿಕೊಳ್ಳಬಹುದು. ಅಲ್ಲಿನ ಚಾರಣ ದುಡ್ಡು ಉಳಿಸುತ್ತದೆ ಜೊತೆಗೆ ವಾರಗಟ್ಟಲೇ ಸುತ್ತುವ ಅಗತ್ಯವೂ ಇರುವುದಿಲ್ಲ. ದಿನಕ್ಕೆ ಹತ್ತಾರು ಕಿ.ಮೀ.ನಡೆಯುವ ಉತ್ಸಾಹ, ಅಭ್ಯಾಸ ಇದ್ದರೆ ಸಾಕು. ದಿಬ್ಬವೇರುವ, ಇಳಿಯುವ ಆಫ್ ಬೀಟ್ ಟ್ರಾವೆಲ್ ಮಾಡಲು ಬಹಳ ಖುಷಿಯಾಗುತ್ತದೆ’ ಎನ್ನುತ್ತಾರೆ ಮಣೂರ.

‘ನಾವು ಗೆಳೆಯರೆಲ್ಲರು ಸೇರಿ ಕಳೆದ ಶನಿವಾರ ಸಂಜೆ ಹೊರಟು ರಾತ್ರಿ ಸಾವಳಸಂಗ ಬೆಟ್ಟದಲ್ಲೇ ಕ್ಯಾಂಪಿಂಗ್ ಮಾಡಿ ಭಾನುವಾರ ಬೆಳಿಗ್ಗೆ ಅರಣ್ಯ ಇಲಾಖೆ ಅಧಿಕಾರಿ ಧನರಾಜ ಮುಜಗೊಂಡ ಅವರ ಮಾರ್ಗದರ್ಶನದಲ್ಲಿ ಚಾರಣ ಮುಗಿಸಿ ಮಧ್ಯಾಹ್ನದ ಒಳಗಾಗಿ ವಿಜಯಪುರಕ್ಕೆ ಮರಳಿದೆವು. ಮನಸ್ಸಿಗೆ ಬಹಳ ಖುಷಿ ನೀಡಿತು’ ಎನ್ನುತ್ತಾರೆ ವಿನೋದ್‌.

ಚಾರಣಕ್ಕೆ ಹೇಳಿ ಮಾಡಿಸಿರುವಂತಿರುವ ಸಾವಳಸಂಗ ಬೆಟ್ಟದ ಮನಮೋಹಕ ದೃಶ್ಯ–ಚಿತ್ರ: ವಿನೋದಕುಮಾರ ಮಣೂರ

ವಾರಪೂರ್ತಿ ಜನ:

‘ವಿಜಯಪುರ, ಇಂಡಿ, ಸಿಂದಗಿ, ಅಫಜಪುರ, ಚಡಚಣ, ಮಹಾರಾಷ್ಟ್ರದಿಂದಲೂ ವಾರದಲ್ಲಿ ಸುಮಾರು 400 ಜನರು ತಂಡೋಪ ತಂಡವಾಗಿ ಬರುತ್ತಾರೆ. ವಿಶೇಷವಾಗಿ ಛಾಯಾಗ್ರಾಹಕರು, ಚಾರಣಿಗರು, ಮಠಕ್ಕೆ ತೆರಳುವ ಭಕ್ತರು, ಪ್ರವಾಸಿಗರು ಪಕ್ಷಿಪ್ರಿಯರು ಬರುತ್ತಾರೆ’ ಎನ್ನುತ್ತಾರೆ ಅರಣ್ಯ ಇಲಾಖೆ ಹೊರ್ತಿ ವಿಭಾಗದ ಗಸ್ತು ವನ ಪಾಲಕ (ಬೀಟ್ ಫಾರೆಸ್ಟರ್) ಧನರಾಜ ಮುಜಗೊಂಡ.

‘ಸಾವಳಸಂಗಕ್ಕೆ ಚಾರಣಕ್ಕೆ ಬರುವವರಿಗೆ ಅರಣ್ಯ ಇಲಾಖೆಯಿಂದ ವಿಶೇಷ ಅನುಮತಿ ಎಂಬುದು ಇಲ್ಲ.  ತಿರುಗಾಡಬಹುದು, ರಾತ್ರಿ ಉಳಿಯಬಹುದು. ಆದರೆ, ಇಲ್ಲಿಗೆ ಬರುವವರು ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್‌, ಕಾಗದ ಮತ್ತಿತರರ ತ್ಯಾಜ್ಯವನ್ನು ಬಿಸಾಡುವಂತಿಲ್ಲ’ ಎನ್ನುತ್ತಾರೆ ಅವರು.

ಬೈಕುಗಳನ್ನೇರಿ ಸಾವಳಸಂಗ ಬೆಟ್ಟಕ್ಕೆ ತೆರಳುತ್ತಿರುವ ಚಾರಣಿಗರು–ಚಿತ್ರ:ವಿನೋದ ಕುಮಾರ ಮಣೂರ
ಗಿಡಮರಗಳಿಂದ ಕೂಡದ ಬೆಟ್ಟ ಸಾಲು
ವಿಜಯಪುರ–ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊರ್ತಿಯಿಂದ ಐದು ಕಿ.ಮೀ. ದೂರದಲ್ಲಿ ಇಂಚಿಗೇರಿಗೆ ತೆರಳುವ ರಸ್ತೆಯಲ್ಲಿ ಸಾವಳಸಂಗ ಬೆಟ್ಟ ಸಾಲು ಇದೆ. ಇಲ್ಲಿ ಪ್ರಮುಖವಾಗಿ ಲಿಂಗೇಶ್ವರ ಗುಡ್ಡ ಅರವಕ್ಕಿ ಗುಡ್ಡ ಮತ್ತು ಸಿದ್ದೇಶ್ವರ ಗುಡ್ಡ ಎಂಬ ಮೂರು ತಾಣಗಳಿವೆ. ಸುಮಾರು 271 ಎಕರೆ ಪ್ರದೇಶ ಒಳಗೊಂಡಿರುವ ಸಾವಳಸಂಗ ಬೆಟ್ಟದಲ್ಲಿ ಕೆಂಪು ಹುಣಸೆ ಮಾವು ಸೀತಾಫಲ ಚಳ್ಳೆ ನೇರಳೆ ಆಲ ಅರಳಿ ಹೊಂಗೆ ಹೊಳೆ ಮತ್ತಿ ಬಿದಿರು ಗಜುಗ ಬೇವು ಗೊಬ್ಬರ ಗಿಡ ಸೇರಿದಂತೆ ವಿವಿಧ ಜಾತಿಯು ಸುಮಾರು 31 ಸಾವಿರ ಗಿಡಗಳನ್ನು 2018–19ರಿಂದ ನೆಟ್ಟು ನೀರೆರೆದು ಬೆಳೆಸಿ ಸಂರಕ್ಷಿಸಲಾಗಿದೆ. ಇಲ್ಲಿ ನವಿಲು ನರಿ ಮೊಲ ಹಾವು ವಿವಿಧ ಜಾತಿಯ ಪಕ್ಷಿಗಳು ನೆಲೆ ಕಂಡುಕೊಂಡಿವೆ. ಎರಡು ಪ್ಯಾರಾಗೋಲಗಳಿವೆ. ಕುಳಿತು ಊಟ ಮಾಡಲು ವಿಶ್ರಾಂತಿ ಪಡೆಯಲು ಅನುಕೂಲ ಮಾಡಲಾಗಿದೆ. ಪ್ರತಿದಿನ 15 ವಾಚರ್‌ಗಳು ಸಾವಳಸಂಗ ಬೆಟ್ಟದಲ್ಲಿ ಕಾರ್ಯನಿರ್ವಹಿಸುತ್ತಾರೆ. ಚಾರಣಿಗರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಂಪೂರ್ಣ ಸಹಕಾರ ಹಾಗೂ ಮಾರ್ಗದರ್ಶನ ನೀಡುತ್ತಾರೆ. ಸಾವಳಸಂಗ ಬೆಟ್ಟಸಾಲನ್ನು‘ಸಿದ್ದೇಶ್ವರ ವನ್ಯಧಾಮ’ ಎಂದು ಹೆಸರಿಡಲು ಇಂಡಿ ಶಾಸಕ ಯಶವಂತರಾಯಗೌಡ ಅವರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.