ADVERTISEMENT

ವಕ್ಫ್‌ ಬೋರ್ಡ್‌ ಕಾಯ್ದೆಯಿಂದ ರೈತರಿಗೆ ತೊಂದರೆ; BJP ತಂಡ ರಚನೆಗೆ ಯತ್ನಾಳ ವಿರೋಧ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 12:32 IST
Last Updated 28 ಅಕ್ಟೋಬರ್ 2024, 12:32 IST
<div class="paragraphs"><p>ಬಸನಗೌಡ ಪಾಟೀಲ ಯತ್ನಾಳ</p></div>

ಬಸನಗೌಡ ಪಾಟೀಲ ಯತ್ನಾಳ

   

ವಿಜಯಪುರ: ವಿಜಯಪುರ ಜಿಲ್ಲೆಯಾದ್ಯಂತ ವಕ್ಫ್‌ ಬೋರ್ಡ್‌ ಕಾಯ್ದೆಯಿಂದ ತೊಂದರೆಗೆ ಒಳಗಾದ ರೈತರ ಆಹವಾಲು ಕೇಳಲು ಬಿಜೆಪಿ ರಾಜ್ಯ ಘಟಕ ನೇಮಿಸಿರುವ ತಂಡವನ್ನು ಬಹಿಷ್ಕರಿಸುವುದಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರ ಸ್ಥಳೀಯ ಲೋಕಸಭಾ ಸದಸ್ಯ ರಮೇಶ ಜಿಗಜಿಣಗಿ ಮತ್ತು ಸ್ಥಳೀಯ ಶಾಸಕನಾದ ನನ್ನನ್ನು ಹೊರಗಿಟ್ಟು ತಂಡ ರಚಿಸಿರುವ ಉದ್ದೇಶವೇನು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರನ್ನು ಪ್ರಶ್ನಿಸಿದರು.

ADVERTISEMENT

ವಕ್ಫ್‌ ಬೋರ್ಡ್ ಕಾಯ್ದೆ ವಿರುದ್ಧ ನಿಜವಾದ ಹೋರಾಟ ಮಾಡುವವರನ್ನು ತುಳಿಯುವ ಕೆಲಸ ವಿಜಯೇಂದ್ರ ಮಾಡುತ್ತಿದ್ದಾರೆ. ಹೀಗಾಗಿ ಸಂಸದ ರಮೇಶ ಜಿಗಜಿಣಗಿ ಮತ್ತು ನಾನು ಈ ತಂಡವನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.  

ವಿಜಯೇಂದ್ರಗೆ ಕಳಕಳಿ ಇದ್ದಿದ್ದರೇ ಇದುವರೆಗೆ ವಕ್ಫ್‌ ಕಾಯ್ದೆ ಬಗ್ಗೆ ಏಕೆ ಮಾತನಾಡಲಿಲ್ಲ? ಇಂತಹ ಅಯೋಗ್ಯ ಅಧ್ಯಕ್ಷ ರಾಜ್ಯ ಬಿಜೆಪಿಗೆ ಬೇಕಾಗಿಲ್ಲ, ಆತನನ್ನು ತಕ್ಷಣ ಅಧ್ಯಕ್ಷ ಸ್ಥಾನದಿಂದ ರಾಷ್ಟ್ರೀಯ ನಾಯಕರು ವಜಾ ಮಾಡಬೇಕು ಎಂದು ಆಗ್ರಹಿಸಿದರು.

ವಕ್ಫ್‌ ಬೋರ್ಡ್‌ ಕಾಯ್ದೆಯಿಂದ ಆಗುತ್ತಿರುವ ತೊಂದರೆ ಬಗ್ಗೆ ವಿಧಾನ ವಿಧಾನಸಭೆಯಲ್ಲಿ ಪ್ರಥಮ ಬಾರಿಗೆ ಧ್ವನಿ ಎತ್ತಿರುವವನು ನಾನು. ನನ್ನನ್ನು ಬಿಟ್ಟು ಕಳೆದ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡ ಮಾಜಿ ಶಾಸಕನನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ವಕ್ಫ್‌ ಕಾಯ್ದೆಯಿಂದ ರೈತರಿಗೆ ಆಗಿರುವ ತೊಂದರೆ ಬಗ್ಗೆ ಈಗಾಗಲೇ ರಾಷ್ಟ್ರಾದ್ಯಂತ ಮಾಧ್ಯಮಗಳ ಮೂಲಕ ತಿಳಿದಿದೆ. ಈ ಸಂದರ್ಭದಲ್ಲಿ ತಂಡ ಏಕೆ ಬೇಕು? ಈ ರೀತಿ ಹಲ್ಕಾ ರಾಜಕಾರಣವನ್ನು ವಿಜಯೇಂದ್ರ ಬಿಡಬೇಕು ಎಂದರು.

ವಕ್ಫ್‌ ವಿರುದ್ಧದ ಹೋರಾಟಕ್ಕೆ ಕೇಂದ್ರ ಸರ್ಕಾರದ ಸಂಪೂರ್ಣ ಬೆಂಬಲ ಇದೆ. ಜೊತೆಗೆ ಆರ್‌ಎಸ್‌ಎಸ್‌ ಕೂಡ ಹೋರಾಟದ ಹಿಂದೆ ಇದೆ. ವಕ್ಫ್‌ ಕಾಯ್ದೆಯಿಂದ ಮುಸ್ಲಿಂ ರೈತರ ಭೂಮಿಯೂ ಹೋಗುತ್ತಿರುವುದರಿಂದ ಅವರೂ ಸಹ ನಮ್ಮ ಜೊತೆಗೂಡಲಿದ್ದಾರೆ ಎಂದರು.

ರಾಜ್ಯ ಸರ್ಕಾರಕ್ಕೆ ಗಡುವು: ರಾಜ್ಯದ ವಿವಿಧ ಜಿಲ್ಲೆಗಳ ರೈತರ ಮತ್ತು ಸರ್ಕಾರಿ ಜಮೀನಿನಲ್ಲಿರುವ ವಕ್ಫ್‌ ಹೆಸರನ್ನು ನವೆಂಬರ್‌ 3ರ ಒಳಗಾಗಿ ತೆಗೆಯಬೇಕು. ಅಷ್ಟರೊಳಗೆ ತೆಗೆಯದಿದ್ದರೇ ಈ ಕರಾಳ ಕಾಯ್ದೆ ವಿರುದ್ಧ ಕಾನೂನು ಹೋರಾಟದ ಜೊತೆಗೆ ರೈತರೊಂದಿಗೆ ಸೇರಿ ರಾಜ್ಯ ಸರ್ಕಾರದ ವಿರುದ್ಧ ದೊಡ್ಡ ಹೋರಾಟ ರೂಪಿಸುತ್ತೇನೆ. ಏನಾದರೂ ಅನಾಹುತ ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹಮ್ಮದ್‌ ಕಾರಣವಾಗುತ್ತಾರೆ ಎಂದು ಹೇಳಿದರು.

ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ವಕ್ಫ್‌ ಕಾಯ್ದೆಯಿಂದ ರೈತರಿಗೆ ಆಗಿರುವ ತೊಂದರೆ ನಿವಾರಣೆ ಸಂಬಂಧ ಟಾಸ್ಕ್‌ ಫೋರ್ಸ್‌ ರಚಿಸುವುದಾಗಿ ಹೇಳಿರುವುದನ್ನು ಸ್ವಾಗತಿಸುತ್ತೇನೆ ಎಂದರು.

ಕಮಿಷನ್‌ ಆರೋಪ: ಈ ಹಿಂದೆ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಇದೇ ಸಚಿವ ಜಮೀರ್‌ ಅಹಮ್ಮದ್‌ಗೆ ₹1 ಸಾವಿರ ಕೋಟಿ ಅನುದಾನ ಕೊಟ್ಟಿದ್ದರು. ಈ ಬಗ್ಗೆ ನಾನು ಆಕ್ಷೇಪ ಎತ್ತಿದಾಗ ವಾಪಸ್‌ ತೆಗೆದುಕೊಂಡಿದ್ದರು. ಜಮೀರ್‌ ಅಹಮ್ಮದ್‌ಗೆ ₹1 ಸಾವಿರ ಕೋಟಿ ಕೊಡುವಾಗ ವಿಜಯೇಂದ್ರ ಎಷ್ಟು ಕಮಿಷನ್‌ ಪಡೆದುಕೊಂಡಿರಬೇಕು? ಎಂದು ಪ್ರಶ್ನಿಸಿದರು.

ಯತ್ನಾಳನನ್ನು ಹೊರಹಾಕಿ ಎಂದು ದಿನ ಬೆಳಗಾದರೆ ಪೂಜ್ಯ ತಂದೆ ಯಡಿಯೂರಪ್ಪನವರ ಜೊತೆ ವಿಜಯೇಂದ್ರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಳಿ ಗೋಗರೆಯುತ್ತಿದ್ದಾನೆ. ಇವರ ಮಾತು ಯಾರೂ ಕೇಳುತ್ತಿಲ್ಲ, ಯತ್ನಾಳನನ್ನು ರಾಜಕೀಯವಾಗಿ ಮುಗಿಸಲು ವಿಜಯೇಂದ್ರಗೆ ಸಾಧ್ಯವಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.