ADVERTISEMENT

ವಿಜಯಪುರ: ಸೋಮದೇವರಹಟ್ಟಿ ದುರ್ಗಾದೇವಿ ಜಾತ್ರೆ, ಒಂದು ತಾಂಡಾಗೆ ಎರಡು ಹೆಲಿಪ್ಯಾಡ್!

ಬಸವರಾಜ ಸಂಪಳ್ಳಿ
Published 5 ಜುಲೈ 2024, 5:36 IST
Last Updated 5 ಜುಲೈ 2024, 5:36 IST
ವಿಜಯಪುರ ಜಿಲ್ಲೆ ತಿಕೋಟಾ ತಾಲ್ಲೂಕಿನ ಸೋಮದೇವರಹಟ್ಟಿ ತಾಂಡಾ 1ರಲ್ಲಿ ಇರುವ ಹೆಲಿಪ್ಯಾಡ್‌ –ಪ್ರಜಾವಾಣಿ ಚಿತ್ರ
ವಿಜಯಪುರ ಜಿಲ್ಲೆ ತಿಕೋಟಾ ತಾಲ್ಲೂಕಿನ ಸೋಮದೇವರಹಟ್ಟಿ ತಾಂಡಾ 1ರಲ್ಲಿ ಇರುವ ಹೆಲಿಪ್ಯಾಡ್‌ –ಪ್ರಜಾವಾಣಿ ಚಿತ್ರ   

ವಿಜಯಪುರ: ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ವಿಜಯಪುರ ಜಿಲ್ಲೆ ತಿಕೋಟಾ ತಾಲ್ಲೂಕಿನ ಸೋಮದೇವರಹಟ್ಟಿ ತಾಂಡಾ–1ರಲ್ಲಿ ಇರುವ ಬಂಜಾರ ಸಮಾಜದ ಆರಾಧ್ಯ ದೇವತೆ ಶ್ರೀಮಾತಾ ದುರ್ಗಾದೇವಿಯ ಜಾತ್ರೆ ಜುಲೈ 5ರಂದು ನಡೆಯಲಿದೆ. ರಾಜ್ಯದಿಂದ ಅಲ್ಲದೇ ಹೊರದೇಶದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.

ಭಕ್ತರ ಅನುಕೂಲಕ್ಕೆಂದೇ ಈ ತಾಂಡಾದ ಸಮೀಪದಲ್ಲೇ ಎರಡು ಹೆಲಿಪ್ಯಾಡ್‌ಗಳಿರುವುದು ವಿಶೇಷ. ಒಂದನ್ನು ಸರ್ಕಾರವೇ ನಿರ್ಮಿಸಿದ್ದರೆ, ಇನ್ನೊಂದನ್ನು ದುರ್ಗಾದೇವಿ ದೇವಸ್ಥಾನದವರೇ ಕಡಿಮೆ ವೆಚ್ಚದಲ್ಲಿ ನಿರ್ಮಿಸಿದ್ದಾರೆ.

‘ದೇವಸ್ಥಾನಕ್ಕೆ ಗಣ್ಯ ಮತ್ತು ಅತಿ ಗಣ್ಯ ವ್ಯಕ್ತಿಗಳು ಬರುವುದರಿಂದ ಅವರ ಅನುಕೂಲಕ್ಕೆ ಲೋಕೋಪಯೋಗಿ ಇಲಾಖೆಯು 2009ರಲ್ಲಿ ₹10 ಲಕ್ಷ ಅನುದಾನದಲ್ಲಿ ಹೆಲಿಪ್ಯಾಡ್‌ ನಿರ್ಮಿಸಿದೆ. ಈ ಹೆಲಿಪ್ಯಾಡ್‌ ಪಕ್ಕದಲ್ಲೇ ನಾಲ್ಕು ವರ್ಷಗಳ ಹಿಂದೆ ದುರ್ಗಾದೇವಿ ದೇವಸ್ಥಾನ ಸಮಿತಿ ಮತ್ತೊಂದು ಹೆಲಿಪ್ಯಾಡ್‌ ನಿರ್ಮಿಸಿದೆ’ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಜಗನು ಮಹಾರಾಜ ‘ಪ್ರಜಾವಾಣಿ’ಗೆ ತಿಳಿಸಿದರು. 

ADVERTISEMENT

‘ಜಾತ್ರೆಗೆ ನೆರೆಹೊರೆಯ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಬಂದು, ಹರಕೆ ಒಪ್ಪಿಸುತ್ತಾರೆ. ಜೊತೆಗೆ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ರಾಜ್ಯಪಾಲರು, ಅಧಿಕಾರಿಗಳು, ಪ್ರತಿಷ್ಠಿತ ಉದ್ಯಮಿಗಳು ಸಹ ಈ ಕ್ಷೇತ್ರಕ್ಕೆ ಪ್ರತಿ ವರ್ಷ ಭೇಟಿ ನೀಡಿ, ದರ್ಶನ ಪಡೆಯುತ್ತಾರೆ’ ಎಂದರು.

ಓಲೈಕೆ, ಹರಕೆ ತಾಂಡಾ ಸೆಳೆತ: ಉತ್ತರ ಕರ್ನಾಟಕ ಭಾಗದ ನೂರಾರು ತಾಂಡಾ ವಾಸಿಗಳಿಗೆ ಸೋಮದೇವರಹಟ್ಟಿ ತಾಂಡಾದ ದುರ್ಗಾದೇವಿ ಆರಾಧ್ಯ ದೇವರಾಗಿದ್ದು, ಬಹುತೇಕ ತಾಂಡಾ ವಾಸಿಗಳು ನೆರೆಯ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕೇರಳಕ್ಕೆ ದುಡಿಯಲು ಹೋಗಿ, ಅಲ್ಲಿಯೇ ನೆಲೆ ಕಂಡುಕೊಂಡಿದ್ದಾರೆ. ಅಲ್ಲದೇ, ರಾಜಕೀಯವಾಗಿಯೂ ಪ್ರಬಲವಾಗಿದ್ದಾರೆ. ಕೆಲ ಕ್ಷೇತ್ರಗಳಲ್ಲಿ ನಿರ್ಣಾಯಕ ಮತದಾರರಾಗಿದ್ದಾರೆ. ವಿವಿಧ ಪಕ್ಷಗಳಲ್ಲಿ ಪ್ರಮುಖ ಸ್ಥಾನಗಳಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಓಲೈಕೆಗಾಗಿ ಅಲ್ಲಿಯ ರಾಜಕಾರಣಿಗಳು, ಮಂತ್ರಿಗಳು ಪ್ರತಿ ವರ್ಷ ಜಾತ್ರೆಗೆ ಬರುತ್ತಾರೆ. ದೇವಸ್ಥಾನಕ್ಕೆ, ಭಕ್ತರಿಗೆ ನೆರವು ನೀಡಿ, ಅವರ ಪ್ರೀತಿಗೆ ಪಾತ್ರರಾಗುತ್ತಾರೆ.

ಜಾತ್ರೆಗೆ ಈವರೆಗೆ ಜರ್ಮನಿಯ ಭಾರತೀಯ ರಾಯಭಾರಿ ಶೇವಲಾ ನಾಯಕ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಗೋವಾ ಮುಖ್ಯಮಂತ್ರಿಯಾಗಿದ್ದ ದಿಗಂಬರ ಕಾಮತ್, ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್‌, ಎಚ್.ಡಿ ಕುಮಾರಸ್ವಾಮಿ, ಸುಶೀಲ್ ಕುಮಾರ್ ಸಿಂಧೆ, ವಿಲಾಸರಾವ್ ದೇಶಮುಖ್‌, ಗೋಪಿನಾಥ ಮುಂಡೆ, ಒರಿಸ್ಸಾದ ಗಿರಿಧರ ಗುಮಾಂಗ, ಕೇಂದ್ರ ಸಚಿವ ಶ್ರೀಪಾದ ನಾಯಕ್‌ ಸೇರಿದಂತೆ ಅನೇಕ ರಾಜ್ಯದ ಸಚಿವರು, ಶಾಸಕರು ಭೇಟಿ ನೀಡಿದ್ದಾರೆ.

ಸೋಮದೇವರಹಟ್ಟಿ ತಾಂಡಾ 1ರಲ್ಲಿರುವ ಶ್ರೀ ಮಾತಾ ದುರ್ಗಾದೇವಿ ದೇವಸ್ಥಾನ
ಸೋಮದೇವರಹಟ್ಟಿ ದುರ್ಗಾದೇವಿಗೆ 400 ವರ್ಷಗಳ ಇತಿಹಾಸವಿದೆ. ದೇವರ ದರ್ಶನ ಪಡೆದ ಅನೇಕರು ಉತ್ತಮ ಹುದ್ದೆಗಳನ್ನು ಅಲಂಕರಿಸಿದ್ದಾರೆ. ದೇವಿಯ ಮಹಾತ್ಮೆ ಕಂಡು ವಿವಿಧೆಡೆಯಿಂದ ಪ್ರಭಾವಿಗಳು ಬರುತ್ತಾರೆ. -
ಜಗನು ಮಹಾರಾಜ, ಅಧ್ಯಕ್ಷ ಶ್ರೀ ಮಾತಾ ದುರ್ಗಾದೇವಿ ದೇವಸ್ಥಾನ ಸಮಿತಿ
ಬಂಜಾರ ಸಮುದಾಯದ ಪ್ರಮುಖ ಯಾತ್ರಾ ಸ್ಥಳ ಇದಾಗಿದೆ. ವಿವಿಧ ರಾಜ್ಯಗಳಿಗೆ ಗುಳೆ ಹೋದ ಸಮುದಾಯ ಆ ರಾಜ್ಯಗಳಲ್ಲಿ ಪ್ರಭಾವ ಬೀರಿರುವುದರಿಂದ ಅಲ್ಲಿನ ರಾಜಕಾರಣಿಗಳು ಸಮುದಾಯದ ಮನಗೆಲ್ಲಲು ದೇವಿಯ ದರ್ಶನಕ್ಕೆ ಬರುತ್ತಾರೆ.
–ಡಾ.ಬಾಬುರಾಜೇಂದ್ರ ನಾಯಿಕ ಸಮಾಜದ ಮುಖಂಡ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.