ವಿಜಯಪುರ: ‘ಯುಕೆಪಿ ಮೂರನೇ ಹಂತದ ಯೋಜನೆ ಸಂಪೂರ್ಣ ಜಾರಿಗಾಗಿ ಯಾವುದೇ ಹೋರಾಟಕ್ಕೂ ನಾನು ಸಿದ್ಧ’ ಎಂದು ವಿಧಾನಪರಿಷತ್ ಸದಸ್ಯ ಸುನೀಲಗೌಡ ಬಿ.ಪಾಟೀಲ ಹೇಳಿದರು.
ಯುಕೆಪಿ-ಮೂರನೇ ಹಂತದ ಎಲ್ಲ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಆಗ್ರಹಿಸಿ ಶನಿವಾರ ಹಮ್ಮಿಕೊಂಡಿದ್ದ ‘ಗಾಂಧಿ ನಡಿಗೆ, ಕೃಷ್ಣೆಯ ಕಡೆಗೆ’ ಪಾದಯಾತ್ರೆ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1964ರಿಂದ ಲಾಲಬಹುದ್ದೂರ್ ಶಾಸ್ತ್ರಿಯವರಿಂದ ಆರಂಭಗೊಂಡ ಯುಕೆಪಿ ಯೋಜನೆಗಳು ವಿವಿಧ ಕಾರಣಗಳಿಂದಾಗಿ ಇದುವರೆಗೂ ಮುಕ್ತಾಯಗೊಂಡಿಲ್ಲ. ನಮ್ಮ ಭಾಗದವರೆ ಆರು ಬಾರಿ ನೀರಾವರಿ ಸಚಿವರಾಗಿದ್ದರೂ ಈ ಯೋಜನೆ ಪೂರ್ಣಗೊಳಿಸಲಿಲ್ಲ ಎಂಬ ಆರೋಪ ಇದೆ. ಆದರೆ, ಸಿದ್ದರಾಮಯ್ಯನವರ ಸರ್ಕಾರದಲ್ಲಿ ಎಂ.ಬಿ.ಪಾಟೀಲರು ಸಚಿವರಾಗಿ ಮಾಡಿದ ಕಾರ್ಯ ಯುಕೆಪಿ ಇತಿಹಾಸದಲ್ಲಿಯೇ ಅವಿಸ್ಮರಣೀಯವಾಗಿದೆ ಎಂದರು.
ಬಾಗಲಕೋಟೆಗಿಂತಲೂ ವಿಜಯಪುರ ಹೆಚ್ಚು ಒಣಭೂಮಿಯನ್ನು ಹೊಂದಿದ ಜಿಲ್ಲೆಯಾಗಿದ್ದು, ಇಲ್ಲಿನ ರೈತರ ಸ್ಥಿತಿ ತೀವ್ರ ಶೋಚನೀಯವಾಗಿತ್ತು. ಇಲ್ಲಿ ನಮಗೆ ಕನ್ಯೆ ಕೊಡಲು ಸಹ ಯಾರು ಮುಂದೆ ಬರುತ್ತಿರಲ್ಲಿಲ್ಲ. ಅಂತಹ ಪರಿಸ್ಥಿತಿಯಲ್ಲಿದ್ದ ವಿಜಯಪುರದ ಸ್ಥಿತಿ ಇಂದು ಸುಧಾರಣೆಯಾಗಿದೆ. ಹೆಚ್ಚು ನೀರಾವರಿ ಯೋಜನೆಗಳು ಜಾರಿಯಾಗಿವೆ. ನಮ್ಮ ಜಿಲ್ಲೆಯಿಂದ ಗಡಿಭಾಗದ ಮಹಾರಾಷ್ಟ್ರದ ಕನ್ನಡಿಗರು ವಾಸಿಸುವ ಹಳ್ಳಿಗಳಿಗೂ ನೀರು ಹರಿದು, ಅಂತರ್ಜಲ ಹೆಚ್ಚಿದೆ ಎಂದು ಹೇಳಿದರು.
ಅತೀ ಹೆಚ್ಚು ಮುಳುಗಡೆ ಹೊಂದುವ ಬಾಗಲಕೋಟೆ ಜಿಲ್ಲೆಯ ರೈತರು ಹೆಚ್ಚು ಸಂತ್ರಸ್ತರಾಗಿದ್ದು, ಎಲ್ಲಾ ರೈತರಿಗೂ ಏಕರೂಪ ಪರಿಹಾರವನ್ನು ನೀಡಲು ಸರ್ಕಾರ ಕೂಡಲೇ ಮುಂದಾಗಬೇಕು. ಆಣೆಕಟ್ಟು ಎತ್ತರಿಸುವ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಇದಕ್ಕಾಗಿ ಎಂತಹ ಹೋರಾಟಕ್ಕೂ ನಾನು ಸಿದ್ಧನಿದ್ದೇನೆ ಎಂದು ಹೇಳಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಶಾಸಕ ಶಿವಾನಂದ ಪಾಟೀಲ, ಮಾಜಿ ಶಾಸಕ ಜೆ.ಟಿ.ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.