ADVERTISEMENT

ಉಮೇಶ ಕತ್ತಿ ನಿಧನ: ವಿಜಯಪುರ ಜಿಲ್ಲಾ ಉಸ್ತುವಾರಿ ಹೊಣೆ ಯಾರ ಹೆಗಲಿಗೆ?

ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೂವರು ಉಸ್ತುವಾರಿ ಬದಲಾವಣೆ

ಬಸವರಾಜ ಸಂಪಳ್ಳಿ
Published 7 ಸೆಪ್ಟೆಂಬರ್ 2022, 19:30 IST
Last Updated 7 ಸೆಪ್ಟೆಂಬರ್ 2022, 19:30 IST
ಉಮೇಶ ಕತ್ತಿ
ಉಮೇಶ ಕತ್ತಿ   

ವಿಜಯಪುರ: ಸಚಿವ ಉಮೇಶ ಕತ್ತಿ ಅವರ ಹಠಾತ್‌ ನಿಧನದಿಂದ ವಿಜಯಪುರ ಜಿಲ್ಲಾ ಉಸ್ತುವಾರಿ ಸ್ಥಾನ ಮತ್ತೆ ಖಾಲಿಯಾಗಿದೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಆರಂಭದಲ್ಲಿ ಗದುಗಿನ ಸಿ.ಸಿ.ಪಾಟೀಲ, ಬಳಿಕ ಬೆಳಗಾವಿಯ ಶಶಿಕಲಾ ಜೊಲ್ಲೆ, ಆ ನಂತರ ಉಮೇಶ ಕತ್ತಿ ಸೇರಿದಂತೆ ಇದುವರೆಗೆ ಮೂವರು ಸಚಿವರು ಜಿಲ್ಲೆಯ ಉಸ್ತುವಾರಿ ಹೊಣೆ ಹೊತ್ತಿದ್ದರು.

ಸಚಿವರಾದ ಸಿ.ಸಿ.ಪಾಟೀಲ ಮತ್ತು ಶಶಿಕಲಾ ಜೊಲ್ಲೆ ಅವರು ಜಿಲ್ಲೆಯ ಒಳರಾಜಕೀಯದ ಏಟನ್ನು ಸಹಿಸಲಾಗದೇ ಈ ಜಿಲ್ಲೆಯ ಉಸಾಬರಿಯೇ ಬೇಡವೆಂದು ಒಬ್ಬರು ಬಾಗಕೋಟೆಗೆ, ಇನ್ನೊಬ್ಬರು ಹೊಸಪೇಟೆಗೆ ಹೋಗಿದ್ದಾರೆ.

ADVERTISEMENT

1994ರಲ್ಲೊಮ್ಮೆ ವಿಜಯಪುರ ಜಿಲ್ಲೆಯ ‘ಪಾಲಕ ಮಂತ್ರಿ’ಯಾಗಿದ್ದ ಉಮೇಶ ಕತ್ತಿ ಅವರುಒಂದು ವರ್ಷದ ಈಚೆಗೆ ಜಿಲ್ಲೆಯ ಉಸ್ತುವಾರಿಯಾಗಿ ನಿಯೋಜನೆಯಾಗಿದ್ದರು. ಎಲ್ಲಿಯೂ, ಯಾರಿಗೂ ಅಸಮಾಧಾನವಾಗದಂತೆತಮ್ಮ ಪಕ್ಷದ ಶಾಸಕರು, ಸಂಸದರು ಸೇರಿದಂತೆ ಕಾಂಗ್ರೆಸ್‌, ಜೆಡಿಎಸ್‌ ಶಾಸಕರೊಂದಿಗೂ ಉತ್ತಮ ಸ್ನೇಹ, ಸಂಪರ್ಕ ಸಾಧಿಸಿ, ಅಧಿಕಾರಿಗಳೊಂದಿಗೂ ನಿರಂತರ ಸಂಪರ್ಕ ಇಟ್ಟುಕೊಂಡು ಅಚ್ಚುಕಟ್ಟಾಗಿ ನಿರ್ವಹಿಸತೊಡಗಿದ್ದರು. ಇದೀಗ ಅವರ ದಿಢೀರ್‌ ನಿರ್ಗಮನ ಜಿಲ್ಲೆಯಲ್ಲಿ ಮತ್ತೆ ಉಸ್ತುವಾರಿ ಸ್ಥಾನದಲ್ಲಿ ನಿರ್ವಾತವನ್ನು ಸೃಷ್ಟಿಸಿದೆ.

ಅಭಿವೃದ್ಧಿಗೆ ಹಿನ್ನೆಡೆ:

ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಇದುವರೆಗೆ ಯಾವೊಬ್ಬ ಸಚಿವರು ಪೂರ್ಣಾವಧಿಗೆ ಜಿಲ್ಲಾ ಉಸ್ತುವಾರಿಯಾಗದೇ ಇರುವುದು ಜಿಲ್ಲೆಯ ಅಭಿವೃದ್ದಿಗೆ ಹಿಂದೇಟಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಹೊರ ಜಿಲ್ಲೆಯ ಉಸ್ತುವಾರಿಸಚಿವರು ಕಾಟಾಚಾರಕ್ಕೆ ಎಂಬಂತೆ ತಿಂಗಳಿಗೊಮ್ಮೆ ಜಿಲ್ಲೆಗೆ ಭೇಟಿ ನೀಡುವುದರಿಂದ ಸಹಜವಾಗಿಯೇ ಜಿಲ್ಲೆಯ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. ಶಾಸಕರು ಅವರವರ ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ. ಇಡೀಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ ಎಂಬ ಆರೋಪವೂ ವ್ಯಕ್ತವಾಗಿದೆ.

ಜಿಲ್ಲೆಯವರಿಗೇ ಸಿಗುವುದೇ?

ವಿಜಯಪುರ: ಹೊರ ಜಿಲ್ಲೆಯವರ ಬದಲಿಗೆ ಜಿಲ್ಲೆಯವರಿಗೇ ಉಸ್ತುವಾರಿ ನೀಡಬೇಕು ಎಂಬ ಕೂಗು ಆರಂಭದಿಂದ ಕೇಳಿಬರುತ್ತಿದೆ. ಆದರೆ, ಜಿಲ್ಲೆಯ ನಾಲ್ವರು ಬಿಜೆಪಿ ಶಾಸಕರಿದ್ದರೂ ಯಾರೊಬ್ಬರಿಗೂ ಸಚಿವ ಸ್ಥಾನದ ಭಾಗ್ಯ ಒಲಿದಿಲ್ಲ. ಹೀಗಾಗಿ ಜಿಲ್ಲಾ ಉಸ್ತುವಾರಿ ಮಾತು ಇನ್ನೆಲ್ಲಿ?

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಸದ್ಯ ಜಿಲ್ಲೆಯ ಶಾಸಕರಲ್ಲದಿದ್ದರೂ ಮೂಲತಃ ವಿಜಯಪುರ ಜಿಲ್ಲೆಯವರು. ಅಲ್ಲದೇ, ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿ ಇರುವ ಅವರು ಆಗಾಗ ಭೇಟಿ ನೀಡುತ್ತಿರುತ್ತಾರೆ.

ವಿಜಯಪುರ ವಿಮಾನ ನಿಲ್ದಾಣ, ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಗೆ ಅನುಮೋದನೆ ಹಾಗೂ ಅನುದಾನ ಒದಗಿಸುವ ಮೂಲಕ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ.

ಜಿಲ್ಲೆಯ ರಾಜಕಾರಣವನ್ನು ಬೇರುಮಟ್ಟದಿಂದ ಅರಿತಿರುವ ಕಾರಜೋಳ ಅವರನ್ನೇ ಜಿಲ್ಲಾ ಉಸ್ತುವಾರಿ ಮಾಡಿದರೆ ಚುನಾವಣೆಯ ಹೊತ್ತಿನಲ್ಲಿ ಪಕ್ಷಕ್ಕೆ ಮತ್ತು ಜಿಲ್ಲೆಯ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಬಿಜೆಪಿ ಪಾಳೆಯದಲ್ಲಿ ವ್ಯಕ್ತವಾಗಿದೆ.

ಒಂದು ವೇಳೆ ಸಚಿವ ಸಂಪುಟ ವಿಸ್ತರಣೆ ಮಾಡಿದರೆ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅಥವಾ ಎ.ಎಸ್‌.ಪಾಟೀಲ ನಡಹಳ್ಳಿ ಅವರಿಗೆ ಉಸ್ತುವಾರಿ ನೀಡಬೇಕು ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರುಇನ್ನುಳಿದ ಅಲ್ಪ ಅವಧಿಗೆ ವಿಜಯಪುರ ಜಿಲ್ಲೆಯ ಉಸ್ತುವಾರಿ ಹೊಣೆಯನ್ನು ಯಾರ ಹೆಗಲಿಗೆ ವಹಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.