ADVERTISEMENT

ಉರ್ದು ಭಾಷಾ ಪತ್ರಕರ್ತ ರಫೀ ಭಂಡಾರಿಗೆ ರಾಜ್ಯೋತ್ಸವ ಗೌರವ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2023, 13:43 IST
Last Updated 31 ಅಕ್ಟೋಬರ್ 2023, 13:43 IST
   

ವಿಜಯಪುರ: ಹಿರಿಯ ಉರ್ದು ಭಾಷಾ ಪತ್ರಕರ್ತ ರಫೀ ಭಂಡಾರಿ ಅವರಿಗೆ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

‘ಡೈಲಿ ಸಾಲಾರ್‌’ ಉರ್ದು ದಿನಪತ್ರಿಕೆಯ ಹಿರಿಯ ವರದಿಗಾರರಾಗಿ 37 ವರ್ಷಗಳಿಂದ ಭಂಡಾರಿ ಅವರು ವಿಜಯಪುರ ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಉರ್ದು ಸಾಹಿತ್ಯ, ಸಂಘಟನೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲೂ ಅವರು ಗಮನಾರ್ಹ ಕಾರ್ಯನಿರ್ವಹಿಸಿದ್ದಾರೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯರಾಗಿ ಹಾಗೂ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ADVERTISEMENT

ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಉರ್ದು ಅಕಾಡೆಮಿ ಪ್ರಶಸ್ತಿ, ಡಾ.ಮಮತಾಜ್‌ ಅಹಮ್ಮದ್‌ ಖಾನ್‌ ಕಮ್ಯುನಿಟಿ ಅವಾರ್ಡ್‌, ಮೊಹಿಸಿನ್‌ –ಇ–ಉರ್ದು ಅವಾರ್ಡ್‌, ಕದಂಬ ಸೇವಾ ಪುರಸ್ಕಾರ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಂಡಾರಿ ಭಾಜನರಾಗಿದ್ದಾರೆ.

ಓಡಿಸ್ಸಾ, ತಮಿಳುನಾಡಿನಲ್ಲಿ ನಡೆದ ವಿಶ್ವ ವಿಜ್ಞಾನ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ, ನವದಹೆಲಿಯ ಎನ್‌ಸಿಪಿಯುಎಲ್ ಆಯೋಜಿಸಿದ್ದ ವಿಶ್ವ ಉರ್ದು ಸಮ್ಮೇಳನದಲ್ಲಿಯೂ ಪ್ರಬಂಧ ಮಂಡನೆ, ಜೈಪುರದಲ್ಲಿ ನಡೆದ ಉರ್ದು ಸಮ್ಮೇಳನದಲ್ಲಿ ಉಪನ್ಯಾಸ, ಹೈದರಬಾದ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಉರ್ದು ಸಮ್ಮೇಳನದಲ್ಲಿಯೂ ಪಾಲ್ಗೊಂಡಿರುವ ಹೆಗ್ಗಳಿಕೆ ಅವರದ್ದಾಗಿದೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಫೀ ಭಂಡಾರಿ, ‘ಉರ್ದು ಪತ್ರಿಕಾ ರಂಗವನ್ನು ಗುರುತಿಸಿ ಗೌರವಿಸುವ ಮೂಲಕ ಕರ್ನಾಟಕ ಸರ್ಕಾರ ಭಾಷಾ ಸೌಹಾರ್ದತೆಗೆ ಆದ್ಯತೆ ನೀಡಿರುವುದಕ್ಕೆ ಸಂತಸವಾಗಿದೆ. ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.