ಚಡಚಣ: ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಕೊಡಲು ಪೂರಕವಾದ ಕಾಂತರಾಜ ವರದಿಯನ್ನು ರಾಜ್ಯ ಸರ್ಕಾರ ತಕ್ಷಣ ಜಾರಿಗೊಳಿಸಬೇಕು ಎಂದು ಮಾಜಿ ಶಾಸಕ ರಾಜು ಆಲಗೂರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಆಯೋಜಿಸಲಾದ ಶೋಷಿತ ವರ್ಗಗಳ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
‘ಕಾಂತರಾಜ ಆಯೋಗದ ವರದಿಯನ್ನು ಜಾರಿಗೊಳಸದ ಹಾಗೆ ಕೆಲ ಪಟ್ಟಬದ್ಧ ಹಿತಾಸಕ್ತಿಗಳು ತೆರೆಮರೆಯಲ್ಲಿ ಕೆಲಸ ಮಾಡುತ್ತಿವೆ. ಕಾಂತರಾಜ್ ಆಯೋಗದ ವರದಿ ಅತ್ಯಂತ ನಿಖರವಾಗಿದೆ. ಸಾಕಷ್ಟು ಶ್ರಮ ವಹಿಸಿ ಈ ವರದಿ ಸಿದ್ದಪಡಿಸಿದ್ದಾರೆ. ರಾಜಕೀಯ, ಆರ್ಥಿಕ, ಶೈಕ್ಷಣಿಕ ಅವಕಾಶಗಳು ಶೋಷಿತ ಸಮಾಜಗಳಿಗೆ ಲಭಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರತು ಯಾರಿಂದಲೂ ಈ ವರದಿ ಜಾರಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅವರ ಅವಧಿಯಲ್ಲೇ ಈ ವರದಿ ಅನುಷ್ಠಾನಗೊಳ್ಳಬೇಕಿದೆ. ಇಲ್ಲವಾದರೆ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ’ ಎಂದು ಆಲಗೂರ ಎಚ್ಚರಿಕೆ ನೀಡಿದರು.
ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, ‘₹ 185 ಕೋಟಿಯನ್ನು ಕಾಂತರಾಜ ಆಯೋಗದ ವರದಿಯ ಸಮೀಕ್ಷೆಗಾಗಿ ಖರ್ಚು ಮಾಡಲಾಗಿದೆ. ಐದಾರು ವರ್ಷ ಕಷ್ಟಪಟ್ಟು ಸಮೀಕ್ಷೆ ನಡೆಸಿ, ರಾಜ್ಯದ ಜನರ ದುಡ್ಡಲ್ಲಿ ಆಯೋಗ ಕೆಲಸ ಮಾಡಿದೆ. 15 ಸಾವಿರ ನೌಕರರು ಮನೆಮನೆಗೆ ಹೋಗಿ ಕೆಲಸ ಮಾಡಿದ್ದಾರೆ. ಈ ಆಯೋಗದ ವರದಿ ಸಾಮಾಜಿಕ ಮತ್ತು ಶೈಕ್ಷಣಿಕ ಜೊತೆಗೆ ಆರ್ಥಿಕ ಸ್ಥಿತಿಗತಿಗಳನ್ನೂ ಎತ್ತಿ ಹಿಡಿದಿದೆ. ಶೋಷಿತ ವರ್ಗದವರ ಕಲ್ಯಾಣಕ್ಕಾಗಿ ಕಾಂತರಾಜ ವರದಿ ಜಾರಿಗೊಳಿಸಬೇಕು. ಇಲ್ಲದಿದ್ದರೆ ಬೆಂಗಳೂರಿನ ವಿಧಾನ ಸೌಧ ಅಥವಾ ಚಳಿಗಾಲದ ಅಧಿವೇಶನದಲ್ಲಿ ವರಿದಿ ಜಾರಿಗೊಳಿಸಬೇಕು’ ಎಂದು ಆಗ್ರಹಿಸಿ ಮುತ್ತಿಗೆ ಹಾಕಲಾಗುವುದು ಎಂದರು.
ಕಾಂಗ್ರೆಸ್ ವಕ್ತಾರ ಎಸ್.ಎಂ. ಪಾಟೀಲ (ಗಣಿಯಾರ), ಜಿಲ್ಲಾ ಅಹಿಂದ ಮುಖಂಡರಾದ ಸೋಮನಾಥ ಕಳ್ಳಿಮನಿ, ಚಂದ್ರಶೇಖರ ಕೊಡಬಾಗಿ ಮಾತನಾಡಿದರು.
ಮುಖಂಡರಾದ ಸುರೇಶಗೌಡ ಪಾಟೀಲ, ಸುರೇಶ ಗೊಣಸಗಿ, ಎಂ.ಜಿ. ಯಂಕಂಚಿ, ರಾಜಶ್ರೀ ಯರನಾಳ, ಮಲ್ಲು ಬಿದರಿ, ಪ್ರಭುಗೌಡ ಪಾಟೀಲ, ಜಟ್ಟೆಪ್ಪ ಬನಸೋಡೆ, ನಾಗರಾಜ ಲಂಬು, ಅಡವೆಪ್ಪ ಸಾಲಗಲ್ಲ, ಸಂಜು ಕೆಂಬೋಗಿ, ಮಹಾದೇವ ಹಿರೇಕುರಬರ, ಕಾಮೇಶ ಪಾಟೀಲ, ಪ್ರಭು ಕೋಳಿ, ರಾಜೂ ಸಿಂಗೆ, ರಫೀಕ ಮಕಾನದಾರ, ರಾಮ ಝಡಪೇಕರ್, ದಶರಥ ಬನಸೋಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.