ADVERTISEMENT

ಮುದ್ದೇಬಿಹಾಳ: ಬಸ್‌ನಿಲ್ದಾಣ ರಸ್ತೆಗೆ ಮೂತ್ರಾಲಯದ ಕೊಳಚೆ

ಬಸ್ ನಿಲ್ದಾಣಕ್ಕೆ ಹಳೆ ಮಾರುಕಟ್ಟೆ ಒಳರಸ್ತೆಯಲ್ಲಿ ಓಡಾಡುವ ಪ್ರಯಾಣಿಕರು

ಪ್ರಜಾವಾಣಿ ವಿಶೇಷ
Published 29 ಮೇ 2024, 5:07 IST
Last Updated 29 ಮೇ 2024, 5:07 IST
ಮುದ್ದೇಬಿಹಾಳ ಪಟ್ಟಣದ ಬಸ್ ನಿಲ್ದಾಣಕ್ಕೆ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಪಕ್ಕದ ರಸ್ತೆಯಿಂದ ಬರುವ ದಾರಿಯಲ್ಲಿ ಮೂತ್ರಾಲಯದ ಕೊಳಚೆಯನ್ನು ತುಳಿದುಕೊಂಡೇ ಬರುತ್ತಿರುವ ಪ್ರಯಾಣಿಕರು
ಮುದ್ದೇಬಿಹಾಳ ಪಟ್ಟಣದ ಬಸ್ ನಿಲ್ದಾಣಕ್ಕೆ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಪಕ್ಕದ ರಸ್ತೆಯಿಂದ ಬರುವ ದಾರಿಯಲ್ಲಿ ಮೂತ್ರಾಲಯದ ಕೊಳಚೆಯನ್ನು ತುಳಿದುಕೊಂಡೇ ಬರುತ್ತಿರುವ ಪ್ರಯಾಣಿಕರು   

ಮುದ್ದೇಬಿಹಾಳ: ಇಲ್ಲಿಯ ಬಸ್ ನಿಲ್ದಾಣಕ್ಕೆ ಹಳೆ ಮಾರುಕಟ್ಟೆಯಿಂದ ಇರುವ ಒಳರಸ್ತೆಯಲ್ಲಿ ಮೂತ್ರಾಲಯದ ಕೊಳಚೆ ನೀರು ತುಳಿದುಕೊಂಡೇ ಓಡಾಡುವ ದುಸ್ಥಿತಿ ಇದೆ.

ಮುದ್ದೇಬಿಹಾಳದಲ್ಲಿ ಬಸ್ ನಿಲ್ದಾಣ ಯಾವಾಗ ಆರಂಭವಾಯಿತೋ ಆವಾಗಿನಿಂದಲೂ ಈ ರಸ್ತೆ ಇದೆ. ಹಳೇಕೋರ್ಟ್, ಹಳೇ ಕಾಯಿಪಲ್ಲೆ ಮಾರುಕಟ್ಟೆ, ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಸಮೀಪದಲ್ಲಿರುವ ರಸ್ತೆಯಿಂದ ಬಸ್ ನಿಲ್ದಾಣದೊಳಗೆ ಬರಬಹುದು. ಇಂದಿಗೂ ನಿತ್ಯವೂ ನೂರಾರು ಪ್ರಯಾಣಿಕರು ಇದೇ ರಸ್ತೆ ಬಳಸಿ ನಿಲ್ದಾಣಕ್ಕೆ ಬರುತ್ತಾರೆ.

ಆದರೆ ಈ ರಸ್ತೆಯಲ್ಲಿ ಬಸ್ ನಿಲ್ದಾಣದ ಬಲಭಾಗದಲ್ಲಿ ನಿರ್ಮಿಸಿರುವ ಮೂತ್ರಾಲಯದ ಕೊಳಚೆಯನ್ನು ರಸ್ತೆಯ ಮೇಲೆಯೇ ನೇರವಾಗಿ ಬಿಡಲಾಗುತ್ತಿದೆ. ಇದರಿಂದ ದುರ್ನಾತ ಹರಡಿದೆ. ಪ್ರಯಾಣಿಕರು ಈ ಕೊಳಚೆಯನ್ನು ತುಳಿದುಕೊಂಡೇ ನಿಲ್ದಾಣಕ್ಕೆ ಬರುತ್ತಿದ್ದಾರೆ. ನಂತರ ತಾವು ಬಾಟಲಿಯಲ್ಲಿ ತಂದಿರುವ ನೀರು ಹಾಕಿ ಕಾಲು ತೊಳೆದುಕೊಳ್ಳುತ್ತಾರೆ.

ADVERTISEMENT

ಹಲವು ವರ್ಷಗಳಿಂದ ಮೂತ್ರಾಲಯದ ಕೊಳಚೆಯನ್ನು ನಿಲ್ದಾಣದಿಂದ ಜನರು ತಿರುಗಾಡುವ ರಸ್ತೆಯಲ್ಲಿ ಹರಿಬಿಡುತ್ತಿರುವುದರಿಂದ ದುರ್ನಾತ ಬೀರುತ್ತಿದೆ. ಅಧಿಕಾರಿಗಳು ಕೂಡಲೇ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು. ಕೊಚ್ಚೆಯಲ್ಲೇ ತಿರುಗಾಡುವ ಸ್ಥಿತಿ ಬಂದಿರುವುದು ಶೋಚನೀಯ ಸಂಗತಿ ಎಂದು ಸಾಮಾಜಿಕ ಕಾರ್ಯಕರ್ತ ಖಾಜಾಹುಸೇನ್ ಹುನಕುಂಟಿ ತಿಳಿಸಿದ್ದಾರೆ.

ಕಸಕಡ್ಡಿ ತುಂಬಿರುವ ಬಸ್ ನಿಲ್ದಾಣದ ಚರಂಡಿ

ಯುಜಿಡಿ ಸಂಪರ್ಕ ನೀಡುವಂತೆ ಪುರಸಭೆ ಅಧಿಕಾರಿಗಳಿಗೆ ಕೇಳಿ ಎರಡು ಬಾರಿ ಪತ್ರ ಬರೆದಿದ್ದೇವೆ. ಇನ್ನೊಮ್ಮೆ ಗಮನಕ್ಕೆ ತಂದು ಈ ಸಮಸ್ಯೆಗೆ ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳುತ್ತೇವೆ

-ಎ.ಎಚ್. ಮದಭಾವಿ ಸಾರಿಗೆ ಘಟಕ ವ್ಯವಸ್ಥಾಪಕ

ಮೂತ್ರಾಲಯದ ಕೊಳಚೆ ರಸ್ತೆಯ ಮೇಲೆ ಹರಿಯುತ್ತಿರುವ ಕುರಿತು ಪರಿಶೀಲನೆ ನಡೆಸುತ್ತೇನೆ. ಒಳಚರಂಡಿಗೆ ಸಂಪರ್ಕ ಕಲ್ಪಿಸುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ

-ಬಸವರಾಜ ಬಳಗಾನೂರ ಮುಖ್ಯಾಧಿಕಾರಿ ಪುರಸಭೆ

Cut-off box -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.