ADVERTISEMENT

ಹೊರ್ತಿ: ಕಳೆ ನಾಶಕ್ಕೆ ಸೈಕಲ್ ಎಡೆಕುಂಟೆ ಬಳಕೆ

ಎತ್ತುಗಳಿಗೆ ಬೆಲೆ ಹೆಚ್ಚು: ಉಳಿತಾಯಕ್ಕೆ ಪರ್ಯಾಯ ಮಾರ್ಗ ಕಂಡುಕೊಂಡ ರೈತರು

ಕೆ.ಎಸ್.ಈಸರಗೊಂಡ
Published 23 ಜುಲೈ 2024, 4:32 IST
Last Updated 23 ಜುಲೈ 2024, 4:32 IST
ಹೊರ್ತಿ ಸಮೀಪದ ಚಡಚಣ ತಾಲ್ಲೂಕಿನ ಕನಕನಾಳ ಗ್ರಾಮದ ರೈತ ಸಿದ್ಧರಾಯ ಖಿಲಾರಿ ಅವರು ಸೈಕಲ್ ಎಡೆಕುಂಟೆ ಬಳಸಿ ತಮ್ಮ ಹೊಲದಲ್ಲಿನ ಉದ್ದು ಮತ್ತು ಸಜ್ಜೆ ಬೆಳೆಯಲ್ಲಿನ ಕಳೆ ತೆಗೆದರು
ಹೊರ್ತಿ ಸಮೀಪದ ಚಡಚಣ ತಾಲ್ಲೂಕಿನ ಕನಕನಾಳ ಗ್ರಾಮದ ರೈತ ಸಿದ್ಧರಾಯ ಖಿಲಾರಿ ಅವರು ಸೈಕಲ್ ಎಡೆಕುಂಟೆ ಬಳಸಿ ತಮ್ಮ ಹೊಲದಲ್ಲಿನ ಉದ್ದು ಮತ್ತು ಸಜ್ಜೆ ಬೆಳೆಯಲ್ಲಿನ ಕಳೆ ತೆಗೆದರು   

ಹೊರ್ತಿ: ಗ್ರಾಮೀಣ ಪ್ರದೇಶದ ಬಹುತೇಕ ಕೃಷಿ ಭೂಮಿಗಳಲ್ಲಿ ಮುಂಗಾರು ಮಳೆಯಿಂದ ಬೆಳೆಗಳ ನಡುವೆ ಚಿಗುರೊಡೆದ ಕಸ ತೆಗೆಯಲು ಹೊಡೆಯುವ ಎಡೆಕುಂಟೆ ಕಾರ್ಯ ಭರದಿಂದ ಸಾಗಿದೆ. ಏಕ ಚಕ್ರದ ಸೈಕಲ್‌ನಿಂದ ತಯಾರಿಸಿದ ಸಾಧನದಿಂದ ರೈತರು ಎಡೆಕುಂಟೆ ಹೊಡೆಯುತ್ತಿದ್ದಾರೆ.

ಕಳೆದ ತಿಂಗಳು ಅಲ್ಪಸ್ವಲ್ಪ ಸುರಿದ ಮುಂಗಾರು ಮಳೆಗೆ ಸಜ್ಜೆ, ಹೆಸರು, ಉದ್ದು, ತೊಗರಿ, ಸೊಯಾಬೀನ್, ಶೇಂಗಾ, ಗೋವಿನ ಜೋಳ ಸೇರಿದಂತೆ ಮೊದಲಾದ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಈಗ ಬೆಳೆಗಳು ಈಗಷ್ಟೇ ಚನ್ನಾಗಿವೆ. ಅದರೂ ಮಳೆ ಕೊರತೆಯಲ್ಲಿ ಬಿತ್ತನೆ ಮಾಡಿದ 20 ದಿನದ ನಂತರ ರೈತರು ಎಡೆಕುಂಟೆ ಹೊಡೆಯುತ್ತಾರೆ.

‘ಈಚಿನ ವರ್ಷಗಳಲ್ಲಿ ಎತ್ತುಗಳ ಎಡೆಕುಂಟೆ ಹೊಡೆಸಲು ರೈತಾಪಿ ಜನ ಹಿಂದೇಟು ಹಾಕುತ್ತಿದ್ದಾರೆ. ಎಕರೆಗೆ ₹1,500 ರಿಂದ ₹2 ಸಾವಿರದ ವರೆಗೆ ಬಾಡಿಗೆ ಕೊಟ್ಟು ಎಡೆಕುಂಟೆ ಹೊಡೆಸಬೇಕಾಗಿದೆ. ಇಷ್ಟು ಹಣ ವ್ಯಯಿಸುವ ಬದಲು ಸೈಕಲ್‌ನಿಂದ ತಯಾರಿಸಿದ ಎಡೆಕುಂಟೆಯಿಂದ ದಿನಕ್ಕೆ ಸಂಜೆಯವರೆಗೆ ಒಂದು ಎಕರೆ ಭೂಮಿಯನ್ನು ಎಡೆ ಹೊಡೆಯುತ್ತೇವೆ. ಒಂದು ವೇಳೆ ಭೂಮಿಯ ನೆಲ ಬಿರುಸು ಆಗಿತ್ತು ಅಂದರೆ ಎರಡು ದಿನ ಎಡೆಕುಂಟೆ ಹೊಡೆಯಬೇಕಾಗುತ್ತದೆ. ಇದರಿಂದ ಬಾಡಿಗೆ ಮತ್ತು ಕೂಲಿ ಖರ್ಚು ಉಳಿತಾಯವಾಗುತ್ತದೆ’ ಎನ್ನುತ್ತಾರೆ ಕನಕನಾಳ ಗ್ರಾಮದ ರೈತ ಸಿದ್ಧರಾಯ ಖಿಲಾರಿ.

ADVERTISEMENT

‘ಮಳೆಗೆ ಕೃಷಿ ಭೂಮಿಯಲ್ಲಿ ಬೆಳೆದ ಬೆಳೆ ಬಿಗಿದುಕೊಂಡಿರುತ್ತದೆ. ಒಳ್ಳೆಯ ಬೆಳವಣಿಗೆಗಾಗಿ ಮಣ್ಣನ್ನು ಸಡಿಲುಗೊಳಿಸಲು ಮತ್ತು ಬೆಳೆಯ ನಡುವೆ ಚಿಗುರೊಡೆದ ಕಳೆಯನ್ನು ನಾಶಪಡಿಸಲು ಎಡೆಕುಂಟೆ ಹೊಡೆಯಲಾಗುತ್ತದೆ. ಹೀಗೆ ಮಾಡುವುದರಿಂದ ಮಣ್ಣು ಬೆಳೆಗಳ ಬುಡಕ್ಕೆ ಹೋಗಿ ಬೀಳುತ್ತದೆ. ಇದರಿಂದ ಬೆಳೆಗಳ ಬೇರುಗಳು ಸಡಿಲುಗೊಂಡು ಸದೃಢವಾಗಿ, ನೇರವಾಗಿ ಬೆಳೆಯುತ್ತವೆ’ ಎನ್ನುತ್ತಾರೆ ರೈತರು.

‘ಭೂಮಿ ಬಿರುಸು ಆಗಿದ್ದರೆ ಎಡೆಕುಂಟೆಯನ್ನು ಸತತವಾಗಿ ಭಾರ ಹಾಕಿ ಮುನ್ನೂಕಬೇಕಾಗುತ್ತದೆ ಇದರಿಂದ ಕೈಯ ರಟ್ಟೆ ಎರಡು ದಿನ ನೋವಾಗುತ್ತವೆ’ ಎನ್ನುತ್ತಾರೆ ಜಿಗಜೇವಣಿಯ ರೈತ ರೇವಪ್ಪ ಮುತ್ತಪ್ಪ ಬಜಂತ್ರಿ

ಎತ್ತುಗಳ ಬೆಲೆ ಹೆಚ್ಚಿದೆ. ಅವುಗಳನ್ನು ಖರೀದಿಸಿ ತಂದು ಮೇವು ಹಾಕಿ ಜೋಪಾನ ಮಾಡಬೇಕು. ದನಗಳ ಚಾಕರಿಗಾಗಿ ಒಬ್ಬ ಆಳು ನಿತ್ಯ ದುಡಿಯುತ್ತಾನೆ. ಎಡೆಕುಂಟೆ ಉಪಕರಣಗಳ ಸಿದ್ಧಪಡಿಸುವ ಖರ್ಚು ಇವೆಲ್ಲವನ್ನೂ ಸರಿದೂಗಿಸಲು ಎಕರೆಗೆ ಆಳು ಸಹಿತ ₹2 ಸಾವಿರ, ಇಲ್ಲವೇ ದಿನದ ಬಾಡಿಗೆಯಂತೆ ಎಡೆಕುಂಟೆ ಹೊಡೆಯಲಾಗುತ್ತದೆ ಎನ್ನುತ್ತಾರೆ ಕನಕನಾಳದ ರೈತರಾದ ಲಕ್ಷ್ಮಣ ಖೈರಾವಕರ, ಅಣ್ಣಪ್ಪ ಖಿಲಾರಿ.

ಹೊರ್ತಿ ಸಮೀಪದ ಚಡಚಣ ತಾಲ್ಲೂಕಿನ ಕನಕನಾಳ ಗ್ರಾಮದ ರೈತ ಸಿದ್ಧರಾಯ ಖಿಲಾರಿ ಅವರು ಸೈಕಲ್ ಎಡೆಕುಂಟೆ ಬಳಸಿ ತಮ್ಮ ಹೊಲದಲ್ಲಿನ ಉದ್ದು ಮತ್ತು ಸಜ್ಜೆ ಬೆಳೆಯಲ್ಲಿನ ಕಳೆ ತೆಗೆದರು
ಹೊರ್ತಿ ಸಮೀಪದ ಚಡಚಣ ತಾಲ್ಲೂಕಿನ ಜಿಗಜೇವಣಿ ಗ್ರಾಮದ ರೈತ ರೇವಪ್ಪ ಬಜಂತ್ರಿ ಅವರು ಸೈಕಲ್ ಎಡೆಕುಂಟೆ ಬಳಸಿ ತಮ್ಮ 4 ಎಕರೆ ಹೊಲದಲ್ಲಿನ ಹೆಸರು ಶೆಂಗಾ ಮತ್ತು ಸಜ್ಜೆ ಬೆಳೆಯಲ್ಲಿನ ಕಳೆ ತೆಗೆದರು
ಹೊರ್ತಿ: ಸಮೀಪದ ಚಡಚಣ ತಾಲ್ಲೂಕಿನ ಜಿಗಜೇವಣಿ ಗ್ರಾಮದ ರೈತ ರೇವಪ್ಪ ಮುತ್ತಪ್ಪ.ಬಜಂತ್ರಿ ಅವರು ತಮ್ಮ 4ಎಕರೆ ಹೊಲದಲ್ಲಿನ ಹೆಸರು ಶೆಂಗಾ ಮತ್ತು ಸಜ್ಜೆ ಬೆಳೆಯಲ್ಲಿನ ಕಳೆ ತೆಗೆಯಲಿಕ್ಕೆ 4ದಿನ ಸೈಕಲ್ ಎಡೆಕುಂಟೆ ಬಳಸಿ ತೆಗೆದರು.

4 ಎಕರೆ ಹೊಲದಲ್ಲಿನ ಹೆಸರು ಶೆಂಗಾ ಮತ್ತು ಸಜ್ಜೆ ಬೆಳೆಯಲ್ಲಿನ ಕಳೆ ತೆಗೆಯಲು 4 ದಿನ ಬೆಳಿಗ್ಗೆಯಿಂದ ಸಂಜೆಯ ತನಕ ಎಡೆಬಿಡದೇ ಕಷ್ಟಪಟ್ಟು ಸೈಕಲ್ ಎಡೆಕುಂಟೆ ಬಳಸಿ ತೆಗೆದಿದ್ದೇನೆ. ಇದರಿಂದ ₹4 ಸಾವಿರ ಉಳಿತಾಯವಾಗಿದೆ

–ರೇವಪ್ಪ ಬಜಂತ್ರಿ. ರೈತ ಜಿಗಜೀವಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.