ADVERTISEMENT

ವಿಜಯಪುರ | ಟೋಲ್‌ ತಪ್ಪಿಸಲು ವಾಹನಗಳ ಕಳ್ಳದಾರಿ; ಗ್ರಾಮಸ್ಥರಲ್ಲಿ ಅಪಘಾತದ ಆತಂಕ

ಚೆಕ್‌ಪೊಸ್ಟ್‌ ತಪ್ಪಿಸಲು ವಾಮಮಾರ್ಗ

ಪ್ರಜಾವಾಣಿ ವಿಶೇಷ
Published 5 ಜುಲೈ 2024, 5:43 IST
Last Updated 5 ಜುಲೈ 2024, 5:43 IST
ಟೋಲ್‌ ತಪ್ಪಿಸಲು ವಿಜಯಪುರ ತಾಲ್ಲೂಕಿನ ಮಖಣಾಪುರ ಗ್ರಾಮದಲ್ಲಿ ಸಂಚರಿಸುತ್ತಿರುವ ಬೃಹತ್‌ ವಾಹನ
ಟೋಲ್‌ ತಪ್ಪಿಸಲು ವಿಜಯಪುರ ತಾಲ್ಲೂಕಿನ ಮಖಣಾಪುರ ಗ್ರಾಮದಲ್ಲಿ ಸಂಚರಿಸುತ್ತಿರುವ ಬೃಹತ್‌ ವಾಹನ   

ವಿಜಯಪುರ: ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳು ಟೋಲ್‌ಗಳ ದುಬಾರಿ ಶುಲ್ಕ ಪಾವತಿ ತಪ್ಪಿಸುವ ಗ್ರಾಮೀಣ ಭಾಗದ ರಸ್ತೆಗಳನ್ನು ಕಳ್ಳದಾರಿಯನ್ನಾಗಿ ಬಳಸಿಕೊಳ್ಳುತ್ತಿದೆ ಇದರಿಂದ ಗ್ರಾಮಸ್ಥರಲ್ಲಿ ಅಪಘಾತದ ಆತಂಕ ಸೃಷ್ಟಿಯಾಗಿದೆ.

ಜಿಲ್ಲೆಯ ಸೋಲಾಪುರ–ವಿಜಯಪುರ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥಗೊಳಿಸಿದ ನಂತರ ತಾಲ್ಲೂಕಿನ ತಿಡಗುಂದಿ ಹತ್ತಿರ ಟೋಲ್‌ ನಿರ್ಮಿಸಲಾಗಿದೆ. ಹೆದ್ದಾರಿಯಲ್ಲಿ ತೆರಳುವ ಭಾರಿ ವಾಹನಗಳು ಟೋಲ್‌ ತಪ್ಪಿಸಲು ತಿಡಗುಂದಿ ಕ್ರಾಸ್‌ ಬಳಿಯಿಂದ ಅಡ್ಡ ಮಾರ್ಗ ಬಳಸುತ್ತಿವೆ. 

ಮಹಾರಾಷ್ಟ್ರದ ಪಂಢರಪುರ, ಸೋಲಾಪುರ, ಸಾತಾರ, ಸಾಂಗ್ಲಿ, ಮೀರಜ್‌, ಪುಣೆ, ಮುಂಬೈ ಕಡೆ ತೆರಳುವ ಭಾರಿ ಗಾತ್ರದ ಯಂತ್ರಗಳನ್ನು ಹೊತ್ತ ಲಾರಿಗಳು ಟೋಲ್‌ಗಳ ಕಣ್ತಪ್ಪಿಸಲು ಒಳಮಾರ್ಗ ಮೂಲಕ ಸಂಚರಿಸುತ್ತಿರುವುದು ಹೆಚ್ಚಾಗಿದೆ. ರಾತ್ರಿ ವೇಳೆ ಇಂಥ ಭಾರಿ ವಾಹನಗಳ ಸಂಚಾರ ದ್ವಿಗುಣವಾಗಿರುತ್ತಿದೆ.

ADVERTISEMENT

ಸದ್ಯ ವಿಜಯಪುರ–ಪಂಢರಪುರ ನೂತನ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ತಿಡಗುಂದಿ ಹಾಗೂ ಇನ್ನಿತರ ಟೋಲ್‌ಗಳನ್ನು ತಪ್ಪಿಸಲು ಒಳ ಮಾರ್ಗದ ಮೂಲಕ ಪಂಢರಪುರ ಹೆದ್ದಾರಿ ತಲುಪಿ ಮುಂದೆ ಸಂಚರಿಸುತ್ತಿದ್ದಾರೆ.

ತಿಡಗುಂದಿ ಕ್ರಾಸ್‌ನಿಂದ ಲಾರಿ ಚಾಲಕರು ಮಖಣಾಪುರ ಎಲ್‌.ಟಿ.1, ಕನ್ನೂರ, ಮಡಸನಾಳ ಮಾರ್ಗವಾಗಿ ಫಂಡರಪುರ ಹೆದ್ದಾರಿ, ಇದಲ್ಲದೇ ತಿಡಗುಂದಿ ಕ್ರಾಸ್‌ನಿಂದ ಮಖಣಾಪುರ, ಶಿರನಾಳ ಮಾರ್ಗವಾಗಿ ಸಿದ್ದಾಪುರ, ಅರಕೇರಿ ಮೂಲಕ ಪಂಢರಪುರ ಹೆದ್ದಾರಿ ತಲುಪಿ ಮುಂದೆ ಸಂಚರಿಸುತ್ತಾರೆ. 

ಗ್ರಾಮೀಣ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದರೂ ಈ ಭಾಗದಲ್ಲಿ ವ್ಯಾಪಾರ ವಹಿವಾಟಿನಲ್ಲಿ ಬದಲಾವಣೆ ಕಂಡುಬಂದಿಲ್ಲ. ಆದರೆ ರಸ್ತೆಗಳು ಮಾತ್ರ ಸಂಪೂರ್ಣ ಹದಗೆಟ್ಟಿದೆ. ಭಾರಿ ವಾಹನಗಳ ಓಡಾಟದಿಂದಾಗಿ ರಸ್ತೆಗಳಲ್ಲಿ ತಗ್ಗು ಗುಂಡಿಗಳು ನಿರ್ಮಾಣವಾಗಿದೆ. ನಿತ್ಯ ವಿಜಯಪುರಕ್ಕೆ ಸಂಚರಿಸುವ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಸುರಕ್ಷಿತ ಸಂಚಾರ ಅಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮ ವ್ಯಾಪ್ತಿಯ ರಸ್ತೆ ಕಿರಿದಾಗಿದ್ದು, ಎದುರಿಗೆ ದೊಡ್ಡವಾಹನ ಬಂದರೆ ಬದಿಗೆ ಸರಿಯಲು ಅವಕಾಶವಿಲ್ಲ. ಗುಂಡಿಗಳನ್ನು ಇಳಿಸಿ ಏರಿಸುತ್ತ ವಾಹನಗಳನ್ನು ಬಹಳ ನಿಧಾನವಾಗಿಯೇ ಚಲಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಮಳೆಗಾಲದಿಂದಾಗಿ ತಗ್ಗು–ಗುಂಡಿಗಳಲ್ಲಿ ಸದಾ ನೀರು ನಿಲ್ಲುತ್ತಿದ್ದು, ರಸ್ತೆಗಳು ಕೆಸರು ಗದ್ದೆಗಳಾಗಿ ಪರಿವರ್ತೆನೆಯಾಗುತ್ತಿದೆ.

ಬೃಹತ್‌ ವಾಹನಗಳು ಹೆದ್ದಾರಿಗೆ ಬದಲಾಗಿ ಗ್ರಾಮಗಳ ಮೂಲಕ ಸಂಚರಿಸುತ್ತಿವೆ. ಇದರಿಂದ ರಸ್ತೆಗಳು ಹಾಳಾಗುತ್ತಿದೆ. ಕಿರಿದಾದ ಗ್ರಾಮದ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಅಪಘಾತ ಭಯದಿಂದ ಗ್ರಾಮಸ್ಥರು ರಸ್ತೆಯಲ್ಲಿ ಸಂಚರಿಸುವುದು ಕಷ್ಟವಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

ಚೆಕ್‌ಪೋಸ್ಟ್‌ ತಪ್ಪಿಸಲು ವಾಮಮಾರ್ಗ

ಅಕ್ರಮ ಸಾಗಾಟಕ್ಕೆ ಕಡಿವಾಣ ಹಾಕಲು ಚಡಚಣ ತಾಲ್ಲೂಕಿನ ವ್ಯಾಪ್ತಿಯಲ್ಲಿ ಸೋಲಾಪುರ ಹೆದ್ದಾರಿಗೆ ಚೆಕ್‌ಪೋಸ್ಟ್‌ ನಿರ್ಮಾಣ ಮಾಡಲಾಗಿದೆ. ಮಹಾರಾಷ್ಟ್ರಕ್ಕೆ ತೆರಳುವ ಹಾಗೂ ಮಹಾರಾಷ್ಟ್ರದಿಂದ ಬರುವ ವಾಹನಗಳನ್ನು ಇಲ್ಲಿನ ಚೆಕ್‍ಪೋಸ್ಟ್‌ನಲ್ಲಿ ತಪಾಸಣೆ ಮಾಡಲಾಗುತ್ತದೆ. ಆದರೇ ನಿತ್ಯ ನೂರಾರು ವಾಹನಗಳು ತಿಡಗುಂದಿ ಕ್ರಾಸ್‌ನಿಂದಲೇ ಗ್ರಾಮೀಣ ರಸ್ತೆಗಳ ಮೂಲಕ ಸಾಗುತ್ತಿದೆ. ಇದರಿಂದ ಅಕ್ರಮ ಹಣ ವಸ್ತುಗಳ ಸಾಗಾಟಕ್ಕೆ ಕಡಿವಾಣ ಇಲ್ಲದಂತಾಗಿದೆ. ಗ್ರಾಮೀಣ ಭಾಗದಲ್ಲಿ ಯಾವ ಚೆಕ್‍ಪೋಸ್ಟ್‌ಗಳು ಇರದ ಕಾರಣ ಲಾರಿ ಚಾಲಕರು ಈ ಮಾರ್ಗವನ್ನು ಸುಲಭವಾಗಿ ಬಳಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು. ವಾಹನಗಳಲ್ಲಿ ಸಾಗಿಸಲಾಗುವ ಅಕ್ರಮವನ್ನು ತಡೆಯಬೇಕಾದರೇ ಗ್ರಾಮಗಳ ಮೂಲಕ ಚಲಿಸುತ್ತಿರುವ ವಾಹನಗಳನ್ನು ತಡೆಯಬೇಕು. ಕಳ್ಳಮಾರ್ಗ ಬಳಸಿ ಸಾಗುವ ವಾಹನಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.

ಪ್ರತಿನಿತ್ಯ ನೂರಾರು ಲಾರಿಗಳು ಗ್ರಾಮೀಣ ರಸ್ತೆಗಳಲ್ಲಿ ಸಾಗುತ್ತಿರುವುದರಿಂದ ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ. ರಸ್ತೆಗಳು ಕಿರಿದಾಗಿರುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಕೂಡಲೇ ಈ ರಸ್ತೆಯಲ್ಲಿ ಲಾರಿಗಳ ಓಡಾಟ ತಪ್ಪಿಸಬೇಕು
-ರವಿ ಲಮಾಣಿ, ಜಿಲ್ಲಾ ಘಟಕದ ಅಧ್ಯಕ್ಷ ಎಐಬಿಎಸ್‌ಎಸ್‌ ಯುವ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.