ADVERTISEMENT

ಮೂಲಸೌಕರ್ಯಗಳಿಲ್ಲ: ಎರಡು ದಶಕಗಳಾದರೂ ಅಭಿವೃದ್ಧಿ ಕಾಣದ ಕೊಲ್ಹಾರ ಪಟ್ಟಣ

ಬಸವರಾಜ ಎಸ್.ಉಳ್ಳಾಗಡ್ಡಿ
Published 5 ಮಾರ್ಚ್ 2023, 23:45 IST
Last Updated 5 ಮಾರ್ಚ್ 2023, 23:45 IST
ಮಳೆಗಾಲದಲ್ಲಿ ಕೊಲ್ಹಾರ ಪಟ್ಟಣದಲ್ಲಿನ ರಸ್ತೆ ಕೆಸರು ತುಂಬಿಕೊಂಡು ಸಾರ್ವಜನಿಕರು ಓಡಾಡಲಾಗದ ಸ್ಥಿತಿ ನಿರ್ಮಾಣವಾಗಿರುವುದು (ಸಂಗ್ರಹ ಚಿತ್ರ)
ಮಳೆಗಾಲದಲ್ಲಿ ಕೊಲ್ಹಾರ ಪಟ್ಟಣದಲ್ಲಿನ ರಸ್ತೆ ಕೆಸರು ತುಂಬಿಕೊಂಡು ಸಾರ್ವಜನಿಕರು ಓಡಾಡಲಾಗದ ಸ್ಥಿತಿ ನಿರ್ಮಾಣವಾಗಿರುವುದು (ಸಂಗ್ರಹ ಚಿತ್ರ)   

ಕೊಲ್ಹಾರ: ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಕೊಲ್ಹಾರ ಹಳೆ ಪಟ್ಟಣ ಮುಳುಗಡೆಯಾಗಿ ಸಂತ್ರಸ್ತರು ಹೊಸ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಗೊಂಡು ಎರಡು ದಶಕ ಗತಿಸಿದರೂ ಯೋಜನಾಬದ್ದ ಪುನರ್ವಸತಿ ಕೇಂದ್ರದಲ್ಲಿ ಇನ್ನೂ ಸಹ ಒಳಚರಂಡಿ, ಚರಂಡಿ, ಸುಸಜ್ಜಿತ ರಸ್ತೆಗಳು, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿವೆ.

ಪಟ್ಟಣದ ಅಭಿವೃದ್ಧಿಗೆ ಇಲ್ಲಿಯವರೆಗೂ ನೂರಾರು ಕೋಟಿ ಖರ್ಚು ಮಾಡಿರುವುದಾಗಿ ಕಾಗದ ಪತ್ರಗಳಲ್ಲಿ ಹೇಳಲಾಗುತ್ತಿದೆ. ಆದರೆ, ವಾಸ್ತವವಾಗಿ ಪಟ್ಟಣದಲ್ಲಿ ಎಲ್ಲಿಯೂ ಅಭಿವೃದ್ಧಿಯಾಗಿಲ್ಲ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಕೆನೆಮೊಸರು’ ಖ್ಯಾತಿಯ ಕೊಲ್ಹಾರ ಪಟ್ಟಣವೂ ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 218 ರ ಪಕ್ಕದಲ್ಲಿರುವ ತಾಲ್ಲೂಕು ಕೇಂದ್ರ. ಕಳೆದ 20 ವರ್ಷಗಳ ಹಿಂದೆ ಆರ್ ಅಂಡ್‌ ಆರ್ ನಿಂದ ನೂತನ ಪುನರ್ವಸತಿ ಕೇಂದ್ರದಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೇ ಸಂತ್ರಸ್ತರನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

ADVERTISEMENT

ಸಂತ್ರಸ್ತರಿಗೆ ನಿವೇಶನಗಳ ಗೊಂದಲ ಒಂದೆಡೆಯಾದರೆ ಪಟ್ಟಣ ಅಭಿವೃದ್ಧಿಗೆ ತಳಪಾಯ ಎನ್ನಲಾಗುವ ಸಮರ್ಪಕ ಒಳಚರಂಡಿ ಮತ್ತು ಚರಂಡಿ ವ್ಯವಸ್ಥೆ, ಕುಡಿಯುವ ನೀರು, ಸುವ್ಯವಸ್ಥಿತ ರಸ್ತೆಗಳು ಹಾಗೂ ಸರಿಯಾದ ಮೂಲಸೌಕರ್ಯಗಳಿಲ್ಲ ಎಂಬ ಸಂಕಷ್ಟ ಇನ್ನೊಂದಡೆ.

ಯು.ಕೆ.ಪಿ. ಪುರ್ನವಸತಿ ಮತ್ತು ಪುನರ್‌ ನಿರ್ಮಾಣದಿಂದ ಪುನರ್ವಸತಿ ಕೇಂದ್ರವನ್ನು ಸ್ಥಳೀಯ ಪಟ್ಟಣ ಪಂಚಾಯಿತಿಗೆ ಹಸ್ತಾಂತರಿಸಿದೆಯಾದರೂ ಪ.ಪಂ. ಗೆ ಪೂರ್ಣ ಪ್ರಮಾಣದ ಅಧಿಕಾರವಿಲ್ಲ. ಜೊತೆಗೆ ಪಂಚಾಯಿತಿ, ಪುನರ್ವಸತಿ ಇಲಾಖೆ ಮಧ್ಯೆ ಸಮನ್ವಯದ ಕೊರತೆಯಿಂದ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಗುತ್ತಿದೆ.

ಯುಜಿಡಿ ಸಂಪರ್ಕ:

ಕೊಲ್ಹಾರ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು 2017 ರಲ್ಲಿ ಕೆಬಿಜೆಎನ್ಎಲ್ ಆರ್ ಅಂಡ್ ಆರ್ ನಿಂದ ಒಟ್ಟು ₹ 23 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿ ಆಮೆಗತಿಯಲ್ಲಿ ಸಾಗಿ, ಪೂರ್ಣಗೊಂಡಿದ್ದರೂ ಒಳಚರಂಡಿ ನೀರು ಇನ್ನೂ ಎಸ್.ಟಿ.ಪಿ ಘಟಕಕ್ಕೆ ಸಂಪರ್ಕ ಕಲ್ಪಿಸಲಾಗಿಲ್ಲ.

‘ಮನೆ ಮನೆಗೆ ಒಳಚರಂಡಿ ಸಂಪರ್ಕ ಕಲ್ಪಿಸಲು ಮುಂದಾದಾಗ ಚೇಂಬರ್‌ಗಳಿಂದ ಕೊಳಚೆ ನೀರು ಮುಂದೆ ಹರಿಯದೇ ತುಂಬಿ ಹೊರಬಂದು ಹಲವಾರು ಚೇಂಬರ್ ಸಂಪರ್ಕಗಳು ವಿಫಲಗೊಂಡಿವೆ. ಅಲ್ಲದೇ, ಯುಜಿಡಿ ಕಾಮಗಾರಿಗಾಗಿ ತೋಡಿರುವ ಸುಸಜ್ಜಿತ ರಸ್ತೆಗಳನ್ನು ಸರಿಯಾಗಿ ಮರು ದುರಸ್ತಿಗೊಳಿಸಿಲ್ಲ. ಇದರಿಂದ ಮಳೆಗಾಲ ಬಂದರೆ ಸಾಕು ಪಟ್ಟಣದ ರಸ್ತೆಗಳೆಲ್ಲ ಕೆಸರುಗದ್ದೆಗಳಂತಾಗಿ ಮಕ್ಕಳು, ವಯೋವೃದ್ಧರು ಹಾಗೂ ವಾಹನ ಸವಾರರು ಓಡಾಡಲಾಗದ ದುಸ್ಥಿತಿ ನಿರ್ಮಾಣವಾಗುತ್ತದೆ. ಈ ಕುರಿತು ಜನರು ಸಾಕಷ್ಟು ದೂರು ನೀಡಿದರೂ ಯಾವುದೇ ಪ್ರಯೋಜವಾಗಿಲ್ಲ’ ಎನ್ನುತ್ತಾರೆ ಪ.ಪಂ. ಮಾಜಿ ಅಧ್ಯಕ್ಷ ವಿರೂಪಾಕ್ಷಿ ಕೊಲಕಾರ ಮತ್ತು ಹಿರಿಯ ನಿವಾಸಿ ಈರಯ್ಯ ಮಠಪತಿ.

ಇಲ್ಲಗಳ ಪಟ್ಟಿ:

ಪಟ್ಟಣದಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ಕಳಪೆ ಗುಣಮಟ್ಟದಾಗಿದೆ. ಜನರಿಗೆ ಅನುಕೂಲವಾಗುವಂತೆ ಚರಂಡಿ ನಿರ್ಮಿಸುತ್ತಿಲ್ಲ. ಪಟ್ಟಣದಲ್ಲಿ ಎಲ್ಲಾ ವಾರ್ಡಗಳಿಗೆ ಸರಿಯಾಗಿ 24X7 ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಪಟ್ಟಣದ ನಕ್ಷೆಯಲ್ಲಿ 8 ಉದ್ಯಾನಗಳಿದ್ದರೂ ಹುಡುಕಿದರೆ ಒಂದು ಉದ್ಯಾನ ಗೋಚರಿಸುವುದಿಲ್ಲ. ಬೀದಿ ದೀಪಗಳ ಬೆಳಕು ಇದ್ದು ಇಲ್ಲದಂತಾಗಿದೆ. ಹೀಗೆ ಇಲ್ಲಗಳ ಪಟ್ಟಿ ದೊಡ್ಡದಿದೆ.

ಇನ್ನೂ ಪಟ್ಟಣ ಅಭಿವೃದ್ಧಿಗಾಗಿ ಮಂಜೂರಾಗಿರುವ ₹ 50 ಕೋಟಿ ವಿಶೇಷ ಅನುದಾನದ ಕಾಮಗಾರಿಗಳಲ್ಲಿ ಕೆಲ ಪ್ರಭಾವಿಗಳು, ಸದಸ್ಯರು ಹಸ್ತಕ್ಷೇಪ ಮಾಡುತ್ತಾ ಮನಬಂದಂತೆ ಕಾಮಗಾರಿಗಳನ್ನು ಮಾಡುತ್ತಿದ್ದು, ಈ ಕುರಿತು ಪುನರ್ವಸತಿ ಅಧಿಕಾರಿಗಳಿಗೆ ಪ್ರಶ್ನಿಸಿದರೆ ಬೇಜವಾಬ್ದಾರಿಯಿಂದ ಉತ್ತರಿಸುತ್ತಾರೆ. ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಅನುದಾನ ದುರ್ಬಳಕೆಯಾಗದಂತೆ ಗುಣಮಟ್ಟದ ಕಾಮಗಾರಿಗಳಿಗಾಗಿ ಕ್ರಮವಹಿಸಬೇಕು ಎಂದು ಪ.ಪಂ ಸದಸ್ಯ ತೌಶೀಫ್ ಗಿರಗಾಂವಿ ಒತ್ತಾಯಿಸಿದ್ದಾರೆ.

‘ಯುಜಿಡಿ ಕಾಮಗಾರಿ ಪೂರ್ಣಗೊಂಡಿದ್ದು, ಚೇಂಬರ್ ಗಳಿಗೆ ಸಂಪರ್ಕ ಕಲ್ಪಿಸುವುದು ಪ.ಪಂ. ಕೆಲಸ. ಜನರು ರಸ್ತೆಗಳ ಮೇಲೆ ವಾಹನಗಳನ್ನು ಓಡಾಡಿಸಿ ಚೇಂಬರ್‌ ಮುಚ್ಚಳ ಒಡೆದರೆ ನಾವೇನು ಮಾಡಲಾಗುವುದಿಲ್ಲ’ ಎಂದು ‘ಪ್ರಜಾವಾಣಿ’ಗೆ ಈ ಪುನರ್ವಸತಿ ಅಧಿಕಾರಿ ಎಸ್.ಟಿ.ಬಬಲೇಶ್ವರ ಪ್ರತಿಕ್ರಿಯಿಸಿದರು.

***

ಯುಕೆಪಿ ನೀರಾವರಿ ಯೋಜನೆಗೆ ಕೊಲ್ಹಾರ ಸಂತ್ರಸ್ತರು ಮಾಡಿದ ತ್ಯಾಗಕ್ಕೆ ಬೆಲೆ ಇಲ್ಲದಂತಾಗಿದೆ. ಕೊಲ್ಹಾರ ಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳಿಗಾಗಿ ಜನ ಪರದಾಡುವ ಪರಿಸ್ಥಿತಿ ಇದೆ.

- ಹನುಮಂತ ಕೋಠಾರಿ, ಕೊಲ್ಹಾರ

***

ಮುಳುಗಡೆ ಪಟ್ಟಣಗಳ ಪೈಕಿ ಬಾಗಲಕೋಟೆ ನಂತರದ ದೊಡ್ಡ ಪಟ್ಟಣ ಕೊಲ್ಹಾರವಾಗಿದೆ. ಆದರೆ, ಪಟ್ಟಣಾಭಿವೃದ್ಧಿ ವಿಚಾರದಲ್ಲಿ ಬಾಗಲಕೋಟೆಗೆ ಸಿಕ್ಕಷ್ಟು ಪ್ರಾತಿನಿಧ್ಯ ಕೊಲ್ಹಾರಕ್ಕೆ ಸಿಗದೇ ಅಭಿವೃದ್ಧಿಯಿಂದ ವಂಚಿತವಾಗಿದೆ

- ಮಲ್ಲು ಗಿಡ್ಡಪ್ಪಗೋಳ, ಕೊಲ್ಹಾರ

***

ಕೊಲ್ಹಾರಕ್ಕೆ ಮೂಲ ಸೌಕರ್ಯಗಳಿಗಾಗಿ 15 ನೇ ಹಣಕಾಸು ಯೋಜನೆಯಡಿ ಈ ವರ್ಷದ ಕೆಲಸಗಳು ಪ್ರಗತಿಯಲ್ಲಿವೆ. ಅಮೃತ 2.0 ಪೂರ್ಣ ಅನುಷ್ಠಾನಗೊಂಡಿದ್ದು, ನಗರೋತ್ಥಾನದಡಿ ಕೆಲಸಗಳು ಭಾಗಶಃ ಪೂರ್ಣಗೊಂಡಿವೆ.

- ವಿರೇಶ ಹಟ್ಟಿ, ಮುಖ್ಯಾಧಿಕಾರಿ, ಕೊಲ್ಹಾರ ಪ.ಪಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.