ವಿಜಯಪುರ: ವಿಜಯಪುರ ಎಸ್.ಸಿ ಮೀಸಲು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಸದ ರಮೇಶ ಜಿಗಜಿಣಗಿ ಅವರು ಕುಟುಂಬ ಸಮೇತ ಮಂಗಳವಾರ ಭೂತನಾಳ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ 14ರಲ್ಲಿ ಮತ ಚಲಾಯಿಸಿದರು.
ಸಂಸದ ರಮೇಶ ಜಿಗಜಿಣಗಿ ಹಾಗೂ ಮಕ್ಕಳಾದ ಆನಂದ, ವಿನೋದ, ಸೊಸೆಯಂದಿರಾದ ರೇಷ್ಮಾ, ಗೀತಾ, ಮೊಮ್ಮಗಳು ಸ್ನೇಹಾ ಮತ ಚಲಾಯಿಸಿದರು. ಮೊಮ್ಮಗಳು ಸ್ನೇಹಾ ಇದೆ ಮೊದಲ ಬಾರಿಗೆ ಮತ ಚಲಾಯಿಸಿದರು.
ಮತ ಚಲಾಯಿಸಿದ ನಂತರ ಮಾಧ್ಯಮದ ಜೊತೆ ಮಾತನಾಡಿದ ರಮೇಶ ಜಿಗಜಿಣಗಿ, ಜಿಲ್ಲೆಯ ಎಲ್ಲೆಡೆ ಬಿಜೆಪಿ ಪರ ಮತದಾನವಾಗಿದೆ ಎಂದು ಜಿಲ್ಲೆಯ ವಿವಿಧ ಗ್ರಾಮಗಳಿಂದ ಕಾರ್ಯಕರ್ತರು, ಮುಖಂಡರು ಫೋನ್ ಮಾಡಿ ಮಾಹಿತಿ ನೀಡಿದ್ದಾರೆ ಎಂದರು.
ಜನ ಸರದಿ ಹಚ್ಚಿ ಮತ ಮಾಡುತ್ತಿದ್ದಾರೆ. ಮೋದಿ ಅವರ ಜೊತೆ ನನ್ನನ್ನು ಸೇರಿಸಿಕೊಂಡು ಮತ ಚಲಾಯಿಸುತ್ತಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಭಾರಿ ಹೆಚ್ಚಿನ ಅಂತರದಿಂದ ಗೆಲ್ಲುತ್ತೇನೆ. ಕನಿಷ್ಠ 3 ಲಕ್ಷಗಳ ಅಂತರದಿಂದ ಗೆಲ್ಲಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಜಯಪುರ ಕ್ಷೇತ್ರದಿಂದ ಪ್ರತಿ ಬಾರಿ ಕಾಂಗ್ರೆಸ್‌ನವರು ಬಂಜಾರ ಸಮಾಜಕ್ಕೆ ಟಿಕೆಟ್ ನೀಡುತ್ತಿದ್ದರು. ಆದರೆ, ಈ ಬಾರಿ ಕಾಂಗ್ರೆಸ್‌ನವರು ಸಮಾಜಕ್ಕೆ ಟಿಕೆಟ್ ತಪ್ಪಿಸಿದ್ದಾರೆ ಎಂಬ ಬೇಸರ ಬಂಜಾರ ಸಮಾಜದಲ್ಲಿ ಇದೆ. ರಾಜು ಆಲಗೂರ ಗೆದ್ದರೆ ಮುಂದೆ ನಮ್ಮ ಸಮಾಜಕ್ಕೆ ಅವಕಾಶ ತಪ್ಪುತ್ತದೆ ಎಂಬ ಕಾರಣಕ್ಕೆ ಈ ಬಾರಿ ಬಿಜೆಪಿಗೆ ಮತ ಹಾಕಿದ್ದಾರೆ. ಈ ಬಾರಿ ತಾಂಡಾಗಳಲ್ಲಿ ಶೇ 75 ರಿಂದ 80 ರಷ್ಟು ಮತ ಬಿಜೆಪಿಗೆ ಬರುವ ನಿರೀಕ್ಷೆ ಇದೆ ಎಂದರು.
ಮೇಲ್ವರ್ಗದ ಪಂಚಮಸಾಲಿ, ಬಣಜಿಗ, ಶೆಟ್ಟರ್ ಸೇರಿದಂತೆ ಎಲ್ಲ ಸಮುದಾಯದ ಮತಗಳು ಬಿಜೆಪಿ ಪರ ಚಲಾವಣೆಯಾಗಿದ್ದು, ಎಲ್ಲ ಸಮುದಾಯದವರು ಹೆಚ್ಚು ಮತಗಳಿಂದ ನನ್ನನ್ನು ಗೆಲ್ಲಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.