ADVERTISEMENT

ವಿಜಯಪುರ ಪಾಲಿಕೆ ಉಪಚುನಾವಣೆ: ಶೇ 46.18 ರಷ್ಟು ಮತದಾನ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 14:13 IST
Last Updated 23 ನವೆಂಬರ್ 2024, 14:13 IST
   

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ವಾರ್ಡ್ ನಂ.29ಕ್ಕೆ ಶನಿವಾರ ನಡೆದ ಉಪಚುನಾವಣೆಯಲ್ಲಿ ಶೇ 46.18ರಷ್ಟು ಮತದಾನವಾಗಿದೆ.

ವಾರ್ಡಿನಲ್ಲಿರುವ ಒಟ್ಟು 9,861 ಮತದಾರರ ಪೈಕಿ 4554 ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತದಾನ ಶಾಂತಿಯುತವಾಗಿ ನಡೆದಿದ್ದು, ನ.26ರಂದು ಮತ ಎಣಿಕೆ ನಡೆಯಲಿದೆ.

ವಾರ್ಡ್‌ ನಂ.29ರ ಸದಸ್ಯರಾಗಿದ್ದ ಬಿಜೆಪಿಯ ವಿಜಯಕುಮಾರ ಬಿರಾದಾರ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಕಾರಣಕ್ಕೆ ಉಪಚುನಾವಣೆ ನಡೆದಿದೆ. ವಿಜಯಕುಮಾರ ಅವರ ಪುತ್ರ ಗಿರೀಶ ಬಿರಾದಾರಗೆ ಬಿಜೆಪಿ ಟಿಕೆಟ್‌ ನೀಡಿ ಅನುಕಂಪದ ಮತಗಳನ್ನು ಗಿಟ್ಟಿಸಲು ಯತ್ನಿಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಕಾಂಗ್ರೆಸ್‌ ಬಾಬು ಏಳಗಂಟಿ ಅವರನ್ನು ಕಣಕ್ಕಿಳಿಸಿ ಭಾರೀ ಪೈಪೋಟಿ ಒಡ್ಡಿದೆ.

ADVERTISEMENT

ಪಾಲಿಕೆಯಲ್ಲಿ ಹಾಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ, ಪ್ರಚಾರ ನಡೆಸಿತ್ತು. ಸಚಿವ ಎಂ.ಬಿ.ಪಾಟೀಲ ಹೆಚ್ಚಿನ ಮುತುವರ್ಜಿ ವಹಿಸಿ, ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿಗೆ ತಂತ್ರ ರೂಪಿಸಿದ್ದರು.

ಬಿಜೆಪಿ ಅಭ್ಯರ್ಥಿಯ ಪರವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರೇ ಎರಡು ದಿನಗಳ ಕಾಲ ಪ್ರಚಾರ ನಡೆಸಿದ್ದರು. ವಾರ್ಡ್‌ ಅನ್ನು ವಶಕ್ಕೆ ಪಡೆದು ಪಾಲಿಕೆಯಲ್ಲಿ ತಮ್ಮ ಸಂಖ್ಯಾಬಲವನ್ನು ವೃದ್ಧಿಸಿಕೊಳ್ಳಲು ಎರಡೂ ಪಕ್ಷಗಳು ಸಮಬಲದ ಹೋರಾಟ ನಡೆಸಿವೆ. 

ವಿಜಯಪುರ ಮಹಾನಗರ ಪಾಲಿಕೆ 35 ಸ್ಥಾನಗಳನ್ನು ಹೊಂದಿದ್ದು, ಅದರಲ್ಲಿ ಸದ್ಯ ಬಿಜೆಪಿ 16, ಕಾಂಗ್ರೆಸ್ 10, ಜೆಡಿಎಸ್ 1, ಎಐಎಂಐಎಂ 2 ಹಾಗೂ ಪಕ್ಷೇತರ 5 ಸದಸ್ಯರಿದ್ದಾರೆ. ಸದ್ಯ ಕಾಂಗ್ರೆಸ್‌ ಅಧಿಕಾರದ ಗದ್ದುಗೆಯಲ್ಲಿ ಇದೆ.

ಜನವರಿಯಲ್ಲಿ ಹಾಲಿ ಮೇಯರ್‌, ಉಪ ಮೇಯರ್‌ ಅವಧಿ ಮುಗಿಯಲ್ಲಿದ್ದು, ಮುಂದಿನ ಅವಧಿಗೆ ಪಾಲಿಕೆ ಗದ್ದುಗೆ ಹಿಡಿಯಲು ಬಿಜೆಪಿ, ಕಾಂಗ್ರೆಸ್‌ ನಡುವೆ ಅದಾಗಲೇ ತೆರೆಮರೆಯಲ್ಲಿ ಪ್ರಯತ್ನ ಆರಂಭವಾಗಿದೆ. ವಾರ್ಡ್‌ ನಂ.29ರ ಫಲಿತಾಂಶವು ಮೇಯರ್‌, ಉಪ ಮೇಯರ್‌ ಚುನಾವಣೆ ಮೇಲೆ ಪರಿಣಾಮ ಬೀರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.