ವಿಜಯಪುರ: ವಿಜಯಪುರ ಎಸ್.ಸಿ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಸತತ ಏಳನೇ ಬಾರಿಗೆ ಜಯ ಗಳಿಸುವ ಮೂಲಕ ಸಂಸತ್ ಪ್ರವೇಶಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರ ವಿರುದ್ಧ 75,778 ಮತಗಳ ಅಂತರದಿಂದ ಜಿಗಜಿಣಗಿ ಗೆಲುವು ಸಾಧಿಸಿದ್ದಾರೆ.
ರಮೇಶ ಜಿಗಿಜಿಣಗಿ ಅವರ ಪರ 6,69,055 ಮತಗಳು ಚಲಾವಣೆಯಾಗಿವೆ. ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರಿಗೆ 5,93,277 ಮತಗಳು ಚಲಾವಣೆಯಾಗಿವೆ.
ಜಿಗಜಿಣಗಿ ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ, ಗುಲಾಲ್ ಎರಚಿ ಮೋದಿ, ಜಿಗಜಿಣಗಿ ಪರ ಘೋಷಣೆ ಕೂಗಿ, ಸಿಹಿ ಹಂಚಿ ಸಂಭ್ರಮಿಸಿದರು.
ನಗರದ ಜಿಗಜಿಣಗಿ ನಿವಾಸ, ಬಿಜೆಪಿ ಜಿಲ್ಲಾ ಕಚೇರಿ, ಗಾಂಧಿ ಚೌಕ , ಶಿವಾಜಿ ಚೌಕ, ಸಿದ್ಧೇಶ್ವರ ದೇವಸ್ಥಾನ ಬಳಿ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ, ಸಂಭ್ರಮ ಮುಗಿಲು ಮುಟ್ಟಿತ್ತು.
ಗಾಂಧಿಗೆ ಮಾಲಾರ್ಪಣೆ
ಗೆಲುವು ಸಾಧಿಸಿದ ಬಳಿಕ ರಮೇಶ ಜಿಗಜಿಣಗಿ ಅವರು ನೇರವಾಗಿ ಗಾಂಧಿ ಚೌಕಿಗೆ ಆಗಮಿಸಿ, ಮಹಾತ್ಮ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಇದಕ್ಕೂ ಮುನ್ನಾ ನಗರದ ಸುಂದರೇಶ್ವರ ದೇವಸ್ಥಾನಕ್ಕೆ ಬೆಳಿಗ್ಗೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್ ಪಾಟೀಲ ಕೂಚಬಾಳ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮುಖಂಡರಾದ ವಿಜುಗೌಡ ಪಾಟೀಲ ಸೇರಿದಂತೆ ಅನೇಕ ಮುಖಂಡರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.