ADVERTISEMENT

ಮೊಬೈಲ್ ತ್ಯಜಿಸಿ, ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಿ: ಎಸ್.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 12:46 IST
Last Updated 29 ಜನವರಿ 2020, 12:46 IST
ಕೊಲ್ಹಾರದಲ್ಲಿ ಬುಧವಾರ ಜರುಗಿದ ಕಾರ್ಯಕ್ರಮದಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಎಸ್.ಬಿ.ಪಾಟೀಲ ಮಾತನಾಡಿದರು
ಕೊಲ್ಹಾರದಲ್ಲಿ ಬುಧವಾರ ಜರುಗಿದ ಕಾರ್ಯಕ್ರಮದಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಎಸ್.ಬಿ.ಪಾಟೀಲ ಮಾತನಾಡಿದರು   

ಕೊಲ್ಹಾರ: ‘ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಕಾಲಹರಣ ಮಾಡದೆ, ಸಾಹಿತ್ಯಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು’ ಎಂದು ಸಬ್‌ಇನ್‌ಸ್ಪೆಕ್ಟರ್‌ ಎಸ್.ಬಿ.ಪಾಟೀಲ ಹೇಳಿದರು.

ಇಲ್ಲಿಯ ಸರ್ವೋದಯ ಕಾಲೇಜಿನಲ್ಲಿ ಚುಟುಕು ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ಹಾಗೂ ಸರ್ವೋದಯ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಆಶ್ರಯದಲ್ಲಿ ಬುಧವಾರ ನಡೆದ ಚುಸಾಪ ಕೊಲ್ಹಾರ ತಾಲ್ಲೂಕು ಘಟಕದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮೊಬೈಲ್ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪೋಷಕರು ಹಾಗೂ ಶಿಕ್ಷಕರು ಇದಕ್ಕೆ ಕಡಿವಾಣ ಹಾಕಬೇಕು. ನಮ್ಮ ತಂದೆ ಗಣಿತ ಶಿಕ್ಷಕರಾದರೂ ಸಾಹಿತ್ಯಪ್ರೇಮಿಗಳು. ನಾನು ಕೂಡ ಡಿವಿಜಿ ಅವರ ಕಗ್ಗಗಳನ್ನು ಓದುತ್ತ, ಚುಟುಕು ಸಾಹಿತ್ಯಾಸಕ್ತಿ ಬೆಳೆಸಿಕೊಂಡಿದ್ದೇನೆ’ ಎಂದು ಹೇಳಿದರು.

ADVERTISEMENT

ಚುಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಂಡೆಪ್ಪ ತೇಲಿ ಮಾತನಾಡಿ, ‘ನಾಲ್ಕು ತಿಂಗಳ ಹಿಂದೆ ಚುಸಾಪ ಜಿಲ್ಲಾ ಘಟಕ ಸ್ಥಾಪನೆಯಾಗಿದ್ದು, ತಾಲ್ಲೂಕುಗಳ ಪೈಕಿ ಮುದ್ದೇಬಿಹಾಳದ ನಂತರ ಕೊಲ್ಹಾರ ತಾಲೂಕು ಘಟಕ ಉದ್ಘಾಟನೆಯಾಗಿದೆ. ಮಾರ್ಚ್‌ ತಿಂಗಳೊಳಗೆ ಎಲ್ಲಾ ತಾಲ್ಲೂಕು ಘಟಕಗಳನ್ನು ರಚಿಸಿ, ಮಾರ್ಚ್ ಅಥವಾ- ಏಪ್ರಿಲ್‌ನಲ್ಲಿ ಜಿಲ್ಲಾ ಸಮಾವೇಶ ಆಯೋಜಿಸುವ ಉದ್ದೇಶವಿದೆ’ ಎಂದು ತಿಳಿಸಿದರು.

ಸಂಗಮೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ರಾಜಶೇಖರ ಉಮರಾಣಿ, ಸಂಗಮೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಎಸ್.ನಿಂಬಾಳಕರ, ಸರ್ವೋದಯ ಪದವಿ ಕಾಲೇಜು ಪ್ರಾಚಾರ್ಯ ಎಸ್.ಪಿ.ಚೌಧರಿ ಮಾತನಾಡಿದರು.

ಚುಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಕುಬಕಡ್ಡಿ ಅವರಿಗೆ ನಾಡ ಧ್ವಜ ನೀಡಲಾಯಿತು. ನೂತನ ಪದಾಧಿಕಾರಿಗಳಿಗೆ ಹಾರ ಹಾಗೂ ಗ್ರಂಥ ನೀಡುವ ಮೂಲಕ ಪದಗ್ರಹಣ ಮಾಡಲಾಯಿತು.

ಚುಸಾಪ ಜಿಲ್ಲಾ ಕಾರ್ಯದರ್ಶಿ ಜಗದೀಶ ಸಾಲಳ್ಳಿ, ಸರ್ವೋದಯ ಪದವಿ ಕಾಲೇಜು ಆಡಳಿತಾಧಿಕಾರಿ ಬಸವರಾಜ ಹಂಗರಗಿ, ಉಪ್ಪಲದಿನ್ನಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಹಣಮಂತ ಹಳಿಂಗಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.