ADVERTISEMENT

ವಿಜಯಪುರ | ಕೊಳವೆ ಬಾವಿಗೆ ಬಿದ್ದ ಬಾಲಕ ಸಾತ್ವಿಕ್ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 8:21 IST
Last Updated 4 ಏಪ್ರಿಲ್ 2024, 8:21 IST
   

ವಿಜಯಪುರ: ಎರಡು ದಿನಗಳ ಹಿಂದೆ ಅಪ್ಪ ಕೊರೆಯಿಸಿದ್ದ ತೆರೆದ ಕೊಳವೆಬಾವಿಗೆ ಬಿದ್ದು, ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದ ಮಗು ಸಾತ್ವಿಕ್ ಕೊನೆಗೂ ಬದುಕಿ ಬಂದಿದ್ದಾನೆ.

ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್, ಅಗ್ನಿ ಶಾಮಕ ಮತ್ತು ಪೊಲೀಸರು ಸತತ 21ಗಂಟೆಗಳ ಕಾಲ‌ ನೆಡೆಸಿದ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ.‌ ಮಧ್ಯಾಹ್ನ 1.44ಕ್ಕೆ ಮಗುವನ್ನು ಜೀವಂತವಾಗಿ ಹೊರ ತೆಗೆಯಲಾಯಿತು. ಮರು ಜನ್ಮ ಪಡೆದುಬಂದ 14 ತಿಂಗಳ ಮಗು ಸುರಕ್ಷಿತವಾಗಿ ತಾಯಿ ಮಡಿಲು ಸೇರಿದ್ದಾನೆ. ಅಂಬುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ರಕ್ಷಣಾ ಸಿಬ್ಬಂದಿ ಮಗುವನ್ನು ಸುರಕ್ಷಿತವಾಗಿ ಹೊರ ತೆಗೆಯುತ್ತಿದ್ದಂತೆ ನೆರೆದಿದ್ದ ಸಾವಿರಾರು ಜನ ಹರ್ಷೋದ್ಗಾರ ವ್ಯಕ್ತಪಡಿಸಿದರು. ಜಯ ಘೋಷಣೆಗಳು ಮೊಳಗಿದವು. ಸುಡು ಬಿಸಿಲಿನಲ್ಲೂ ಎಲ್ಲರ ಮೊಗದಲ್ಲಿ ಮಂದಹಾಸ ಮೂಡಿತು.

ADVERTISEMENT

ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ನೆರವು, ಮಾರ್ಗದರ್ಶನ ನೀಡುತ್ತಾ ಸ್ಥಳದಲ್ಲೇ ಇದ್ದ ಇಂಡಿ ಶಾಸಕ ಯಶವಂತ ರಾಯಗೌಡ ಪಾಟೀಲ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಜಿ.ಪಂ.ಸಿಇಒ ರಿಷಿ ಆನಂದ ಅವರು, ಮಗು ಜೀವಂತ ಹೊರಬಂದಿರುವುದಕ್ಕೆ ನಿಟ್ಟುಸಿರು ಬಿಟ್ಟರು.

ಇಷ್ಡೊಂದು ದೀರ್ಘಕಾಲ ಮಗು ಕೊಳವೆ ಬಾವಿಯೊಳಗೆ ಸಿಲುಕಿ ಜೀವಂತಾಗಿ ಹೊರ ಬಂದಿರುವುದು ಪವಾಡವೇ ಸರಿ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು.

ಸುದ್ದಿ ತಿಳಿದು ಜಿಲ್ಲೆಯ ಮೂಲೆ ಮೂಲೆಗಳಿಂದ ರಕ್ಷಣಾ ಕಾರ್ಯಾಚರಣೆ ವೀಕ್ಷಿಸಲು ಬಂದಿದ್ದ ಜನರು ಖುಷಿಯಿಂದ ಮನೆಯತ್ತ ಹೆಜ್ಜೆ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.