ಬಸವನಬಾಗೇವಾಡಿ: ತಾಲ್ಲೂಕಿನ ಇವಣಗಿ ಗ್ರಾಮದಲ್ಲಿ ಡಿ.2 ರಂದು ಹಮ್ಮಿಕೊಂಡಿರುವ ಬಸವನಬಾಗೇವಾಡಿ ತಾಲ್ಲೂಕು ಮಟ್ಟದ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅವಿಸ್ಮರಣೀಯವಾಗಿ ಮಾಡುವ ನಿಟ್ಟಿನಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಎಲ್ಲ ಕನ್ನಡ ಮನಸ್ಸುಗಳು ಸಹಕಾರ ನೀಡಬೇಕು ಎಂದು ತಹಶೀಲ್ದಾರ್ ವೈ.ಎಸ್.ಸೋಮನಕಟ್ಟಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ 10ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಸಿದ್ಧತೆ ಕುರಿತು ಬುಧವಾರ ಸಂಜೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚನೆ ಮಾಡುವ ಮೂಲಕ ಸಮ್ಮೇಳನವು ಅಚ್ಚುಕಟ್ಟಾಗಿ ನಡೆಯುವಂತೆ ಕನ್ನಡ ಸಾಹಿತ್ಯ ಪರಿಷತ್ತು ಗಮನ ಹರಿಸಬೇಕು. ಸಮಿತಿಗಳಿಗೆ ವಹಿಸುವ ಜವಾಬ್ದಾರಿಯನ್ನು ಸಮಿತಿಗಳ ಸದಸ್ಯರು ಅಚ್ಚುಕಟ್ಟಗಿ ನಿರ್ವಹಿಸಬೇಕು.
ಸಮ್ಮೇಳನಕ್ಕೆ 10 ದಿನ ಮಾತ್ರ ಬಾಕಿಯಿವೆ. ಸಮ್ಮೇಳನದ ತಯಾರಿ ಭರದಿಂದ ಸಾಗಬೇಕಿದೆ. ಪ್ರತಿಯೊಬ್ಬ ನೌಕರ ಬಾಂಧವರು ಸಮ್ಮೇಳನಕ್ಕೆ ಧನಸಹಾಯ ನೀಡುವ ಮೂಲಕ ಸಮ್ಮೇಳನದ ಯಶಸ್ಸಿಗೆ ಸಹಕಾರ ನೀಡಬೇಕು ಎಂದರು.
ತಾ.ಪಂ ಇಒ ಪ್ರಕಾಶ ದೇಸಾಯಿ ಮಾತನಾಡಿ, ಇವಣಗಿ ಗ್ರಾಮಕ್ಕೆ ಸಂಬಂಧಿಸಿದ ಗ್ರಾಮ ಪಂಚಾಯಿತಿಯಿಂದ ಇಡೀ ಗ್ರಾಮದ ಸ್ವಚ್ಛತೆ ಮಾಡಿಸುವುದು ಸೇರಿದಂತೆ ಅಗತ್ಯ ನೆರವು ಸಮ್ಮೇಳನಕ್ಕೆ ನೀಡಲಾಗುವುದು. ವಿವಿಧ ಗ್ರಾಮ ಪಂಚಾಯಿತಿಗಳಿಂದ ಸಾಧ್ಯವಾದಷ್ಟು ಸಮ್ಮೇಳನಕ್ಕೆ ಸಹಕಾರ ನೀಡುವ ಭರವಸೆ ನೀಡಿದರು.
ಬಿಇಒ ವಸಂತ ರಾಠೋಡ ಮಾತನಾಡಿ, ಶಿಕ್ಷಣ ಇಲಾಖೆಯಿಂದ ಸಮ್ಮೇಳನದ ಯಶಸ್ಸಿಗೆ ಬೇಕಾದ ಸಹಕಾರ ನೀಡಲಾಗುವುದು. ಸಮ್ಮೇಳನದ ದಿನದಂದು ಪಟ್ಟಣದಿಂದ ವಿವಿಧ ಶಾಲೆಗಳ ಬಸ್ ನೆರವು ಪಡೆದುಕೊಂಡು ಸಮ್ಮೇಳನಕ್ಕೆ ಬರುವ ಜನರಿಗೆ ವಾಹನದ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಡೋಣೂರ,
ಮನಗೂಳಿ ಪುರಸಭೆ ಮುಖ್ಯಾಧಿಕಾರಿ ಎಸ್.ಐ.ರೇವೂರಕರ, ರವಿ ರಾಠೋಡ, ಅಶೋಕ ಚಲವಾದಿ, ಪರಶುರಾಮ ದಿಂಡವಾರ, ಶಿವಾನಂದ ಮಂಗಾನವರ, ಅರವಿಂದ ಸಾಲವಾಡಗಿ ಮಾತನಾಡಿದರು.
ಎಲ್ಲ ಇಲಾಖೆಗಳ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.