ADVERTISEMENT

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬರಗಾಲ: ಶೋಭಾ ಟೀಕೆ

ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಚುನಾವಣೆ ಪ್ರಚಾರ

​ಪ್ರಜಾವಾಣಿ ವಾರ್ತೆ
Published 4 ಮೇ 2024, 15:44 IST
Last Updated 4 ಮೇ 2024, 15:44 IST
ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಪರವಾಗಿ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದರು
ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಪರವಾಗಿ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದರು    

ಇಂಡಿ: ‘ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಬರಗಾಲ, ಬಾಂಬ್‌ ಸ್ಫೋಟ, ಜಾತಿ–ಧರ್ಮಗಳ ನಡುವೆ ಜಗಳ, ಹಿಂದೂಗಳ ಹತ್ಯೆ ಎಂಬ ‘ಗ್ಯಾರಂಟಿ’ಗಳು ಸಿಗಲಿವೆ‘ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದರು. 

ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಪರವಾಗಿ ನಡೆದ ಬಹಿರಂಗ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು. 

‘ಮೊದಲು ಕಾಂಗ್ರೆಸ್‌ ಪಕ್ಷದಿಂದ ಕತ್ತೆ ನಿಂತರೂ ಆರಿಸಿ ಬರುತ್ತದೆ ಎಂಬ ಕಾಲವಿತ್ತು. ಆದರೆ, ಇಂದು ಕಾಂಗ್ರೆಸ್ ಪಕ್ಷ ಅಧಿಕೃತ ವಿರೋಧ ಪಕ್ಷವಾಗುವಷ್ಟು ಅಭ್ಯರ್ಥಿಗಳು ಕೂಡ ಲೋಕಸಭೆಗೆ ಆಯ್ಕೆಯಾಗುತ್ತಿಲ್ಲ. ಇದಕ್ಕೆ ಕಾಂಗ್ರೆಸ್ ಆಡಳಿತದ ಸೃಜನ ಪಕ್ಷಪಾತ, ಖಜಾನೆ ಲೂಟಿ, ಭ್ರಷ್ಟಾಚಾರಗಳೇ ಕಾರಣ’ ಎಂದು ದೂರಿದರು. 

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಹತ್ತು ವರ್ಷಗಳಿಂದ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಇಂದಿಗೂ ಕೇಂದ್ರದ ಸಚಿವರಾಗಲಿ ಅಥವಾ ಕೇಂದ್ರ ಸಚಿವಾಲಯದ ಯಾವ ಅಧಿಕಾರಿಗಳೂ ಮೋದಿ ಆಡಳಿತದಲ್ಲಿ ಭ್ರಷ್ಟಾಚಾರ ಮಾಡಿದ ಒಂದು ಉದಾಹರಣೆ ಇಲ್ಲ’ ಎಂದರು.

ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು. 

ಸಂಸದ, ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಮಾತನಾಡಿ, ‘ನಾನು ಮತದಾರರ ಕಣ್ಣಾಗ ಇಲ್ಲ. ಅವರ ಹೃದಯದಲ್ಲಿದ್ದೇನೆ. ಜಲ ಜೀವನ ಮಿಷನ್ ಅಡಿ ಪ್ರತಿ ಹಳ್ಳಿಗೂ ಕುಡಿಯುವ ನೀರಿನ ಯೋಜನೆ ಸೇರಿದಂತೆ ಎಂಟು ರಾಷ್ಟ್ರೀಯ ಹೆದ್ದಾರಿಗಳನ್ನು ಜಿಲ್ಲೆಗೆ ತಂದಿದ್ದೇನೆ. ಈಗಾಗಲೇ ನನ್ನನ್ನು 11 ಚುನಾವಣೆಯಲ್ಲಿ ಗೆಲ್ಲಿಸಿದ್ದೀರಿ. ಇದು ನನ್ನ 12ನೇ ಚುನಾವಣೆಯಾಗಿದ್ದು, ಇದೊಂದು ಬಾರಿ ನನಗೆ ಗೆಲ್ಲಿಸಬೇಕು‘ ಎಂದು ಮನವಿ ಮಾಡಿದರು. 

ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಕಾಸುಗೌಡ ಬಿರಾದಾರ, ಬಿ.ಡಿ.ಪಾಟೀಲ, ಶೀಲವಂತ ಉಮರಾಣಿ, ಮಲ್ಲಿಕಾರ್ಜುನ ಕಿವಡೆ, ಶ್ರೀಶೈಲಗೌಡ ಪಾಟೀಲ, ದೇವೆಂದ್ರ ಕುಂಬಾರ ಮಾತನಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಆರ್.ಪಾಟೀಲ ಕೂಚಬಾಳ, ಪ್ರಮುಖರಾದ ಅರುಣ ಶಹಾಪುರ, ಅಶೋಕ ಅಲ್ಲಾಪುರ, ಸುರೇಶಗೌಡ ಬಿರಾದಾರ, ಅಂಗಡಿ, ಈರಣ್ಣ ರಾವೂರ, ಸಿದ್ದಲಿಂಗ ಹಂಜಗಿ, ಹಣಮಂತರಾಯಗೌಡ ಪಾಟೀಲ, ರವಿ ವಗ್ಗೆ, ರಾಜಕುಮಾರ ಸಗಾಯಿ, ಅನೀಲ ಜಮಾದಾರ, ರವಿಕಾಂತಬಗಲಿ, ಮರೆಪ್ಪ ಗಿರಣಿವಡ್ಡರ, ಸುನಂದಾ ವಾಲೀಕಾರ, ಮಲ್ಲಮ್ಮ ಜೋಗೂರ, ನಾಗುಗೌಡ ಪಾಟೀಲ, ಅಣ್ಣಪ್ಪ ಖೈನೂರ, ಸಿದ್ದು ಡಂಗಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.