ADVERTISEMENT

ವಿಜಯಪುರ | ಅಧಿಕಾರ ಬಳಕೆ: ಪರಸ್ಪರ ದೂರು

ಅಕಾಡೆಮಿ ಅಧ್ಯಕ್ಷ, ಆಯೋಗದ ಸದಸ್ಯ ಶೀತಲಸಮರ

ಬಸವರಾಜ ಸಂಪಳ್ಳಿ
Published 19 ಜುಲೈ 2024, 4:54 IST
Last Updated 19 ಜುಲೈ 2024, 4:54 IST
ಸಂಗಮೇಶ ಬಬಲೇಶ್ವರ
ಸಂಗಮೇಶ ಬಬಲೇಶ್ವರ   

ವಿಜಯಪುರ: ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮತ್ತು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ನಡುವೆ ‘ಅಧಿಕಾರ ವ್ಯಾಪ್ತಿ’ಯ ಸಂಘರ್ಷ ಏರ್ಪಟ್ಟಿದೆ.

‘ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.

ಇದಕ್ಕೆ ಪೂರಕವಾಗಿ ಇಲಾಖೆಯ ಕಾರ್ಯದರ್ಶಿಯವರು ಆಯೋಗದ ಕಾರ್ಯದರ್ಶಿಗೆ ಪತ್ರವನ್ನು ಬರೆದು, ‘ಆಯೋಗದ ಸದಸ್ಯರಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಲು ಆಯೋಗದ ನಿಯಮಗಳಲ್ಲಿ ಅವಕಾಶ ಇದೆಯೇ ಎಂಬ ಬಗ್ಗೆ ಪರಿಶೀಲಿಸಬೇಕು. ದೂರಿನ ಬಗ್ಗೆ ಕ್ರಮ ಕೈಗೊಂಡು, ಸರ್ಕಾರಕ್ಕೆ ವರದಿ ನೀಡಬೇಕು’ ಎಂದು ತಿಳಿಸಿದ್ದಾರೆ.

ADVERTISEMENT

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಆಯೋಗದ ಸದಸ್ಯ ಶಶಿಧರ ಕೋಸಂಬೆ, ‘ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕಾಯ್ದೆ 2005ರ ಕನಿಷ್ಠ ತಿಳಿವಳಿಕೆ ಇಲ್ಲ ಎಂಬುದು ಅವರು ಸರ್ಕಾರಕ್ಕೆ ಬರೆದ ಪತ್ರದಿಂದ ತಿಳಿದು ಬಂದಿದೆ. ಕಾಯ್ದೆಯ ಕಲಂ 13 ಅನ್ನು ಓದಿಕೊಳ್ಳಬೇಕು’ ಎಂದರು.

‘ಅಕಾಡೆಮಿ ಅಧ್ಯಕ್ಷರೇ ತಮ್ಮ ಅಧಿಕಾರದ ವ್ಯಾಪ್ತಿ ಮೀರಿ ನಡೆದುಕೊಳ್ಳುತ್ತಾರೆ. ಅಧಿಕಾರ ಇಲ್ಲದಿದ್ದರೂ ಇಲಾಖೆ ಅಧಿಕಾರಿಗಳಿಗೆ ಯಾವ ಆಧಾರದ ಮೇಲೆ ನೋಟಿಸ್‌ ನೀಡಿದ್ದಾರೆ. ಅಕಾಡೆಮಿ ಬೈಲಾದಲ್ಲಿ ನೋಟಿಸ್‌ ನೀಡಲು ಅವಕಾಶವಿದೆಯೇ’ ಎಂದು ಅವರು ಪ್ರಶ್ನಿಸಿದ್ದಾರೆ. 

‘ವಿಜಯಪುರಕ್ಕೆ ನಾನು ಈಚೆಗೆ ಭೇಟಿ ನೀಡಿದಾಗ ಅನಧಿಕೃವಾಗಿರುವ ಕೋಚಿಂಗ್‌ ಸೆಂಟರ್‌ಗಳನ್ನು ಮುಚ್ಚಲು ಸೂಚಿಸಿದ್ದೆ. ಅದರಲ್ಲಿ ಸಂಗಮೇಶ ಬಬಲೇಶ್ವರ ಅವರಿಗೆ ಸೇರಿದ ಕೋಚಿಂಗ್‌ ಸೆಂಟರ್‌ ಕೂಡ ಇದೆ. ಅದರ ವಿರುದ್ಧ ಕ್ರಮ ಕೈಗೊಂಡಿದ್ದನ್ನು ಸಹಿಸಲಾಗದೇ ಅಧಿಕಾರ ವ್ಯಾಪ್ತಿ ಕುರಿತು ನನ್ನ ವಿರುದ್ಧ ದೂರು ನೀಡಿದ್ದಾರೆ’ ಎಂದು ಅವರು ಆರೋಪಿಸಿದರು.

ಆರೋಪ ಸುಳ್ಳು:

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ‘ವಿಜಯಪುರದಲ್ಲಿ ನನ್ನ ಒಡೆತನದಲ್ಲಿ ಕೋಚಿಂಗ್‌ ಸೆಂಟರ್‌ ಇರುವುದು ದೃಢಪಡಿಸಿದರೆ ಸಾರ್ವಜನಿಕ ಜೀವನದಿಂದ ನಿವೃತ್ತಿ ಪಡೆಯುವೆ. ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವೆ. ಕೋಸಂಬೆ ಅವರು ಆರೋಪ ದೃಢಪಡಿಸಲು ವಿಫಲವಾದರೆ ಅವರು ತಮ್ಮ ಹುದ್ದೆಗೆ ತಕ್ಷಣ ರಾಜೀನಾಮೆ ನೀಡಬೇಕು’ ಎಂದರು.

‘ಆಯೋಗದ ಸದಸ್ಯರಿಗೆ ಅಧಿಕಾರ ಇಲ್ಲದಿದ್ದರೂ ಪ್ರಗತಿ ಪರಿಶೀಲನೆ ನೆಪದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಅನಗತ್ಯ ಒತ್ತಡ ಹೇರುತ್ತಿದ್ದಾರೆ. ಅಲ್ಲದೇ, ತಾವು ನಡೆಸುವ ಸಭೆ, ಸಮಾರಂಭಗಳ ಖರ್ಚು, ವೆಚ್ಚ, ಟಿಎ, ಡಿಎ ಅಧಿಕಾರಿಗಳಿಂದ ಭರಿಸುತ್ತಾರೆ. ಅವರ ವಿರುದ್ಧ ಕ್ರಮಕೈಗೊಳ್ಳಲು ನಾನೂ ದೂರು ನೀಡಿದ್ದೇನೆ’ ಎಂದರು.

ಶಶಿಧರ ಕೋಸಂಬೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.