ADVERTISEMENT

ಇಂಡಿ | ಮುಂಗಾರು ಬಿತ್ತನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 14:34 IST
Last Updated 7 ಜುಲೈ 2024, 14:34 IST

ಇಂಡಿ: ಮುಂಗಾರು ಬಿತ್ತನೆಯಲ್ಲಿ ಬಿತ್ತಬೇಕಿದ್ದ ತೊಗರಿ, ಹೆಸರು, ಶೇಂಗಾ, ಹತ್ತಿ, ಮೆಕ್ಕೆಜೋಳ, ಹುರಳಿ, ಉದ್ದು, ಸಜ್ಜೆ ಮುಂತಾದ ಬೆಳೆಗಳು ಈಗಾಗಲೇ ಶೇ 90.6 ರಷ್ಟು ಬಿತ್ತನೆಯಾಗಿವೆ. ಎಲ್ಲ ಬೆಳೆಗಳು ಚೆನ್ನಾಗಿದ್ದು, ಇದೀಗ ಮಳೆಯ ನಿರೀಕ್ಷೆಯಲ್ಲಿವೆ. ಮೆಳೆಯಾದರೆ ಒಳ್ಳೆಯ ಇಳುವರಿ ಬರಬಹುದು ಎಂದು ಅಂದಾಜಿಸಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹದೇವಪ್ಪ ಏವೂರ ತಿಳಿಸಿದ್ದಾರೆ.

ಮೆಕ್ಕೆಜೋಳ, 15716 ಹೆಕ್ಟೇರ್‌ ಪ್ರದೇಶದ ಗುರಿಯ ಬದಲಾಗಿ 15060 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಸಜ್ಜೆ 7040 ಹೆಕ್ಟೇರ್‌ ಪ್ರದೇಶದ ಗುರಿಯಿದ್ದು, ಬದಲಿಗೆ 7005 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ತೊಗರಿ ಬೆಳೆ ಪ್ರಮುಖವಾಗಿದ್ದು, 91750 ಹೆಕ್ಟೇರ್‌ ಪ್ರದೇಶದ ಗುರಿಯಲ್ಲಿ ಈಗಾಗಲೇ 88405 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇನ್ನೂ ಬಿತ್ತನೆಯ ಕಾರ್ಯ ಮುಂದುವರಿದಿದೆ.

ಹೆಸರು- 209 ಹೆಕ್ಟೇರ್‌ ಪ್ರದೇಶದ ಗುರಿಯಿದ್ದು, ಇದರ ಪೈಕಿ 85 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಉದ್ದು- 365 ಹೆಕ್ಟೇರ್‌ ಪ್ರದೇಶದ ಗುರಿಯಲ್ಲಿ 100 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಶೇಂಗಾ- 1200 ಹೆಕ್ಟೇರ್‌ ಪ್ರದೇಶದ ಗುರಿಯಲ್ಲಿ 480 ಹೆಕ್ಟೇರ್‌ಪ್ರದೇಶದಲ್ಲಿ ಬಿತ್ತನೆಯಾಗಿದೆ.

ADVERTISEMENT

ಸೂರ್ಯಕಾಂತಿ- 3850 ಹೆಕ್ಟೇರ್‌ ಪ್ರದೇಶದ ಗುರಿಯಲ್ಲಿ 130 ಹೆಕ್ಟೇರ್‌ ಪ್ರದೆಶದಲ್ಲಿ ಬಿತ್ತನೆ ಮಾಡಲಾಗಿದೆ. ಹತ್ತಿ -11825 ಹೆಕ್ಟೇರ್‌ ಪ್ರದೇಶದಲ್ಲಿ ಗುರಿ ಹೊಂದಿದ್ದು, 7515 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಕಬ್ಬು (ನಾಟಿ) 16000 ಹೆಕ್ಟೇರ್‌ ಪ್ರದೇಶದ ಗುರಿಯಲ್ಲಿ 14870 ಹೆಕ್ಟೇರ್‌ ಪ್ರದೇಶದಲ್ಲಿ ನಾಟಿ ಮಾಡಲಾಗಿದೆ.

ಹೀಗೆ ಒಟ್ಟು ಮುಂಗಾರಿಯಲ್ಲಿ ಇನ್ನಿತರ ವಿವಿಧ ದ್ವಿದಳ ಸೇರಿ 1,55,129 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಿದ್ದು, ಈಗಾಗಲೇ 1,40,475 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಕಾರ್ಯ ಪೂರ್ಣಗೊಂಡು ಶೇ 90.6 ರಷ್ಟು ಬಿತ್ತನೆಯ ಗುರಿ ಸಾಧಿಸಲಾಗಿದೆ ಎಂದು ಏವೂರ ತಿಳಿಸಿದ್ದಾರೆ.

ಬಿತ್ತನೆಯಾದ ಎಲ್ಲ ಬೆಳೆಗಳು ಚೆನ್ನಾಗಿದ್ದು, ಇದೀಗ ಮಳೆಯ ಅಗತ್ಯವಿದೆ. ಕೆಲವು ಕಡೆ ಅಲ್ಪ ಸ್ವಲ್ಪ ಮಳೆಯಾಗಿದ್ದರೆ, ಇನ್ನೂ ಕೆಲವು ಕಡೆ ಮಳೆಯಾಗಬೇಕಿದೆ. ಒಂದು ವಾರದಲ್ಲಿ ಮಳೆಯಾದರೆ ಒಳ್ಳೆಯ ಇಳುವರಿ ಬರಬಹುದು ಎಂದು ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ಭರವಸೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.