ADVERTISEMENT

ವಿಜಯಪುರ: ಸಂಸದರಾದ ಜಿಲ್ಲೆಯ ಇಬ್ಬರು ದಲಿತ ನಾಯಕರು

ರಮೇಶ ಜಿಗಜಿಣಗಿ, ಗೋವಿಂದ ಕಾರಜೋಳ ಜೋಡಿ

ಬಸವರಾಜ ಸಂಪಳ್ಳಿ
Published 7 ಜೂನ್ 2024, 6:23 IST
Last Updated 7 ಜೂನ್ 2024, 6:23 IST
<div class="paragraphs"><p>ರಮೇಶ ಜಿಗಜಿಣಗಿ ಮತ್ತು ಗೋವಿಂದ ಕಾರಜೋಳ</p></div>

ರಮೇಶ ಜಿಗಜಿಣಗಿ ಮತ್ತು ಗೋವಿಂದ ಕಾರಜೋಳ

   

ವಿಜಯಪುರ: ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಗರಡಿಯಲ್ಲಿ ಬೆಳೆದುಬಂದ ಜಿಲ್ಲೆಯ ಇಬ್ಬರು ದಲಿತ ನಾಯಕರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೇರೆ ಬೇರೆ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವುದು ವಿಶೇಷ.

ವಿಜಯಪುರ ಎಸ್‌ಸಿ ಮೀಸಲು ಕ್ಷೇತ್ರದಿಂದ ರಮೇಶ ಜಿಗಜಿಣಗಿ, ಚಿತ್ರದುರ್ಗ ಎಸ್‌ಸಿ ಮೀಸಲು ಕ್ಷೇತ್ರದಿಂದ ಗೋವಿಂದ ಕಾರಜೋಳ ಸಂಸದರಾಗಿ ಆಯ್ಕೆಯಾಗುವ ಮೂಲಕ ತವರಿಗೆ ಹಾಗೂ ಸಮಾಜಕ್ಕೆ ರಾಜಕೀಯ ಶಕ್ತಿ ತುಂಬಿದ್ದಾರೆ.

ADVERTISEMENT

ಪರಿಶಿಷ್ಟ ಜಾತಿ ಎಡಗೈ(ಮಾದಿಗ) ಸಮುದಾಯಕ್ಕೆ ಸೇರಿದ ಗೋವಿಂದ ಕಾರಜೋಳ ಮತ್ತು ರಮೇಶ ಜಿಗಜಿಣಗಿ ಇಬ್ಬರೂ ದೂರದ ಸಂಬಂಧಿಗಳು ಮಾತ್ರವಲ್ಲ, ರಾಜಕೀಯವಾಗಿ ಜನತಾ ಪರಿವಾರದಿಂದ ಹೆಚ್ಚು ಕಡಿಮೆ ಒಟ್ಟಿಗೆ ಬೆಳೆದು ಬಂದವರು.  

73 ವರ್ಷ ವಯೋಮಾನದ ಗೋವಿಂದ ಕಾರಜೋಳ ಅವರು ವಿಜಯಪುರ ತಾಲ್ಲೂಕಿನ ಕಾರಜೋಳ ಗ್ರಾಮದವರಾದರೂ ರಾಜಕೀಯವಾಗಿ ಬೆಳೆದುಬಂದಿದ್ದು ನೆರೆಯ ಬಾಗಲಕೋಟೆ ಜಿಲ್ಲೆಯಲ್ಲಿ. ಆರಂಭದಲ್ಲಿ ಸರ್ಕಾರಿ ನೌಕರರಾಗಿದ್ದ ಕಾರಜೋಳ ಅವರು ಬಳಿಕ ಸ್ವಯಂ ನಿವೃತ್ತಿ ಪಡೆದು, ಮುಧೋಳ ಮೀಸಲು ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ, ಮೂರು ಬಾರಿ ಸಚಿವರಾಗಿ ಹಾಗೂ ಒಮ್ಮೆ ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ದೂರದ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

71 ವರ್ಷ ವಯೋಮಾನದ ರಮೇಶ ಜಿಗಜಿಣಗಿ ಅವರು ಇಂಡಿ ತಾಲ್ಲೂಕಿನ ಅಥರ್ಗಾ ಗ್ರಾಮದವರು. ಪೊಲೀಸ್‌ ಅಧಿಕಾರಿಯಾಗಲು ಹೋದವರು ಹೆಗಡೆ ಅವರ ಸಂಗತದಿಂದ ರಾಜಕೀಯವಾಗಿ ಬೆಳೆದರು. ಬಳ್ಳೊಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ, ಸಚಿವರಾಗಿ ಬಳಿಕ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆನಂತರ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಸತತವಾಗಿ ನಾಲ್ಕನೇ ಬಾರಿಗೆ ಸಂಸದರಾಗಿ, ಒಮ್ಮೆ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದಾರೆ.

ಗೋವಿಂದ ಕಾರಜೋಳ ಮತ್ತು ರಮೇಶ ಜಿಗಜಿಣಗಿ ‘ಒಂದೇ ನಾಣ್ಯದ ಎರಡು ಮುಖ’ಗಳಿದ್ದಂತೆ ಅಥವಾ ‘ಒಂದು ದೇಹ, ಎರಡು ಆತ್ಮ’ಗಳಿದ್ದಂತೆ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರ ಮಾತು.

ವಿಜಯಪುರ–ಬಾಗಲಕೋಟೆ ಜಿಲ್ಲೆಗಳಲ್ಲಿ ಬಲಿಷ್ಠ ಕೋಮುಗಳ ನಡುವೆ ನಡೆಯುವ ಜಿದ್ದಾಜಿದ್ದಿನ ರಾಜಕೀಯದಲ್ಲಿ ಅದರಲ್ಲೂ ಒಳ ಒಪ್ಪಂದ, ಒಳ ಏಟು ನೀಡುವ ಕ್ಷೇತ್ರಗಳಲ್ಲಿ ದಲಿತ ಸಮುದಾಯದಿಂದ ಬಂದ ಈ ಇಬ್ಬರು ನಾಯಕರು ರಾಜಕೀಯವಾಗಿ ಬೆಳೆದು ಬಂದಿರುವುದು ರೋಚಕವೇ ಸರಿ. 

ಇವರಿಬ್ಬರನ್ನು ರಾಜಕೀಯವಾಗಿ ಮುಗಿಸಲು ಹಲವರು ನಡೆಸಿದ ತಂತ್ರ–ಕುಂತ್ರಗಳನ್ನು ಬಹಳ ಚಾಣಕ್ಷತೆಯಿಂದ ಎದುರಿಸಿ, ಗೆದ್ದು ಬಂದಿದ್ದಾರೆ. ಯಾರನ್ನೂ, ಯಾವ ಸಮಾಜವನ್ನು ಎಂದಿಗೂ ಎದುರು ಹಾಕಿಕೊಳ್ಳದೇ, ಬಲಿಷ್ಠ ಜಾತಿಗಳ ವಿಶ್ವಾಸ ಗಳಿಸಿ, ಬಹಳ ಸೂಕ್ಷ್ಮವಾಗಿ ಈಜಿ ಬಂದಿರುವುದು ಇವರ ಚಾಣಾಕ್ಷ ರಾಜಕೀಯ ನಡೆಗೆ ಹಿಡಿದ ಕನ್ನಡಿಯಾಗಿದೆ.

ಇದೀಗ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಒಟ್ಟಿಗೆ ಸಂಸತ್‌ ಪ್ರವೇಶಿಸಿರುವ ಇಬ್ಬರು ನಾಯಕರು ಪ್ರಧಾನಿ ಮೋದಿ ಸಂಪುಟ ಸೇರುವ ಸಾಧ್ಯತೆ ದಟ್ಟವಾಗಿದೆ. ಇಬ್ಬರಲ್ಲಿ ಯಾರಿಗೆ ಸಚಿವ ಸ್ಥಾನ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.