ಇಂಡಿ: ಸಂಸದ ಜಿಗಜಿಣಗಿ ಅವರು ನೇರ ನಡೆ ನುಡಿಯ ಹೃದಯವಂತ ನಾಯಕರಾಗಿದ್ದಾರೆ. ಅವರ ಸರಳತೆ ಮತ್ತು ಪ್ರಾಮಾಣಿಕತೆಯೇ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.
ವಿಜಯಪುರ ಪ್ರವಾಸಿ ಮಂದಿರದಲ್ಲಿ ಸಂಸದರಾಗಿ ಗೆಲವು ಸಾಧಿಸಿದ ರಮೇಶ ಜಿಗಜಿಣಗಿ ಅವರಿಗೆ ಬಳ್ಳೊಳ್ಳಿ ಹಾಗೂ ಝಳಕಿ ಗ್ರಾಮಸ್ಥರಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾರ್ಯಕರ್ತರು ಹಾಗೂ ಸಾರ್ವಜನಿಕರು ಯಾರೇ ದೂರವಾಣಿ ಕರೆ ಮಾಡಿದರೂ ಜಿಗಜಿಣಗಿ ಅವರು ತಾವೇ ಸ್ವತಃ ದೂರವಾಣಿ ಕರೆ ಸ್ವೀಕರಿಸಿ ಅವರ ಸಮಸ್ಯೆ ಆಲಿಸುತ್ತಾರೆ. ಕರೆ ಸ್ವೀಕರಿಸಲು ಅವರು ಯಾರೊಬ್ಬ ಆಪ್ತ ಸಹಾಯಕನನ್ನು ಇಟ್ಟುಕೊಂಡಿಲ್ಲ. ಅವರಿಂದ ಸಾಧ್ಯವಾದಷ್ಟು ಸಹಾಯ ಮಾಡುವ ಗುಣ ಹೊಂದಿದ್ದಾರೆ. ಹೀಗಾಗಿಯೇ ಅವರನ್ನು ಈ ಜಿಲ್ಲೆಯ ಜನ ಮೆಚ್ಚಿ ಮತ್ತೆ-ಮತ್ತೆ ಅವರನ್ನೇ ಆಯ್ಕೆ ಮಾಡುತ್ತಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಈ ಜಿಲ್ಲೆಯ ಜನ ಎಂದೂ ನನ್ನ ಕೈ ಬಿಡಲ್ಲ ಎಂಬ ವಿಶ್ವಾಸವಿತ್ತು. ಬಹಳಷ್ಟು ಜನ ಈ ಬಾರಿ ಗೆಲುವು ಕಷ್ಟ ಎಂಬ ವ್ಯಾಖ್ಯಾನ ಮಾಡಿದ್ದರು. ಆದರೆ ನನಗೆ ಜನರ ಮೇಲೆ ಸಂಪೂರ್ಣ ವಿಶ್ವಾಸವಿತ್ತು. ನನಗಲ್ಲದಿದ್ದರೂ ಮೋದಿಯವರಿಗಾಗಿಯಾದರೂ ನನಗೆ ಮತ ಹಾಕುತ್ತಾರೆ. ನಾನು ಖಂಡಿತವಾಗಿಯೂ ಆಯ್ಕೆಯಾಗುತ್ತೇನೆ ಎಂಬ ದೃಢ ವಿಶ್ವಾಸ ಹೊಂದಿದ್ದೆ ಎಂದರು.
ಬಳೊಳ್ಳಿ ಗ್ರಾಮದ ಮುಖಂಡರಾದ ಕಾಮನಗೌಡ ಬಿರಾದಾರ, ಅಶೋಕ ತೋಟದಾರ, ರಾಘವೇಂದ್ರ ಕಾಪಸೆ, ಸಿದ್ಧರಾಮ ವಾಲಿ, ವಿಠ್ಠಲ ಶಿರಶ್ಯಾಡ, ಮಹಾದೇವ ಕದರಿ, ಈರಣ್ಣ ಬಜಂತ್ರಿ, ಮಾಳು ಶಿರಶ್ಯಾಡ, ಅರಸಿದ್ದ ಸಗಾಯಿ, ಸದಾಶಿವ ರೇವತಗಾಂವ, ಸುನೀಲ ಶಿಂದೆ, ಪ್ರಕಾಶ ದೊಡ್ಡಮನಿ, ಶಿವನಗೌಡ ಬಿರಾದಾರ, ರಾಜು ನಾಯ್ಕೋಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.