ವಿಜಯಪುರ: ಪರಿಶಿಷ್ಟ ಜಾತಿಗೆ ಮೀಸಲಾದ ವಿಜಯಪುರ ಲೋಕಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಲು ಹಾಲಿ ಸಂಸದ ರಮೇಶ ಜಿಗಜಿಣಗಿ ಸಿದ್ಧತೆ ನಡೆಸಿದ್ದಾರೆ. ಆದರೆ, ಜಿಲ್ಲೆಯಲ್ಲಿ ಪ್ರಬಲವಾದ ಬಂಜಾರ ಸಮುದಾಯದ ಯುವ ಮುಖಂಡರಾದ ಡಾ.ರಾಜೇಂದ್ರ ನಾಯಿಕ ಮತ್ತು ಮಹೇಂದ್ರ ನಾಯಿಕ ಬಿಜೆಪಿ ಟಿಕೆಟ್‌ಗಾಗಿ ತೀವ್ರ ಕಸರತ್ತು ನಡೆಸಿದ್ದಾರೆ.
ವಿಜಯಪುರ ಕ್ಷೇತ್ರವು ಮೀಸಲು ಲೋಕಸಭಾ ಕ್ಷೇತ್ರವಾದಾಗಿನಿಂದ ರಮೇಶ ಜಿಗಜಿಣಗಿ ಸ್ಪರ್ಧಿಸಿ, ಸತತ ಮೂರು ಬಾರಿ ಗೆಲುವು ದಾಖಲಿಸಿದ್ದಾರೆ. ಈ ಹಿಂದೆ ಚಿಕ್ಕೋಡಿ ಮೀಸಲು ಕ್ಷೇತ್ರದಿಂದಲೂ ಮೂರು ಬಾರಿ ಸಂಸದರಾದ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಈ ಹಿಂದಿನ ಸಂಪುಟದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಈಗಾಗಲೇ ಅವರಿಗೆ 70 ವರ್ಷ ವಯಸ್ಸು ಆಗಿದೆ. ಅವರನ್ನು ಬದಲಿಸುವ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.
‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಬಿಜೆಪಿಯ ಇನ್ನುಳಿದ ಮಾಜಿ ಸಚಿವರು, ಶಾಸಕರು, ಮುಖಂಡರು ಸೇರಿ ಎಲ್ಲ ಪಕ್ಷದವರ ಜೊತೆಗೂ ಜಿಗಜಿಣಗಿ ಉತ್ತಮ ರಾಜಕೀಯ ಸ್ನೇಹ ಹೊಂದಿದ್ದಾರೆ. ಒಂದು ವೇಳೆ ಬಿಜೆಪಿ ಟಿಕೆಟ್ ಕೈತಪ್ಪಿದರೆ ಅವರು ಕಾಂಗ್ರೆಸ್‌ಗೆ ಸೇರಿ, ಸ್ಪರ್ಧಿಸಲು ತೆರೆಮರೆಯಲ್ಲಿ ವೇದಿಕೆ ಸಜ್ಜಾಗಿದೆ’ ಎಂಬ ಮಾತು ಕ್ಷೇತ್ರದಲ್ಲಿ ಬಲವಾಗಿ ಕೇಳಿಬರುತ್ತಿದೆ.
‘ಮೂಲತಃ ಜನತಾ ಪರಿವಾರದವರಾದ ಜಿಗಜಿಣಗಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸೇರಿ ಕಾಂಗ್ರೆಸ್‌ನ ಪ್ರಮುಖರೊಂದಿಗೆ ಉತ್ತಮ ಸ್ನೇಹ, ಸಂಪರ್ಕ ಹೊಂದಿರುವುದರಿಂದ ಕಾಂಗ್ರೆಸ್ ಟಿಕೆಟ್ ಸುಲಭ’ ಎಂಬ ರಾಜಕೀಯ ವಿಶ್ಲೇಷಣೆಯು ವ್ಯಕ್ತವಾಗಿದೆ.
ವೈದ್ಯ, ಮಾಜಿ ಪೊಲೀಸ್ ಅಧಿಕಾರಿ ಕಸರತ್ತು:
ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾದ ಡಾ.ಬಾಬು ರಾಜೇಂದ್ರ ನಾಯಿಕ ಅವರು ಸದ್ಯ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕರು. ಬಾಗಲಕೋಟೆ ಜಿಲ್ಲೆಯಲ್ಲಿ ರಾಜಕಾರಣ, ಸಮಾಜಸೇವೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಅವರು ನಾಲ್ಕು ವರ್ಷಗಳಿಂದ ವಿಜಯಪುರ ಜಿಲ್ಲೆಯಲ್ಲಿ ನೆಲೆ ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ.
ವಿಜಯಪುರದಲ್ಲಿ ಮಧುಮೇಹ ಮತ್ತು ಹೃದ್ರೋಗ ಆಸ್ಪತ್ರೆಯನ್ನು ತೆರೆದು ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಮೂಲಕ ಮತದಾರರನ್ನು ತಲುಪುವ ಕೆಲಸ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಆಹಾರ ಕಿಟ್, ಉಚಿತ ವೈದ್ಯಕೀಯ ಚಿಕಿತ್ಸೆ ನೀಡಿದ್ದಾರೆ. ಪಕ್ಷದ ಸಂಘಟನಾ ಚಟುವಟಿಕೆಗಳ ಜೊತೆಗೆ ಜಿಲ್ಲೆಯಲ್ಲಿ ನಡೆಯುವ ಜಾತ್ರೆ, ಆಟೋಟ, ಧಾರ್ಮಿಕ ಕಾರ್ಯಕ್ರಮಗಳಿಗೆ ಧನಸಹಾಯ, ಪ್ರಾಯೋಜಕತ್ವ ಮಾಡುತ್ತಾ ಮತದಾರರನ್ನು ಸೆಳೆಯುವ ಕಾರ್ಯ ನಡೆಸಿದ್ದಾರೆ. ಅವರಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಬೆಂಬಲವಿದೆ.
ಬಿಜೆಪಿಯ ಇನ್ನೊಬ್ಬ ಟಿಕೆಟ್ ಆಕಾಂಕ್ಷಿ ಮಾಜಿ ಪೊಲೀಸ್ ಅಧಿಕಾರಿ (ಸಿಪಿಐ) ಮಹೇಂದ್ರ ನಾಯಿಕ ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆ ವೇಳೆ ನಾಗಠಾಣ ಮೀಸಲು ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು.
ನಾಗಠಾಣ ಕ್ಷೇತ್ರದ ಟಿಕೆಟ್ ಸಿಗುವುದು ಖಚಿತವಾದ ಬಳಿಕ ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಆದರೆ, ಮಹೇಂದ್ರ ಅವರಿಗೆ ಸಂಸದ ರಮೇಶ ಜಿಗಜಿಣಗಿ ಟಿಕೆಟ್ ತಪ್ಪಿಸಿ, ತಮ್ಮ ಹತ್ತಿರದ ಸಂಬಂಧಿ ಸಂಜೀವ ಐಹೊಳೆಗೆ ಟಿಕೆಟ್ ಕೊಡಿಸಿದರು ಎಂಬ ಆರೋಪ ಇದೆ. ಈ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿರುವ ಅವರು ಲೋಕಸಭಾ ಚುನಾವಣೆಯ ಟಿಕೆಟ್ ಕೇಳುವ ಮೂಲಕ ಜಿಗಜಿಣಗಿ ಅವರಿಗೆ ಅಡ್ಡಿಯಾಗಿದ್ದಾರೆ. ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ಲಾಬಿ ನಡೆಸಿದ್ದಾರೆ. ಒಂದು ವೇಳೆ ತನಗೆ ಟಿಕೆಟ್ ಸಿಗದಿದ್ದರೂ ಪರವಾಗಿಲ್ಲ, ಜಿಗಜಿಣಗಿ ಅವರಿಗೆ ಟಿಕೆಟ್ ತಪ್ಪಿಸಬೇಕು ಎಂಬ ಗುರಿ ಹೊಂದಿರುವುದರ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
‘ಟಿಕೆಟ್ ನಿರಾಕರಿಸಲು ಕಾರಣ ಬೇಕಲ್ಲ’
‘ಬಿಜೆಪಿಯಿಂದಲೇ ಮತ್ತೊಮ್ಮೆ ನನಗೆ ಟಿಕೆಟ್ ಸಿಗುವುದು ನಿಶ್ಚಿತ. ಬಿಜೆಪಿಯಿಂದ ನನಗೆ ಟಿಕೆಟ್ ನೀಡುವುದಿಲ್ಲ ಎಂಬುದಕ್ಕೆ ಏನಾದರೂ ಕಾರಣ ಬೇಕಲ್ಲ? ನಾನೇನು ಭ್ರಷ್ಟನೇ? 75 ವರ್ಷ ವಯಸ್ಸಾಗಿದೆಯೇ? ಅಥವಾ ಪಕ್ಷ ವಿರೋಧಿಯೇ? ನಮ್ಮ ಪಕ್ಷದಲ್ಲೇ ಇರುವ ಕೆಲವು ವಿರೋಧಿಗಳು ಆಕಾಂಕ್ಷಿಗಳು ನನಗೆ ಟಿಕೆಟ್ ಸಿಗುವುದಿಲ್ಲ ಎಂದು ಸುಳ್ಳು ಸುದ್ದಿ ಹರಡಿದ್ದಾರೆ. ಅಪಪ್ರಚಾರ ನಡೆಸಿದ್ದಾರೆ’ ಎಂದು ಸಂಸದ ರಮೇಶ ಜಿಗಜಿಣಗಿ ದೂರಿದರು. ‘ಒಂದು ವೇಳೆ ಬಿಜೆಪಿ ವರಿಷ್ಠರು ನನಗೆ ಟಿಕೆಟ್ ನೀಡದಿದ್ದರೆ ಮನೆಯಲ್ಲೇ ಇರುತ್ತೇನೆ ಹೊರತು ಕಾಂಗ್ರೆಸ್‌ಗೆ ಹೋಗಲ್ಲ. ಇವೆಲ್ಲವೂ ಊಹಾಪೋಹ. ನನಗೂ ಕಾಂಗ್ರೆಸ್ ಸಿದ್ಧಾಂತಕ್ಕೂ ಮೊದಲಿನಿಂದಲೂ ಹೊಂದಿಕೆಯಾಗಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
ಕಲಬುರಗಿ ಕ್ಷೇತ್ರದ ಟಿಕೆಟ್ ಆಧರಿಸಿ ವಿಜಯಪುರದ್ದು ನಿರ್ಣಯ
ರಾಜ್ಯದ ಐದು ಮೀಸಲು ಲೋಕಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿಯ ಎಡ ಬಲ ಹಾಗೂ ಪರಿಶಿಷ್ಟ ಪಂಗಡದವರಿಗೆ ಟಿಕೆಟ್ ಹಂಚಿಕೆ ಮಾಡುವ ಲೆಕ್ಕಾಚಾರದ ಮೇಲೆ ವಿಜಯಪುರ ಕ್ಷೇತ್ರದ ಟಿಕೆಟ್ ಯಾರಿಗೆ ಎಂಬುದು ನಿರ್ಧಾರವಾಗಲಿದೆ. ನೆರೆಯ ಕಲಬುರಗಿ ಕ್ಷೇತ್ರದ ಟಿಕೆಟ್ ಈ ಸಲವೂ ಹಾಲಿ ಸಂಸದ ಡಾ.ಉಮೇಶ ಜಾದವ್ ಅವರಿಗೆ ಸಿಗುವುದು ಖಚಿತವಾದರೆ ಜಾತಿ ಮೀಸಲಾತಿ ಲೆಕ್ಕಾಚಾರದ ಆಧಾರದ ಮೇಲೆ ಎಸ್‌ಸಿ ಎಡಗೈಗೆ ಸೇರಿದ ರಮೇಶ ಜಿಗಜಿಣಗಿ ಅವರಿಗೆ ವಿಜಯಪುರ ಟಿಕೆಟ್ ಖಚಿತ. ಒಂದು ವೇಳೆ ಕಲಬುರಗಿ ಕ್ಷೇತ್ರದಲ್ಲಿ ಬಂಜಾರ ಸಮುದಾಯದ ಬದಲಿಗೆ ಎಸ್‌ಸಿ ಅನ್ಯ ಸಮಾಜದವರಿಗೆ ಟಿಕೆಟ್ ನೀಡಿದರೆ ವಿಜಯಪುರದಲ್ಲಿ ಬಂಜಾರ ಸಮುದಾಯದ ಆಕಾಂಕ್ಷಿಗಳಿಗೆ ಟಿಕೆಟ್ ಖಚಿತ ಎಂಬುದು ರಾಜಕೀಯ ತಜ್ಞರ ವಿಶ್ಲೇಷಣೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.