ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಎರಡೂ ಸ್ಥಾನಗಳು ಕಾಂಗ್ರೆಸ್ ಪಾಲಾಗಿದೆ.
ನೂತನ ಮೇಯರ್ ಆಗಿ ಕಾಂಗ್ರೆಸ್‌ನ ಮಾಹೆಜಬೀನ್ ಹೊರ್ತಿ, ಉಪ ಮೇಯರ್ ಆಗಿ ದಿನೇಶ್ ಹಳ್ಳಿ ಆಯ್ಕೆಯಾದರು.
ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಮಹಾಪೌರ ಸ್ಥಾನಕ್ಕೆ 34ನೇ ವಾರ್ಡಿನ ಸದಸ್ಯೆ ಮಾಹೆಜಬೀನ್ ಹೊರ್ತಿ ಹಾಗೂ ಬಿಜೆಪಿಯಿಂದ 12ನೇ ವಾರ್ಡಿನ ಸದಸ್ಯ ರಶ್ಮಿ ಕೋರಿ ನಾಮಪತ್ರ ಸಲ್ಲಿಸಿದ್ದರು.
ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಉಪ ಮಹಾಪೌರ ಸ್ಥಾನಕ್ಕೆ 18ನೇ ವಾರ್ಡಿನ ಸದಸ್ಯ ದಿನೇಶ್ ಹಳ್ಳಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು.
35 ಸದಸ್ಯರಿರುವ ಮಹಾನಗರ ಪಾಲಿಕೆಗೆ 2022ರ ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 17, ಕಾಂಗ್ರೆಸ್ 10, ಎಎಂಐಎಂ 2, ಜೆಡಿಎಸ್ 1 ಹಾಗೂ ಪಕ್ಷೇತರರು 5 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ಯಾವೊಂದು ಪಕ್ಷಕ್ಕೂ ನಿಶ್ಚಳ ಬಹುಮತ ಇಲ್ಲದೇ ಪಾಲಿಕೆ ಅತಂತ್ರವಾಗಿತ್ತು. ಬಳಿಕ ಮೇಯರ್, ಉಪಮೇಯರ್ ಸ್ಥಾನದ ಮೀಸಲಾತಿ ಪ್ರಶ್ನಿಸಿ ಕೆಲ ಸದಸ್ಯರು ಹೈಕೋರ್ಟ್ ಮೇಟ್ಟಿಲೇರಿದ್ದ ಕಾರಣ 14 ತಿಂಗಳಿಂದ ಚುನಾವಣೆ ನಡೆದಿರಲಿಲ್ಲ.
ಪಾಲಿಕೆಯಲ್ಲಿ ಬಿಜೆಪಿ ಅತೀ ಹೆಚ್ಚು ಸದಸ್ಯ ಬಲ ಹೊಂದಿತ್ತು. ಆದರೆ, ಕಳೆದ ವಾರ 29ನೇ ವಾರ್ಡಿನ ಸದಸ್ಯ ವಿಜಯಕುಮಾರ್ ಬಿರಾದಾರ ನಿಧನದಿಂದ ಬಿಜೆಪಿ ಬಲ 16ಕ್ಕೆ ಕುಸಿತವಾಗಿತ್ತು. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಸದಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಂಸದ ರಮೇಶ ಜಿಗಜಿಣಗಿ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಚುನಾವಣಾಧಿಕಾರಿಗಳಾದ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿದರು. ಆದರೆ, ಪ್ರಾದೇಶಿಕ ಆಯುಕ್ತರು ಬಿಜೆಪಿಯ ಮನವಿಯನ್ನು ಪುರಸ್ಕರಿಸದ ಕಾರಣ ಕಪ್ಪು ಬಟ್ಟೆ ಪ್ರದರ್ಶಿಸಿ, ಆರ್‌ಸಿ ವಿರುದ್ಧ ಘೋಷಣೆಯನ್ನು ಕೂಗಿ ಚುನಾವಣೆಯನ್ನು ಬಹಿಷ್ಕರಿಸಿ ಹೊರನಡೆದರು.
‘ಚುನಾವಣಾಧಿಕಾರಿಗಳು ಕಾಂಗ್ರೆಸ್‌ನ ಕೈಗೊಂಬೆಯಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರ ಅಣತಿಯಂತೆ ನಡೆದುಕೊಂಡಿದ್ದಾರೆ. ಕಾನೂನು ಬಾಹಿರವಾಗಿ ಚುನಾವಣೆ ನಡೆಸಿದ್ದಾರೆ. ಇದರ ವಿರುದ್ಧ ನಾವು ಕಾನೂನು ಹೋರಾಟ ನಡೆಸುತ್ತೇವೆ‘ ಎಂದು ಯತ್ನಾಳ ಆರೋಪಿಸಿದರು.
ಬಳಿಕ ನಡೆದ ಚುನಾವಣೆಯಲ್ಲಿ ಎಎಂಐಎಂ, ಜೆಡಿಎಸ್ ಮತ್ತು ಪಕ್ಷೇತರರು ಕಾಂಗ್ರೆಸ್‌ಗೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಮಾಹೆಜಬೀನ್ ಹೊರ್ತಿ ಮೇಯರ್ ಆಗಿ ಆಯ್ಕೆಯಾದರು.
ಎಸ್‌ಟಿಗೆ ಮೀಸಲಾಗಿದ್ದ ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯ ದಿನೇಶ್ ಹಳ್ಳಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದ ಕಾರಣ ಅವಿರೋಧವಾಗಿ ಆಯ್ಕೆಯಾದರು.
ಪಾಲಿಕೆ ಅಧಿಕಾರ ಕಾಂಗ್ರೆಸ್ ಪಾಲಾಗುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಗುಲಾಲ್ ಎರಚಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ವಿಠಲ ಕಟಕಧೋಂಡ, ವಿಧಾನ ಪರಿಷತ್ ಸದಸ್ಯರಾದ ಸುನೀಲ್‌ಗೌಡ ಪಾಟೀಲ, ಪ್ರಕಾಶ ರಾಠೋಡ ಅವರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.