ADVERTISEMENT

ಜನರು ಹೇಳಿದ್ದೆ ಅಭಿವೃದ್ಧಿ ಅಜೆಂಡಾ: ಜಿಗಜಿಣಗಿಜಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 12:45 IST
Last Updated 13 ಜೂನ್ 2024, 12:45 IST
ನಿಡಗುಂದಿ ತಾಲ್ಲೂಕಿನ ಯಲಗೂರಕ್ಕೆ ಭೇಟಿ ನೀಡಿದ ಸಂಸದ ರಮೇಶ ಜಿಗಜಿಣಗಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು
ನಿಡಗುಂದಿ ತಾಲ್ಲೂಕಿನ ಯಲಗೂರಕ್ಕೆ ಭೇಟಿ ನೀಡಿದ ಸಂಸದ ರಮೇಶ ಜಿಗಜಿಣಗಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು   

ನಿಡಗುಂದಿ: ಮುಂದಿನ 5 ವರ್ಷಗಳ ಕಾಲ ಮತಕ್ಷೇತ್ರದಲ್ಲಿ ಯಾವ ಕೆಲಸ ಮಾಡಬೇಕೆನ್ನುವ ಅಜೆಂಡಾ ನನ್ನ ಮುಂದಿಲ್ಲ, ಜನರು ಹೇಳುವ ಕೆಲಸವೇ ನನ್ನ ಅಜೆಂಡಾ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಸಂಸದರಾಗಿ ಆಯ್ಕೆಯಾದ ಬಳಿಕ ಗುರುವಾರ ತಾಲ್ಲೂಕಿನ ಸುಕ್ಷೇತ್ರ ಯಲಗೂರ ಆಂಜನೇಯನ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಾಡಬೇಕಾದ ಎಲ್ಲಾ ಕೆಲಸಗಳನ್ನು ಕಳೆದ 15 ವರ್ಷಗಳಲ್ಲಿ ಕ್ಷೇತ್ರದಾದ್ಯಂತ ಮಾಡಿರುವೆ, ಬಾಕಿ ಕೆಲಸ ಯಾವುದು ಇಲ್ಲ, ಹೀಗಾಗಿ ಜನರು ಬೇಡಿಕೆ ಇಡುವ ಕೆಲಸ ಮಾಡುವೆ ಎಂದರು.

ಆಲಮಟ್ಟಿ ಬಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ರಾಸಾಯನಿಕ ಗೊಬ್ಬರ ತಯಾರಿಸುವ ಕಾರ್ಖಾನೆ ನಿರ್ಮಾಣಕ್ಕೆ ಪ್ರಯತ್ನ ಪಟ್ಟೆ, ಆದರೆ ಅದಕ್ಕೆ ಕಾರಣಾಂತರಗಳಿಂದ ಅನುಮತಿ ದೊರೆಯಲಿಲ್ಲ. ರಾಜ್ಯದವರೇ ಕೇಂದ್ರ ಕೈಗಾರಿಕಾ ಸಚಿವರಿದ್ದು, ಕೃಷ್ಣಾ ತೀರದಲ್ಲಿ ಕಾರ್ಖಾನೆ ಸ್ಥಾಪಿಸಲು ಪ್ರಯತ್ನಿಸುವೆ ಎಂದರು.

ADVERTISEMENT

ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಕರಣಗೊಳಿಸಲು ನಾನು ಹಾಗೂ ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ ಪ್ರಯತ್ನಿಸಿದೇವು, ಆದರೆ ಕಾನೂನಿನ ತೊಡಕಿನ ಕಾರಣ ರಾಷ್ಟ್ರೀಕರಣಗೊಳಿಸಲು ಸಾಧ್ಯವಾಗಲಿಲ್ಲ. ಅದಕ್ಕೆ ರಾಜ್ಯ ಸರ್ಕಾರದ ಸಹಕಾರವೂ ಅಗತ್ಯ ಎಂದರು.

ನಿಡಗುಂದಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ಕೆಲ ಸ್ಥಳೀಯರ ವಿರೋಧ ಇತ್ತು. ಆದರೆ ಈ ಸೇತುವೆ ನಿರ್ಮಾಣವಾಗದ ಕಾರಣ ಅಪಘಾತಗಳು ಹೆಚ್ಚಿವೆ. ಯಾವುದೇ ಒತ್ತಡಕ್ಕೂ ಮಣಿಯದೇ ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಜಯಪುರ ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಪ್ರಯತ್ನಸಿದ್ದೆ, ಆದರೆ ಕೆಲ ಸಮಸ್ಯೆಗಳ ಕಾರಣದಿಂದ ಸಾಧ್ಯವಾಗಿಲ್ಲ ಎಂದರು.

ಗೋಪಾಲ ನಾಯಕ, ಬಿಜೆಪಿ ಮುಖಂಡ ಗೋಪಾಲ ಗದ್ದನಕೇರಿ, ನಾರಾಯಣ ಒಡೆಯರ ಗೋಪಾಲಚಾರ್ಯ ಹಿಪ್ಪರಗಿ,  ಭೀಮಣ್ಣ, ಯಲಗೂರದಪ್ಪ ಪೂಜಾರಿ, ರಾಮಣ್ಣ ಬಿರಾದಾರ, ಮಹಾಂತೇಶ ಡೆಂಗಿ, ಅಶೋಕ ವಡವಡಗಿ, ಚನ್ನಬಸು ಚೆನ್ನಿಗಾವಿ, ಗುರುರಾಜ ಪೂಜಾರ, ರಂಗನಾಥ ಪೂಜಾರ , ಯಲಗೂರೇಶ ಪವಾರ, ನಾರಾಯಣ ಸೂರ್ಯವಂಶಿ, ಎಂ.ಕೆ. ಚೆನ್ನಿಗಾವಿ, ಲಕ್ಷ್ಮಣಗೌಡ ಪಾಟೀಲ, ಮೋಹನ ಭಾಂಡವಳಕರ, ಲಕ್ಷ್ಮಣ ಬೇವೂರ ಇದ್ದರು.

ನಿಡಗುಂದಿ ತಾಲ್ಲೂಕಿನ ಯಲಗೂರಕ್ಕೆ ಭೇಟಿ ನೀಡಿದ ಸಂಸದ ರಮೇಶ ಜಿಗಜಿಣಗಿ ಅವರನ್ನು ದೇವಸ್ಥಾನದ ಸಮಿತಿಯಿಂದ ಸನ್ಮಾನಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.