ಮುದ್ದೇಬಿಹಾಳ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿರುವ 65 ಸರ್ವೆಗಳಲ್ಲಿನ ಜಮೀನುಗಳ ಪಹಣಿಯಲ್ಲಿ ವಕ್ಫ್ ಹೆಸರು ದಾಖಲಾಗಿರುವುದರ ಕುರಿತು ಆರಂಭದಲ್ಲಿ ಐವರಿಗೆ ನೋಟಿಸ್ ಕಳುಹಿಸಿದ್ದ ಇಲ್ಲಿನ ತಹಶೀಲ್ದಾರ್ ಬಲರಾಮ ಕಟ್ಟಿಮನಿ ಅವರು ರೈತರ ವಿಚಾರಣೆಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ.
ವಕ್ಫ್ ಮಂಡಳಿ ಹೆಸರಿಗೆ ರೈತರ ಜಮೀನು ಪರಭಾರೆ ಮಾಡಲಾಗುತ್ತದೆ ಎಂಬ ಸುದ್ದಿ ಜಿಲ್ಲೆಯಾದ್ಯಂತ ವಿವಾದದ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ರೈತರ ವಿಚಾರಣೆಯನ್ನು ಮುಂದೂಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ತಹಶೀಲ್ದಾರ್ ಬಲರಾಮ ಕಟ್ಟಿಮನಿ, ‘ಪಹಣಿ ಕಾಲಂ 11ರಲ್ಲಿ ಕೆಲವು ರೈತರ ಖಾತೆಗಳಲ್ಲಿ ವಕ್ಫ್ ಹೆಸರು ಬಂದಿದೆ. ಅದು ಹೇಗೆ ಬಂದಿದೆ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತದೆ. ತಾಲ್ಲೂಕಿನ ಕುಂಟೋಜಿ, ಮುದ್ನಾಳ, ಬಳವಾಟ ಗ್ರಾಮದ ರೈತರಿಗೆ ನೋಟಿಸ್ ನೀಡಲಾಗಿತ್ತು. ಸದ್ಯಕ್ಕೆ ವಿಚಾರಣೆಯನ್ನು ಮೇಲಧಿಕಾರಿಗಳ ನಿರ್ದೇಶನದಂತೆ ಮುಂದೂಡಲಾಗಿದೆ’ ಎಂದು ತಿಳಿಸಿದರು.
ರೈತರ ಪಹಣಿಯಲ್ಲಿ ವಕ್ಫ್ ಹೆಸರು ಸೇರ್ಪಡೆಯಾಗಿರುವುದಕ್ಕೆ ಸ್ವತಃ ಅಧಿಕಾರಿಗಳೇ ಅಚ್ಚರಿ ವ್ಯಕ್ತಪಡಿಸುತ್ತಿದ್ದು ಈ ಬಗ್ಗೆ ಕೂಲಂಕಷ ಪರಿಶೀಲನೆ ಅಗತ್ಯವಿದೆ ಎಂಬ ಆಗ್ರಹ ರೈತಪರ ಸಂಘಟನೆಗಳಿಂದ ಕೇಳಿ ಬಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.