ADVERTISEMENT

ಮುದ್ದೇಬಿಹಾಳ: ತಳ್ಳುಗಾಡಿ ಸಂಚಾರಕ್ಕೆ ನಿಷೇಧ

ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ: ಬಿರಾದಾರ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 14:06 IST
Last Updated 16 ಅಕ್ಟೋಬರ್ 2024, 14:06 IST
ಮುದ್ದೇಬಿಹಾಳ ಪಟ್ಟಣದ ಪುರಸಭೆ ಸಭಾಭವನದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಂಘಟನೆ ಪದಾಧಿಕಾರಿಗಳೊಂದಿಗೆ ಬುಧವಾರ ನಡೆದ ಸಭೆಯಲ್ಲಿ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಬಿರಾದಾರ ಮಾತನಾಡಿದರು.ಅಧ್ಯಕ್ಷ ಮಹೆಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಇದ್ದರು.
ಮುದ್ದೇಬಿಹಾಳ ಪಟ್ಟಣದ ಪುರಸಭೆ ಸಭಾಭವನದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಂಘಟನೆ ಪದಾಧಿಕಾರಿಗಳೊಂದಿಗೆ ಬುಧವಾರ ನಡೆದ ಸಭೆಯಲ್ಲಿ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಬಿರಾದಾರ ಮಾತನಾಡಿದರು.ಅಧ್ಯಕ್ಷ ಮಹೆಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಇದ್ದರು.   

ಮುದ್ದೇಬಿಹಾಳ: ‘ಪಟ್ಟಣದಲ್ಲಿ ಸಾರ್ವಜನಿಕರ ಸಂಚಾರದ ಹಿತದೃಷ್ಟಿಯಿಂದ ಮುಖ್ಯರಸ್ತೆಯಲ್ಲಿ ತಳ್ಳುಗಾಡಿಗಳ ಸಂಚಾರವನ್ನು ನಿಷೇಧಿಸಿದ್ದೇವೆ’ ಎಂದು ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಹೇಳಿದರು.

ಪಟ್ಟಣದ ಪುರಸಭೆ ಸಭಾಭವನದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಂಘಟನೆ ಪದಾಧಿಕಾರಿಗಳೊಂದಿಗೆ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದರು.

ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಬಿರಾದಾರ ಮಾತನಾಡಿ, ‘ಅ.17 ರಿಂದಲೇ ತಳ್ಳುಗಾಡಿಗಳ ಸಂಚಾರವನ್ನು ಮುಖ್ಯರಸ್ತೆಯಲ್ಲಿ ನಿಷೇಧಿಸಲಾಗುತ್ತಿದೆ. ಒಬ್ಬೊಬ್ಬ ವ್ಯಕ್ತಿ 100 ತಳ್ಳುಗಾಡಿಗಳನ್ನಿಟ್ಟು ಬಾಡಿಗೆ ವಸೂಲಿ ಮಾಡಿ ಜನರ ಓಡಾಟಕ್ಕೆ ತೊಂದರೆಯನ್ನುಂಟು ಮಾಡುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಬಸವೇಶ್ವರ ವೃತ್ತದಿಂದ ನೇತಾಜಿ ನಗರದ ಸಿದ್ಧರಾಮೇಶ್ವರ ಸರ್ಕಲ್‌ವರೆಗೆ ಫುಟ್‌ಪಾತ್ ಕಟ್ಟೆಯ ಮೇಲೆ ಮಾತ್ರ ಕುಳಿತುಕೊಂಡು ವ್ಯಾಪಾರ ಮಾಡಬೇಕು. ಪಟ್ಟಣದಲ್ಲಿ ವ್ಯಾಪಾರ ಮಾಡುವ ಬೀದಿಬದಿಯ ವ್ಯಾಪಾರಿಗಳಿಗೆ ಪುರಸಭೆಯಿಂದ ಗುರುತಿನ ಚೀಟಿ ನೀಡಲಾಗುತ್ತದೆ’ ಎಂದು ಹೇಳಿದರು.

‘ದೀಪಾವಳಿ ಹಬ್ಬದವರೆಗೆ ಸದ್ಯಕ್ಕೆ ವ್ಯಾಪಾರ ಮಾಡಲು ರಿಯಾಯಿತಿ ನೀಡಲಾಗುತ್ತದೆ. ಅದರ ಬಳಿಕ ತರಕಾರಿ ಮಾರಾಟ, ಹೂವು, ಹಣ್ಣು ಸೇರಿದಂತೆ ಇನ್ನಿತರ ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ಹಳೇ ಪೊಲೀಸ್ ಕ್ವಾಟರ್ಸ್ ಜಾಗೆಯಲ್ಲಿ ಪಾರ್ಕಿಂಗ್ ಹಾಗೂ ಹಣ್ಣು, ಕಾಯಿ ಮಾರಾಟಕ್ಕೆ ವ್ಯವಸ್ಥೆ ಮಾಡುವ ಬಗ್ಗೆ ಚರ್ಚೆ ಮಾಡಿ ತಿಳಿಸಲಾಗುವುದು’ ಎಂದರು.

ಎಎಸ್‌ಐ ಎ.ಐ.ಸಾಲಿ ಮಾತನಾಡಿ, ‘ಬೀದಿ ಬದಿ ವ್ಯಾಪಾರಿಗಳು ಬೀದಿ ಬದಿಯಲ್ಲಿ ಕೂತು ವ್ಯಾಪಾರ ಮಾಡಬೇಕೆ ಹೊರತು ಬೀದಿಯ ಮಧ್ಯದಲ್ಲಿ ಅಲ್ಲ. ಪೊಲೀಸರು ವ್ಯಾಪಾರಿಗಳ ಮೇಲೆ ದೌರ್ಜನ್ಯ ನಡೆಸುವುದಿಲ್ಲ. ಸಾರ್ವಜನಿಕ ರಸ್ತೆ ಅತಿಕ್ರಮಣ ಮಾಡಿದವರನ್ನು ಹಿಂದೆ ಸರಿಸುವ ಕಾರ್ಯ ಮಾಡಿದ್ದೇವೆ’ ಎಂದರು.

ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಹೆಬೂಬ ಕುಳಗೇರಿ ಮಾತನಾಡಿ, ಪುರಸಭೆಯ ಅಧಿಕಾರಿಗಳು ನೀಡುವ ಸೂಚನೆಗಳನ್ನು ವ್ಯಾಪಾರಿಗಳು ಪಾಲಿಸಬೇಕು. ಕುಟುಂಬದಲ್ಲಿ ನಾಲ್ಕೈದು ಜನರಿದ್ದರೆ ಒಬ್ಬರಿಗೆ ಒಂದು ಕಡೆ ಜಾಗ ಕೊಟ್ಟು ವ್ಯಾಪಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂಬ ಮಾತಿಗೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದು ಅದರಂತೆ ನಡೆದುಕೊಳ್ಳಬೇಕು’ ಎಂದರು.

ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಪುರಸಭೆ ಅಧಿಕಾರಿಗಳಾದ ವಿನೋದ ಝಿಂಗಾಡೆ, ಮಹಾಂತೇಶ ಕಟ್ಟಿಮನಿ, ಜಾವೇದ ನಾಯ್ಕೋಡಿ ಹಾಗೂ ಬೀದಿ ಬದಿ ವ್ಯಾಪಾರಸ್ಥರು ಇದ್ದರು.

ಪೌರ ಕಾರ್ಮಿಕರಿಂದ ದೌರ್ಜನ್ಯ

ಸಭೆಯಲ್ಲಿ ಬೀದಿ ಬದಿ ವ್ಯಾಪಾರ ಮಾಡುವ ಕೆಲ ಮಹಿಳೆಯರು ಕೆಲ ಪೌರ ಕಾರ್ಮಿಕರು ತಮ್ಮ ಮೇಲೆ ದೌರ್ಜನ್ಯ ನಡೆಸುವುದಾಗಿ ತಿಳಿಸಿದರು. ‘ನಾವು ವ್ಯಾಪಾರ ಮಾಡುವಾಗ ಕೆಲ ಪೌರಕಾರ್ಮಿಕರು ಅಧಿಕಾರಿಗಳ ಹೆಸರು ಹೇಳಿ ನಮ್ಮನ್ನು ಬೆದರಿಸುವುದು ಹೊಡೆಯುವುದು ಮಾಡುತ್ತಾರೆ’ ಎಂದು ಆರೋಪಿಸಿ ಹೂವು ಮಾರುವ ಅಜ್ಜಿಯೊಬ್ಬರು ಕಣ್ಣೀರು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.