ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಕ್ಷೇತ್ರ ಪುನರ್ವಿಂಗಡೆ ಮತ್ತು ವಾರ್ಡ್‌ವಾರು ಮೀಸಲಾತಿಯಲ್ಲಿ ಭಾರೀ ಅನ್ಯಾಯವಾಗಿದೆ ಎಂದು ಬಿಜೆಪಿ ಮಾಜಿ ಕಾರ್ಪೊರೇಟರ್‌ಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಬಹು ನಿರೀಕ್ಷಿತ ಮಹಾನಗರ ಪಾಲಿಕೆ ಚುನಾವಣೆಗೆ ರಾಜ್ಯ ಸರ್ಕಾರ ಭರದಸಿದ್ಧತೆ ನಡೆಸಿದೆ.ಈಗಾಗಲೇ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ಪೂರ್ಣಗೊಂಡಿದೆ. ಇದೀಗ ಕರಡು ಮತದಾರರ ಪಟ್ಟಿ ಹಾಗೂ ವಾರ್ಡ್‌ವಾರು ಮೀಸಲಾತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ಆಕ್ಷೇಪಣೆ ಸಲ್ಲಿಸುವ ಅವಧಿಯೂ ಮುಗಿದಿದೆ.
ಮೀಸಲಾತಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನವಾಗಿದ್ದ ಮಂಗಳವಾರದ ವರೆಗೆ 102 ಆಕ್ಷೇಪಣೆಗಳು ಸಲ್ಲಿಕೆಯಾಗಿವೆಎಂದು ನಗರ ಯೋಜನಾ ಪ್ರಾಧಿಕಾರದ ಯೋಜನಾ ನಿರ್ದೇಶಕ ರಾಜಶೇಖರ ಡಂಬಳ ‘ಪ್ರಜಾವಾಣಿ’ಗೆ ತಿಳಿಸಿದರು.
15 ಜನರಿಗೆ ತಪ್ಪಿದ ಅವಕಾಶ:
ಕ್ಷೇತ್ರ ಪುನರ್ವಿಂಗಡಣೆ ಮತ್ತು ಮೀಸಲಾತಿ ಬದಲಾವಣೆಯಿಂದ ಸುಮಾರು 15 ಜನ ಮಾಜಿ ಕಾರ್ಪೊರೇಟರ್‌ಗಳು ತಮ್ಮ ಕ್ಷೇತ್ರಗಳನ್ನು ಕಳೆದುಕೊಂಡಿದ್ದಾರೆ. ಅದರಲ್ಲೂ ಬಿಜೆಪಿಯವರದ್ದೇ ಸಿಂಹಪಾಲು!
ಮಾಜಿ ಕಾರ್ಪೊರೇಟರ್‌ಗಳಾದ ಪ್ರೇಮಾನಂದ ಬಿರಾದಾರ, ಗೋಪಾಲ ಘಟಕಾಂಬಳೆ, ಉಮೇಶ ವಂದಾಲ, ರವೀಂದ್ರ ಲೋಣಿ, ಅಬ್ದುಲ್ ರಜಾಕ್ ಹೊರ್ತಿ, ಮೈನುದ್ದೀನ್ ಬೀಳಗಿ, ಪರಶುರಾಮ ರಜಪೂತ, ಮಡಿವಾಳಪ್ಪ ಕರಡಿ, ಆನಂದ ದುಂಬಾಳೆ, ಲಕ್ಷ್ಮಿಬಾಯಿ ಕನ್ನೊಳ್ಳಿ, ಭಾಗೀರಥಿ ಬೆಲ್ಲದ, ಅಪ್ಪು ಸಜ್ಜನ, ರಾಜಶೇಖರ ದೇವಗಿರಿ, ಅಗಸಬಾಳ ಪೀರಾ ಅವರು ಮೀಸಲಾತಿ ಮತ್ತು ಪುನರ್ವಿಂಗಡೆಯ ಪರಿಣಾಮ ತಮ್ಮ ಕ್ಷೇತ್ರಗಳನ್ನು ಕಳೆದುಕೊಂಡಿರುವ ಘಟನಾಘಟಿಗಳಾಗಿದ್ದಾರೆ.
ಈ ಹಿಂದಿನ ಅವಧಿಯಲ್ಲಿ ಹೆಚ್ಚಿನ ಅನುದಾನ ತಂದು ವಾರ್ಡ್‌ಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದ ಹಾಗೂ ರಾಜಕೀಯವಾಗಿಯೂ ಪ್ರಬಲರಾಗಿದ್ದ ಮಾಜಿ ಕಾರ್ಪೊರೇಟರ್‌ಗಳಿಗೆ ಮೀಸಲಾತಿಯಲ್ಲಿ ತೀವ್ರ ಅನ್ಯಾಯವಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.
35 ವಾರ್ಡ್‌ಗಳ ಪೈಕಿ 16 ವಾರ್ಡ್‌ಗಳನ್ನು ಮಹಿಳೆಯರಿಗೆ ಮೀಸಲಿಟ್ಟಿರುವುದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ. ಅಲ್ಲದೇ, ಸಾಮಾನ್ಯ ವರ್ಗದ ಮತದಾರರು ಅಧಿಕ ಇರುವ ವಾರ್ಡ್‌ಗಳಲ್ಲಿ ಎಸ್‌ಸಿ ಮೀಸಲಾತಿ ನಿಗದಿ ಪಡಿಸಲಾಗಿದೆ ಎಂದು ಆಕ್ಷೇಪ ಎತ್ತಿದ್ದಾರೆ.
ಕ್ಷೇತ್ರ ಪುನರ್ವಿಂಗಡೆ ವೇಳೆ ಹಳೇ ವಾರ್ಡ್‌ಗಳ ಪ್ರಮುಖ ಕಾಲೊನಿ, ಬಡಾವಣೆ, ಬೀದಿಗಳು ಬೇರೊಂದು ವಾರ್ಡ್‌ನಲ್ಲಿ ಲೀನವಾಗಿ ಹಳೇ ವಾರ್ಡ್‌ಗಳು ಅಸ್ತಿತ್ವವನ್ನೇ ಕಳೆದುಕೊಂಡಿವೆ. ಹೊಸ ವಾರ್ಡ್‌ಗಳು ರೂಪುಗೊಂಡಿವೆ ಎಂದು ಮಾಜಿ ಕಾರ್ಪೊರೇಟರ್‌ಗಳು ಆರೋಪಿಸಿದ್ದಾರೆ.
ಮತ್ತೆ ಕೋರ್ಟ್ ಮೊರೆ ಸಾಧ್ಯತೆ:
ಕ್ಷೇತ್ರ ಪುನರ್ವಿಂಗಡೆ ಮತ್ತು ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂಬ ಆರೋಪ ವ್ಯಕ್ತಪಡಿಸುತ್ತಿರುವ ಅನೇಕ ಮಾಜಿ ಕಾರ್ಪೊರೇಟರ್‌ಗಳು, ಈ ಸಂಬಂಧ ಸಲ್ಲಿಸಲಾಗಿರುವ ಆಕ್ಷೇಪಣೆಗಳಿಗೆ ಸರ್ಕಾರ ಸ್ಪಂದಿಸದೇ ಇದ್ದರೆ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಹಾಲಿ, ಮಾಜಿ ಜಿದ್ದಾಜಿದ್ದು ಕಾರಣ?
ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರು ಪಾಲಿಕೆ ಕ್ಷೇತ್ರ ಪುನರ್ವಿಂಗಡಣೆ ಮತ್ತು ಮೀಸಲಾತಿ ವಿಷಯದಲ್ಲಿ ತಾ ಮೇಲು, ನಾ ಮೇಲೆ ಎಂದು ಜಿದ್ದಾಜಿದ್ದಿಗೆ ಬಿದ್ದ ಪರಿಣಾಮ ಬಿಜೆಪಿಯ ಮಾಜಿ ಕಾರ್ಪೊರೇಟರ್‌ಗಳಿಗೆ ಕ್ಷೇತ್ರಗಳು ತಪ್ಪಿದ್ದು, ಇದರ ಲಾಭ ಕಾಂಗ್ರೆಸ್‌ಗೆ ಆಗಿದೆ ಎಂಬ ವಿಶ್ಲೇಷಣೆ ನಡೆದಿದೆ.
ಅಲ್ಲದೇ, ಮೂರು ವರ್ಷಗಳಿಂದ ಪಾಲಿಕೆಗೆ ಚುನಾವಣೆ ನಡೆಯದಂತೆ ತಮ್ಮ ಹಿಂಬಾಲಕರ ಮೂಲಕ ಕೋರ್ಟ್ ಮೊರೆ ಹೋಗಿ, ನಗರದ ಅಭಿವೃದ್ಧಿ ಕುಂಟಿತವಾಗಲೂ ಕಾರಣವಾಗಿದ್ದಾರೆ ಎಂಬ ಗಂಭೀರ ಆರೋಪವೂ ವ್ಯಕ್ತವಾಗಿದೆ.
ಶಾಸಕರ ಮೇಲೆ ಹೆಚ್ಚಿದ ಒತ್ತಡ
ತಮ್ಮ ಹಳೆಯ ಕ್ಷೇತ್ರಗಳನ್ನು ಯಥಾ ರೀತಿ ಉಳಿಸಿಕೊಳ್ಳಲು ಮತ್ತುಮೀಸಲಾತಿ ಬದಲಾವಣೆ ಮಾಡಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಬಿಜೆಪಿ ಮತ್ತು ಕಾಂಗ್ರೆಸ್‌ನ ಅನೇಕ ಮಾಜಿ ಕಾರ್ಪೊರೇಟರ್‌ಗಳು ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಎಂ.ಬಿ.ಪಾಟೀಲ, ದೇವಾನಂದ ಚವ್ಹಾಣ, ಯಶವಂತರಾಯಗೌಡ ಪಾಟೀಲ ಮತ್ತು ಶಿವಾನಂದ ಪಾಟೀಲರ ಅವರ ಮೇಲೆ ಒತ್ತಡ ಹೇರಿದ್ದಾರೆ.
ಮೀಸಲಾತಿ, ಕ್ಷೇತ್ರ ಪುನರ್ವಿಂಗಣೆ ವಿಷಯದಲ್ಲಿ ಅನ್ಯಾಯವಾಗಿದೆ.ಸಮಾದಾನ, ತೃಪ್ತಿ ಇಲ್ಲ. ಉತ್ತಮ ಕೆಲಸ ಮಾಡಿರುವ ಮಾಜಿ ಕಾರ್ಪೊರೇಟರ್‌ಗಳಿಗೆ ಅವಕಾಶ ತಪ್ಪಿದೆ.
–ಪ್ರೇಮಾನಂದ ಬಿರಾದಾರ, ವಾರ್ಡ್ ನಂ.22
ಮೀಸಲಾತಿ ಬದಲಾವಣೆ, ಕ್ಷೇತ್ರ ಪುನರ್ವಿಂಗಡೆ ಆಗಿರುವುದರಿಂದ ಆಕ್ಷೇಪಣೆ ಸಹಜ. ಮರು ಪರಿಶೀಲಿಸಲು ಅವಕಾಶ ಇದೆ. ಸರ್ಕಾರ ಸರಿಪಡಿಸಬೇಕು.
–ಎಂ.ಎಸ್.ಕರಡಿ, 5ನೇ ವಾರ್ಡ್
ನನ್ನ ಮೂಲ ವಾರ್ಡ್ ಇಬ್ಬಾಗವಾಗಿದೆ. ವಾರ್ಡ್ 10 ಮತ್ತು 12ರಲ್ಲಿ ವಿಲೀನವಾಗಿದೆ. ಚುನಾವಣೆಗೆ ನಿಲ್ಲಲು ಅವಕಾಶ ಇದೆ. ಆದರೆ, ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಕ್ಷೇತ್ರವನ್ನು ಕಾರ್ಯಕರ್ತರಿಗೆ ಬಿಟ್ಟುಕೊಡಲು ತೀರ್ಮಾನಿಸಿರುವೆ
–ರವೀಂದ್ರ ಲೋಣಿ, ವಾರ್ಡ್ ನಂ.12
ಈ ಹಿಂದಿನ ಅವಧಿಯಲ್ಲಿ ವಾರ್ಡ್‌ಗಳಲ್ಲಿ ಉತ್ತಮ ಕೆಲಸ ಮಾಡಿದ್ದ ಹಾಗೂ ಜನರಿಗೆ ಸ್ಪಂದಿಸುತ್ತಿದ್ದ ಮಾಜಿ ಕಾರ್ಪೊರೇಟರ್‌ಗಳಿಗೆ ಅವಕಾಶ ಕೈತಪ್ಪಿದೆ.
–ಅಬ್ದುಲ್ ರಜಾಕ್ ಹೊರ್ತಿ, ವಾರ್ಡ್ ನಂ.32
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.