ADVERTISEMENT

ವಿಜಯಪುರ | ಹರಿಯುತ್ತಿದೆ ಹಳ್ಳ; ಕಾಣುತ್ತಿಲ್ಲ ರಸ್ತೆ

ಬಬಲೇಶ್ವರ ತಾಲ್ಲೂಕಿನ ಸಂಗಾಪುರ ಎಸ್‌.ಎಚ್‌ ಗ್ರಾಮಸ್ಥರ ರೋಧನೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 6:08 IST
Last Updated 22 ಅಕ್ಟೋಬರ್ 2024, 6:08 IST
ಬಬಲೇಶ್ವರ ತಾಲ್ಲೂಕಿನ ಸಂಗಾಪುರ ಎಸ್‌.ಎಚ್‌ ಗ್ರಾಮದ ಬಳಿ ಹರಿಯುತ್ತಿರುವ ಹಳ್ಳದ ಪಕ್ಕದ ರಸ್ತೆ ಮೇಲೆ ಕುಳಿತು ಬಟ್ಟೆಗಳನ್ನು ತೊಳೆಯುತ್ತಿರುವ ಮಹಿಳೆಯರು
ಬಬಲೇಶ್ವರ ತಾಲ್ಲೂಕಿನ ಸಂಗಾಪುರ ಎಸ್‌.ಎಚ್‌ ಗ್ರಾಮದ ಬಳಿ ಹರಿಯುತ್ತಿರುವ ಹಳ್ಳದ ಪಕ್ಕದ ರಸ್ತೆ ಮೇಲೆ ಕುಳಿತು ಬಟ್ಟೆಗಳನ್ನು ತೊಳೆಯುತ್ತಿರುವ ಮಹಿಳೆಯರು   

ವಿಜಯಪುರ: ಒಂದೆಡೆ ರಸ್ತೆ ಮೇಲೆ ಹರಿಯುತ್ತಿರುವ ಹಳ್ಳ, ಇನ್ನೊಂದೆಡೆ ಬಕೆಟ್‌ಗಳ ತುಂಬ ತಂದ ಬಟ್ಟೆಗಳನ್ನು ತೊಳೆಯುತ್ತಿರುವ ಮಹಿಳೆಯರು, ಮಕ್ಕಳ ಮೋಜಿನ ಈಜು, ಮತ್ತೊಂದೆಡೆ ಹಳ್ಳ ದಾಟಿಸಲು ಹರಸಾಹಸ ಪಡುತ್ತಿರುವ ಬೈಕ್‌ ಸವಾರ.

ಇಂಥ ದೃಶ್ಯಗಳು ಕಂಡು ಬಂದಿದ್ದು ಬಬಲೇಶ್ವರ ತಾಲ್ಲೂಕಿನ ಹಲಗಣಿ ಗ್ರಾಮ ಪಂಚಾಯಿತಿ ವ್ತಾಪ್ತಿಯ ಸಂಗಾಪುರ ಎಸ್‌.ಎಚ್‌ ಗ್ರಾಮದಿಂದ ಕಂಬಾಗಿ, ಕಾತ್ರಾಳ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ. ಹಳ್ಳಕ್ಕೆ ಮೇಲ್ಸೇತುವೆ ಇರದ ಕಾರಣ ಅನೇಕ ವರ್ಷಗಳಿಂದ ಇಲ್ಲಿನ ಗ್ರಾಮಸ್ಥರು ರೋಧನೆ ಅನುಭವಿಸುತ್ತ ದಿನ ಕಳೆಯುತ್ತಿದ್ದಾರೆ.

ರಸ್ತೆಯ ಮೇಲೆ ಹಳ್ಳದ ನೀರು ಸೂಮಾರು 3 ರಿಂದ 4 ಅಡಿ ಎತ್ತರದಲ್ಲಿ ಹರಿಯುತ್ತಿದೆ. ನೀರಿನಲ್ಲಿ ತಗ್ಗು ಗುಂಡಿಗಳಾಗಿದ್ದು, ನಿತ್ಯ ಸಣ್ಣ ಅಪಘಾತಗಳು ಸಂಭವಿಸುತ್ತಿವೆ. ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರು ಹಾಗೂ ಪಾದಾಚಾರಿಗಳು ನಿತ್ಯ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಿದ್ದಾರೆ.

ADVERTISEMENT

ನಿತ್ಯ ನೂರಾರು ಜನ ಜೀವ ಕೈಯಲ್ಲಿಡಿದು ಹಳ್ಳದ ರಸ್ತೆಯಲ್ಲಿ ಹಾದುಹೋಗುವ ಸ್ಥಿತಿ ನಿರ್ಮಾಣವಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ಬಸ್‌, ಖಾಸಗಿ ವಾಹನ, ಬೈಕ್‌ ಸವಾರರು ಈ ಹಳ್ಳದ ಮೂಲಕವೇ ಸಂಚರಿಸುತ್ತಾರೆ. ರೈತರು ತಮ್ಮ ಜಮೀನುಗಳಿಗೆ ಹೋಗಲು ಸಾಹಸ ಪಡುವಂತಾಗಿದೆ. 

ಸಂಗಾಪುರ, ಕಂಬಾಗಿ, ಕಾತ್ರಾಳ ಗ್ರಾಮಸ್ಥರು ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಸಂಬಂಧಿತ ಇಲಾಖೆಯ ಅಧಿಕಾರಿ ಇಲ್ಲಿನ ಸಮಸ್ಯೆಯ ಬಗ್ಗೆ ಪರಿಶೀಲನೆ ಮಾಡಿ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಶಾಲಾ ವಿದ್ಯಾರ್ಥಿಗಳು, ಹಳ್ಳ ದಾಟಿ ಹೊಲಗಳಿಗೆ ಹೋದ ರೈತರು, ಕೃಷಿ ಕೂಲಿಕಾರ್ಮಿಕರು ಮನೆಗೆ ಬರಲು ಬಹಳ ತೊಂದರೆ ಅನುಭವಿಸಬೇಕಾಗಿದೆ ಎನ್ನುತ್ತಾರೆ ಗ್ರಾಮಸ್ಥರು

ಹಳ್ಳಕ್ಕೆ ಸಂಪರ್ಕ ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರಿಂದ ಯಾವ ಮನವಿ ಬಂದಿಲ್ಲ ಮನವಿ ನೀಡಿದರೆ ಮುಂದಿನ ಕ್ರೀಯಾ ಯೋಜನೆಯಲ್ಲಿ ಮಾಡಿಸಲಾಗುವುದು.

-ಮುಕ್ಕಣ್ಣ ನಾಯಕ ಪಿಡಿಒ

ದಶಕಗಳಿಂದ ಸಂಪರ್ಕ ಸೇತುವೆ ಇಲ್ಲದೇ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಸೇತುವೆ ನಿರ್ಮಾಣಕ್ಕೆ ತಕರಾರು ಮಾಡುತ್ತಿರುವ ಹೊಲದ ಮಾಲಿಕರೊಂದಿಗೆ ಅಧಿಕಾರಿಗಳು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು.

-ಮಹಾದೇವ ಗಲಗಲಿ. ಸದಸ್ಯರು ಹಲಗಣಿ ಗ್ರಾ.ಪಂ 

ಹಳ್ಳಕ್ಕೆ ಅಡ್ಡಲಾಗಿ ಸಂಪರ್ಕ ಸೇತುವೆ ನಿರ್ಮಿಸಿದರೇ ಮೂರು ಗ್ರಾಮಗಳಿಗೆ ಅನುಕೂಲವಾಗಲಿದೆ. ಸಂಬಂಧಿಸಿದ ಅಧಿಕಾರಿ ಇಲ್ಲಿನ ಸಮಸ್ಯೆಯ ಬಗ್ಗೆ ಪರಿಶೀಲಿಸಿ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು

-ರಮೇಶ ಬರಗಿ ಉಪಾಧ್ಯಕ್ಷರು

ಹೊಲದ ಮಾಲೀಕರ ಸಮಸ್ಯೆ ಹಳ್ಳದ ಪಕ್ಕದಲ್ಲಿರುವ ಹೊಲದ ಮಾಲೀಕರು ರಸ್ತೆಯ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ತಕರಾರು ಮಾಡುತ್ತಿದ್ದಾರೆ. ಸೇತುವೆ ನಿರ್ಮಿಸಿದರೆ ನಮ್ಮ ಹೊಲದ ಜಾಗ ಅತಿಕ್ರಮಣವಾಗುತ್ತದೆ ಎಂದು ಆರೋಪಿಸಿ ಸೇತುವೆ ನಿರ್ಮಿಸಲು ತೊಂದರೆ ಮಾಡುತ್ತಿದ್ದಾರೆ. ಇದರಿಂದ ಅಧಿಕಾರಿಗಳು ಮೌನಕ್ಕೆ ಜಾರಿದ್ದಾರೆ  ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಿಸಿದರೇ ಸಂಗಾಪುರ ಕಂಬಾಗಿ ಕಾತ್ರಾಳ ಮೂರು ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ. ಇಲ್ಲಿನ ಅಧಿಕಾರಿಗಳಿ ಜನಪ್ರತಿನಿಧಿಗಳು ಮುತುವರ್ಜಿವಹಿಸಬೇಕು. ಹೊಲದ ಮಾಲೀಕರೊಂದಿಗೆ ಸಂಪರ್ಕ ಸಾಧಿಸಿ ಗ್ರಾಮಸ್ಥರಿಗೆ ಅನುಕೂಲ ವಾಗಲು ಮೆಲ್ಸೇತುವೆ ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರೊಬ್ಬರು ಪ್ರಜಾವಾಣಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.