ADVERTISEMENT

ಸಿಂದಗಿ | ಗೈರಾದ 5 ಜನ ಶಿಕ್ಷಕರಿಗೆ ನೊಟೀಸ್

ಯಂಕಂಚಿ ಸರ್ಕಾರಿ ಪ್ರೌಢಶಾಲೆಗೆ ತಾ.ಪಂ ಇಒ ದಿಢೀರ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 15:54 IST
Last Updated 7 ಜುಲೈ 2024, 15:54 IST
ಸಿಂದಗಿ ತಾಲ್ಲೂಕು ಯಂಕಂಚಿ ಸರ್ಕಾರಿ ಪ್ರೌಢಶಾಲೆಗೆ ಶನಿವಾರ ತಾಲ್ಲೂಕು ಪಂಚಾಯ್ತಿ ಇಒ ರಾಮೂ ಜಿ.ಅಗ್ನಿ ಹಠಾತ್ ಭೇಟಿ ನೀಡಿ ಪರಿಶೀಲಿಸಿದರು.
ಸಿಂದಗಿ ತಾಲ್ಲೂಕು ಯಂಕಂಚಿ ಸರ್ಕಾರಿ ಪ್ರೌಢಶಾಲೆಗೆ ಶನಿವಾರ ತಾಲ್ಲೂಕು ಪಂಚಾಯ್ತಿ ಇಒ ರಾಮೂ ಜಿ.ಅಗ್ನಿ ಹಠಾತ್ ಭೇಟಿ ನೀಡಿ ಪರಿಶೀಲಿಸಿದರು.   

ಸಿಂದಗಿ:ತಾಲ್ಲೂಕು ಪಂಚಾಯ್ತಿ ಇಒ ಹಠಾತ್ ಭೇಟಿ ನೀಡಿ ಶಾಲೆಗೆ ಗೈರಾದ ಶಿಕ್ಷಕರಿಗೆ ನೊಟೀಸ್‌ ನೀಡಿದ ಘಟನೆ ತಾಲ್ಲೂಕಿನ ಯಂಕಂಚಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದಿದೆ.

ಶಾಲೆ ಪ್ರಾರಂಭಗೊಳ್ಳುವ ಮುನ್ನ ಪ್ರಾರ್ಥನಾ ಸಮಯಕ್ಕೆ ಭೇಟಿ ನೀಡಿದ ಇಒ ರಾಮೂ ಜಿ.ಅಗ್ನಿ ಅವರು ಶಾಲಾ ಸಿಬ್ಬಂದಿ ಹಾಜರಾತಿ ಪರಿಶೀಲಿಸಿದಾಗ 18 ಜನ ಶಿಕ್ಷಕರಲ್ಲಿ ಮುಖ್ಯಶಿಕ್ಷಕ ಒಳಗೊಂಡಂತೆ 5 ಜನ ಶಿಕ್ಷಕರು ಬಾರದಿರುವುದು ಬೆಳಕಿಗೆ ಬಂದಿದೆ.

ನಂತರ ಶಿಕ್ಷಕರ ಸಭೆಯಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ಶಾಲಾ ಮಕ್ಕಳ ಜೀವನ ರೂಪಿಸುವಂತೆ ಇಒ ಅಗ್ನಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಗೈರಾದ ವಿಜಯಕುಮಾರ ಸಜ್ಜನ, ಅಶೋಕ ಕಂಚಗಾರ, ಎಸ್.ಆರ್.ಪೊದ್ದಾರ, ಕೆ.ಎ.ಮುಲ್ಲಾ, ಶ್ರೀಶೈಲ ಕಂಬಾರ ಈ 5 ಜನ ಶಿಕ್ಷಕರು ಹಾಗೂ ಭೀಮಸಿಂಗ್ ರಾಠೋಡ, ಪಿ.ಎ.ಗುಡಿಮನಿ ಸಿಬ್ಬಂದಿ ಗೆ ಕಾರಣ ಕೇಳಿ ನೊಟೀಸ್‌ ನೀಡಲಾಗಿದೆ.

24 ಗಂಟೆಯೊಳಗಾಗಿ ನೊಟೀಸ್‌ಗೆ ಉತ್ತರ ನೀಡುವಂತೆ ತಿಳಿಸಲಾಗಿದೆ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿಕ್ರಿಯೆ: ಶಿಕ್ಷಕ ಶ್ರೀಶೈಲ ಕಂಬಾರ ಅವರು ನಿಯಮಿತವಾಗಿ ಕರ್ತವ್ಯಕ್ಕೆ ಹಾಜರಿರುತ್ತಾರೆ. ಆದರೆ ಶನಿವಾರ ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ‘ಡಿ’ ದರ್ಜೆ ಸಿಬ್ಬಂದಿ ಪಿ.ಎ.ಗುಡಿಮನಿ ಸರಿಯಾದ ಸಮಯದಲ್ಲಿ ಶಾಲೆಯಲ್ಲಿಯೇ ಇದ್ದುಕೊಂಡು ಬೆಳಿಗ್ಗೆ ಶಾಲಾ ಕೊಠಡಿಗಳ ಸ್ವಚ್ಛತೆಯಲ್ಲಿ ತೊಡಗಿಕೊಂಡಿದ್ದರು ಎಂದು ಶಾಲಾ ಶಿಕ್ಷಕರಿಂದ ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.